

ಹೈದರಾಬಾದ್: ವಿಶ್ವದ ಮಿಲಿಯನ್ ಡಾಲರ್ ಟೂರ್ನಿಗಳಲ್ಲಿ ಒಂದಾದ ಐಪಿಎಲ್ ಮುಕ್ತಾಯಗೊಂಡು ತಿಂಗಳುಗಳಾಗುತ್ತ ಬಂದರೂ ಕೆಲವರು ಈಗಲೂ ಅದರ ಗುಂಗಿನಿಂದ ಹೊರಬಂದಿಲ್ಲ. ಮೇ 26ರಂದು ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್), ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ತಂಡವನ್ನು ಸೋಲಿಸುವ ಮೂಲಕ ಮೂರನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯಿತು. ಐಪಿಎಲ್ ಮೂಲಕ ಹಲವು ನವ ಹಾಗೂ ಉದಯೋನ್ಮುಖ ಆಟಗಾರರು ತಮ್ಮ ಪ್ರತಿಭೆಯನ್ನು ಹೊರಹಾಕಿದ್ದು, ರಾಷ್ಟ್ರೀಯ ತಂಡದಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
17ನೇ ಆವೃತ್ತಿಯ ಐಪಿಎಲ್ನಲ್ಲಿ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಸನ್ರೈಸರ್ಸ್ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು. ಇನ್ನೂ ತಂಡದ ಪರ ಕಣಕ್ಕಿಳಿದ ಯುವ ಆಲ್ರೌಂಡರ್ ನಿತೀಶ್ ರೆಡ್ಡಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಭರವಸೆಯ ಆಟಗಾರ ಎನ್ನಿಸುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದಲ್ಲದೆ ಉದಯೋನ್ಮುಖ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಈ ಆಟಗಾರ ಇದೀಗ ಹೇಳಿಕೆಯೊಂದನ್ನು ನೀಡುವ ಮೂಲಕ ಸುದ್ದಿಯಾಗಿದ್ದು, ತೀವ್ರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ನಿತೀಶ್ ರೆಡ್ಡಿ, ರಾಷ್ಟ್ರೀಯ ತಂಡದ ಪರ ಆಡಲು ಅವಕಾಶ ಸಕ್ಕಿರುವುದು ನನಗೆ ತುಂಬಾ ಖುಷಿ ನೀಡಿದ್ದು, ಮುಂದಿನ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ ಅವರ ಸ್ಥಾನವನ್ನು ತುಂಬುತ್ತೇನೆ ಎಂಬ ವಿಶ್ವಾಸ ನನಗಿದೆ. ನನಗೆ ಕ್ರಿಕೆಟ್ ಆಡಲು ವಿರಾಟ್ ಕೊಹ್ಲಿ ಅವರೇ ಮುಖ್ಯ ಸ್ಪೂರ್ತಿ ಎಂದು ಹೇಳಲು ಇಷ್ಟಪಡುತ್ತೇನೆ.
ಉತ್ತಮ ಪ್ರದರ್ಶನ ನೀಡುವ ಯುವ ಆಟಗಾರರಿಗೆ ಪ್ರಗತಿಯಾಗಿರುವುದು ನನಗೆ ಖುಷಿ ತಂದಿದೆ. ರೋಹಿತ್ ಭಾಯ್ (ರೋಹಿತ್ ಶರ್ಮಾ), ವಿರಾಟ್ ಭಾಯ್ (ವಿರಾಟ್ ಕೊಹ್ಲಿ) ಮತ್ತು ಜಡ್ಡು ಭಾಯ್ (ರವೀಂದ್ರ ಜಡೇಜಾ) ಅವರ ನಿವೃತ್ತಿಯ ನಂತರ ಯುವ ಆಟಗಾರರಿಗೆ ಅವಕಾಶಗಳಿವೆ. ಯುವ ಆಟಗಾರರು ಅದನ್ನು ಹೆಚ್ಚು ಸದುಪಯೋಗಪಡಿಸಿಕೊಳ್ಳಬೇಕು ಎಂದು ನಿತೀಶ್ ರೆಡ್ಡಿ ಹೇಳಿದ್ದಾರೆ.