ನಿಮ್ಮ ಮಗನನ್ನು ಬಿಡಬೇಕೆಂದರೆ 40 ಸಾವಿರ ರೂ. ಕೊಡಿ; ಪಾಕ್​​​ ವಂಚಕನಿಗೆ ವ್ಯಕ್ತಿ ಕೊಟ್ಟ ಉತ್ತರ ವೈರಲ್

Cyber Crime
Published on

ಮುಂಬೈ: ಮೋಸ ಹೋಗುವವರು ಎಲ್ಲಿಯವರೆಗೂ ಇರುತ್ತಾರೋ, ಅಲ್ಲಿವರೆಗೂ ಮೋಸ ಹೋಗುವವರು ಇರುತ್ತಾರೆ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ಸೈಬರ್​ ಕ್ರೈಂ ಪ್ರಕರಣಗಳೇ ಪ್ರಮುಖ ಸಾಕ್ಷಿಯಾಗಿದೆ. ಮುಗ್ದ ಜನರ ನಂಬಿಕೆಗಳನ್ನೇ ಸೈಬರ್ ಖದೀಮರು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಇದೀಗ ವ್ಯಕ್ತಿಯೊಬ್ಬರಿಗೆ ಬಂದಿರುವ ಫೋನ್​ ಕರೆ ಸೈಬರ್​ ಖದೀಮರ ಕೃತ್ಯಕ್ಕೆ ಪ್ರಮುಖ ಸಾಕ್ಷಿಯಾಗಿದೆ.

ತಂದೆಯೊಬ್ಬರು ಮುಂಬೈ ಪೊಲೀಸ್ ಅಧಿಕಾರಿಯಂತೆ ನಟಿಸುವ ವಂಚಕನ ಜೊತೆ ಬುದ್ಧಿವಂತಿಕೆಯಿಂದ ವ್ಯವಹರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಎಲ್ಲರೂ ವ್ಯಕ್ತಿಯ ಚಾಣಾಕ್ಷ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಪಾಕಿಸ್ತಾನದ ನಂಬರ್​ನಿಂದ ವ್ಯಕ್ತಿಯೊಬ್ಬರಿಗೆ ವಾಟ್ಸ್​ಆ್ಯಪ್​ನಲ್ಲಿ ಕರೆ ಬರುತ್ತದೆ. ಮೊದಲಿಗೆ ನಂಬರ್​ ಕಂಡು ಭಯಭೀತರಾದ ವ್ಯಕ್ತಿ ಇದನ್ನು ವಿಡಿಯೋ ಮಾಡಿಕೊಳ್ಳುತ್ತಾರೆ. ಕರೆ ಸ್ವೀಕರಿಸಿದಾಗ ಮಾತನಾಡುವ ಖದೀಮ ನಿಮ್ಮ ಮಗ ಆಯುಷ್​ ಹಾಗೂ ಆತನ ಸ್ನೇಹಿತರು ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಆತನನ್ನು ಬಂಧಿಸಲಾಗಿದೆ. ನಿಮ್ಮ ಮಗ ನಮ್ಮ ಸುಪರ್ದಿಯಲ್ಲಿದ್ದು, ಆತ ನಿಮ್ಮೊಂದಿಗೆ ಮಾತನಾಡುತ್ತಾನೆ ನೋಡಿ ಎಂದು ಹೇಳುತ್ತಾನೆ.

ಬಳಿಕ ವ್ಯಕ್ತಿಯೊಬ್ಬ ಅಳುತ್ತಾ ಪಪ್ಪಾ ನನ್ನನ್ನು ಬಿಡಿಸು ಎಂದು ಗೋಗರೆಯುತ್ತಾನೆ. ನಿಮ್ಮ ಮಗನನ್ನು ಬಿಡಬೇಕೆಂದರೆ ಈ ಕೂಡಲೇ 40 ಸಾವಿರ ರೂಪಾಯಿ ಪಾವತಿಸಿ ಎಂದು ಖದೀಮ ಹೇಳುತ್ತಾನೆ. ಇದಕ್ಕೆ ಉತ್ತರಿಸುವ ವ್ಯಕ್ತಿ ನಾಲ್ಕು ಲಕ್ಷ ಬೇಡವಾ ಎಂದು ಖದೀಮನಿಗೆ ಪ್ರಶ್ನಿಸಿ ಕರೆಯನ್ನು ಕಟ್​​ ಮಾಡುತ್ತಾರೆ. ವಂಚಕ ಮತ್ತು ತಂದೆಯ ನಡುವಿನ ದೂರವಾಣಿ ಸಂಭಾಷಣೆಯ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

+92 ಸಂಖ್ಯೆಗಳಿಂದ ನಿಮಗೆ ವಾಟ್ಸ್​ಆ್ಯಪ್​ನಲ್ಲಿ ಕರೆ ಬಂದರೆ ಅದನ್ನು ಸ್ವೀಕರಿಸಲು ಹೋಗಬೇಡಿ. ಕೂಡಲೇ ನಿಮ್ಮ ಹತ್ತಿರದ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿ. ಇಲ್ಲವಾದಲ್ಲಿ ನಿಮಗೆ ಅಪಾಯವಾಗಲಿದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net