Viral News| ಈ ಕುಟುಂಬದ ವಾರ್ಷಿಕ ಆದಾಯ 2 ರೂಪಾಯಿ; ಆದರೆ...

Viral Income
Published on

ಭೋಪಾಲ್​: ಒಂದು ಬಡ, ಮಧ್ಯಮ ವರ್ಗದ ಕುಟುಂಬ ನಡೆಸಲು ಕನಿಷ್ಠ ಎಂದರೆ ತಿಂಗಳಿಗೆ 5-6 ಸಾವಿರ ರೂಪಾಯಿಗಳು ಬೇಕಾಗುತ್ತದೆ. ನಾವು ಖರ್ಚು ಕಮ್ಮಿ ಮಾಡಿ ಎಷ್ಟೇ ಉಳಿಸುತ್ತೇವೆ ಎಂದರೂ ತಿಂಗಳಿಗೆ ಮಿನಿಮಮ್​ ಹಣ ಮೀಸಲಿಡಲೇಬೇಕಾಗುತ್ತದೆ. ಆದರೆ, ಮಧ್ಯಪ್ರದೇಶದಲ್ಲೊಂದು ಕುಟುಂಬ ವರ್ಷಕ್ಕೆ ಬರೀ ಎರಡು ರೂಪಾಯಿ ಸಂಪಾದಿಸುತ್ತಿದ್ದು, ಬರುವ ಹಣದಲ್ಲೇ ಜೀವನ ನಡೆಸುತ್ತಿದ್ದೀರಾ ಎಂದು ನೀವು ನಂಬುತ್ತೀರಾ. ಆಶ್ಚರ್ಯವೆನಿಸಿದರೂ ಇದು ನಿಜ.

ಈ ವರ್ಷದ ಆರಂಭದಲ್ಲಿ ಈ ಕುಟುಂಬವು ಆದಾಯ ಪ್ರಮಾಣ ಪತ್ರದಲ್ಲಿ (Income Certificate) ಎರಡು ರೂಪಾಯಿ ಇನ್​ಕಮ್​ ತೋರಿಸಿದ್ದಕ್ಕಾಗಿ ಸಖತ್​ ಸುದ್ದಿಯಾಗಿತ್ತು. ಐದು ಜನರಿರುವ ಈ ಕುಟುಂಬವು ವರ್ಷಕ್ಕೆ ಬರೀ ಎರಡು ರೂಪಾಯಿ ಸಂಪಾದನೆಯಲ್ಲಿ ಅದೇಗೆ ಜೀವನ ಸಾಗಿಸುತ್ತದೆ ಎಂದು ಹಲವರು ಆಶ್ಚರ್ಯಪಟ್ಟಿದ್ದರು. ಆದರೆ, ಇದೀಗ ಅಸಲಿ ಸಂಗತಿ ಬಯಲಾಗಿದ್ದು, ಅಧಿಕೃತ ದಾಖಲೆಯನ್ನು ಬಿಡುಗಡೆ ಮಾಡಲಾಗಿದೆ. ಈ ಸುದ್ದಿ ಸಖತ್​ ವೈರಲ್​ (Viral News) ಆಗುತ್ತಿದೆ.

ಮಧ್ಯಪ್ರದೇಶದ ಘೋಘ್ರಾ ಗ್ರಾಮದ ನಿವಾಸಿ 12ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಲರಾಮ್ ಚಾದರ್ ಅವರ ಹೆಸರಿನಲ್ಲಿ ಈ ಪ್ರಮಾಣಪತ್ರವನ್ನು ಜನವರಿಯಲ್ಲಿ ನೀಡಲಾಗಿತ್ತು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಮಾಧ್ಯಮಗಳು ಹಾಗೂ ಸ್ಥಳೀಯಾಡಳಿತ ಫ್ಯಾಕ್ಟ್​​​ಚೆಕ್​ ಮಾಡಿದ್ದು, ಇದು ಮುದ್ರಣ ದೋಷದಿಂದ ಆಗಿರುವ ಎಡವಟ್ಟು ಎಂದು ಬೆಳಕಿಗೆ ಬಂದಿದೆ.

ಈ ಕುರಿತು ಮಾತನಾಡಿರುವ ಬಲರಾಮ್ ಚಾದರ್ ಕುಟುಂಬಸ್ಥರು, ಸಾಮಾನ್ಯ ಸೇವಾ ಕೇಂದ್ರದಿಂದ ನೀಡಲಾಗಿರುವ ಆದಾಯ ಪ್ರಮಾಣಪತ್ರದಲ್ಲಿ ತಪ್ಪಾಗಿದ್ದು, ನಮ್ಮ ಕುಟುಂಬದ ವಾರ್ಷಿಕ ಆದಾಯ 40 ಸಾರಿ ರೂಪಾಯಿ ಇದೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಹ ಈ ರೀತಿ ತಪ್ಪಾಗಿ ನಮೂದಿಸಿ ಕೊಟ್ಟಿದ್ದಾರೆ. ಇದಾದ ಬಳಿಕ ಹೊಸ ಆದಾಯ ಪ್ರಮಾಣಪತ್ರವನ್ನು ನೀಡಲಾಗಿದ್ದ, ಅದರಲ್ಲಿ ಎಲ್ಲವನ್ನೂ ಸರಿಯಾಗಿ ನಮೂದಿಸಲಾಗಿದೆ ಎಂದು ಚಾದರ್​ ಕುಟುಂಬಸ್ಥರು ತಿಳಿಸಿದ್ದಾರೆ.

ಇತ್ತ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸರ್ಕಾರ ತನಿಖೆಗೆ ಆದೇಶಿಸಿದ್ದು, ವರದಿ ಸಲ್ಲಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಿದೆ. ಇತ್ತ ವಿಚಾರ ಹೊರಬರುತ್ತಿದ್ದಂತೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಲೋಪದೋಷಕ್ಕೆ ಅಧಿಕಾರಿಗಳ ತಲೆದಂಡವಾಗುವ ಸಾಧ್ಯತೆ ಹೆಚ್ಚಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net