ಸಂಸದರು 'ಕಾಣೆಯಾಗಿದ್ದಾರೆ' ಎಂದು ಪೋಸ್ಟರ್​ ಹಿಡಿದ ಕ್ಷೇತ್ರದ ಜನ!

missing
Published on

ಗುರುದಾಸ್​ಪುರ/ಮಥುರಾ : ಕರೊನಾ ಸಾಂಕ್ರಾಮಿಕ ಹರಡಿರುವ ಈ ಸಂಕಷ್ಟದ ಸಮಯದಲ್ಲಿ ಜನಪ್ರತಿನಿಧಿಗಳು ಸ್ವಕ್ಷೇತ್ರದಲ್ಲಿದ್ದು ತಮ್ಮ ಅಗತ್ಯಗಳಿಗೆ ಸ್ಪಂದಿಸಬೇಕೆಂದು ಜನ ಅಪೇಕ್ಷಿಸುವುದು ಸ್ವಾಭಾವಿಕ. ಅಂತಹುದೇ ಅಪೇಕ್ಷೆಯನ್ನು ಬಿಜೆಪಿ ಸಂಸದರಾಗಿರುವ ಬಾಲಿವುಡ್​ ನಟಿ ಹೇಮಾ ಮಾಲಿನಿ ಮತ್ತು ಪುತ್ರ ನಟ ಸನ್ನಿ ಡಿಯೋಲ್ ಬಗ್ಗೆ ಅವರ ಲೋಕಸಭಾ ಕ್ಷೇತ್ರಗಳ ನಿವಾಸಿಗಳು ವ್ಯಕ್ತಪಡಿಸಿದ್ದಾರೆ.

ಸನ್ನಿ ಡಿಯೋಲ್ ಪ್ರತಿನಿಧಿಸುವ ಪಂಜಾಬ್​ನ ಗುರುದಾಸ್​ಪುರದಲ್ಲಿ ಒಂದು ವರ್ಷದಿಂದ ಅವರು ಕಾಣಿಸಿಕೊಂಡೇ ಇಲ್ಲ ಎಂದು ಕೆಲವು ನಿವಾಸಿಗಳು ಆರೋಪಿಸಿದ್ದಾರೆ. ಅವರ ಭಾವಚಿತ್ರವನ್ನು ಹಾಕಿ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್​ಗಳನ್ನು ಮುದ್ರಿಸಿದ್ದಾರೆ. "ಕರೊನಾ ಹಾವಳಿ ಇದೆ, ರೈತರ ಪ್ರತಿಭಟನೆಯೂ ನಡೆದಿದೆ. ಆದರೆ ಸಂಸದರು ಮಾತ್ರ ಇಲ್ಲಿಗೆ ಭೇಟಿ ನೀಡದೆ ಮುಂಬೈನಲ್ಲೇ ಮೊಕ್ಕಾಂ ಹೂಡಿದ್ದಾರೆ" ಎಂದಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಮತ್ತೊಂದೆಡೆ, ಸಂಸದೆ ಹೇಮಾ ಮಾಲಿನಿ ಅವರೂ ತಮ್ಮ ಲೋಕಸಭಾ ಕ್ಷೇತ್ರವನ್ನು ಮರೆತುಬಿಟ್ಟಿದ್ದಾರೆ ಎಂದು ಮಥುರಾ ನಿವಾಸಿಗಳು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಮತ್ತೊಬ್ಬ ಸೆಲೆಬ್ರಿಟಿ ಕಾಂಗ್ರೆಸ್​ ಶಾಸಕರಾದ ಕ್ರಿಕೆಟಿಗ ನವಜೋತ್​ ಸಿಂಗ್ ಸಿಧು ಅವರು ತಮ್ಮ ವಿಧಾನಸಭಾ ಕ್ಷೇತ್ರವಾದ ಅಮೃತಸರಕ್ಕೆ ಭೇಟಿಯೇ ನೀಡುವುದಿಲ್ಲ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ವರದಿಗಳೂ ಇತ್ತೀಚೆಗೆ ಬಂದಿದ್ದವು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net