ಐದು ಹಳ್ಳಿಗಳ ಜನರು ದಿಕ್ಕೆಟ್ಟು ಓಡಿದ್ದೇಕೆ? ನಿಂತಲ್ಲಿ, ಕುಳಿತಲ್ಲಿಯೇ ಪ್ರಜ್ಞೆ ತಪ್ಪಿದ್ದೇಕೆ?

LG polymers factory
Published on

ವಿಶಾಖಪಟ್ಟಣ: ಗುರುವಾರದ ಬೆಳಗಿನ ಹಳ್ಳಿಯ ಜನರಿಗೆ ಎಂದಿನಂತಿರಲಿಲ್ಲ. ಅಸಹನೀಯ ವಾಸನೆಯೇ ಅವರನ್ನೆಲ್ಲ ಎಬ್ಬಿಸಿತ್ತು. ಅದನ್ನೂ ಸಹಿಸಿಕೊಂಡು ಮಲಗಿದವರಿಗೆ ಉಸಿರಾಟವೇ ನಿಂತಂತೆನಿಸಿ ಮಲಗಿದ್ದಲ್ಲಿ ಒದ್ದಾಡಿದರು. ಮನೆಯಿಂದ ಹೊರಬಂದವರು ನಿಂತಲ್ಲಿಯೇ ಕುಸಿದರು....

ವಿಷಾನಿಲ ದುರಂತ ಸಂಭವಿಸಿರುವ ಎಲ್​ಜಿ ಪಾಲಿಮರ್ಸ್​ ಫ್ಯಾಕ್ಟರಿ ಇರುವ ಗೋಪಾಲಟ್ಟಣಂನಲ್ಲಿ ಜನರು ಬೆಳ್ಳಂಬೆಳಗ್ಗೆ ಅನುಭವಿಸಿದ ಸಂಕಷ್ಟವಿದು. ಇಷ್ಟು ಮಾತ್ರವಲ್ಲ, ಸುತ್ತಲಿನ ಹಲವು ಗ್ರಾಮಗಳ ಜನರು ಇಂಥದ್ದೇ ಅನುಭವಕ್ಕೊಳಗಾದರು. ಮನೆಯಿಂದ ಹೊರಬಂದರೂ, ಉಸಿರಾಡಲು ಸಾಧ್ಯವಾಗದಷ್ಟು ತೊಂದರೆ. ದುರ್ವಾಸನೆ ತಡೆಯೋಕಾಗದೇ ಮನೆಗಳಿಂದ ದೂರ ಹೋದರೂ ತಡೆಯೋಕಾಗಲಿಲ್ಲ. ಕಣ್ಣು ಮಾತ್ರವಲ್ಲ, ಚರ್ಮದಲ್ಲೂ ಉರಿ ಕಂಡುಬಂತು. ಜನರು ದಿಕ್ಕೆಟ್ಟು ಓಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

ಬೆಳಗಿನ ಜಾವವೇ ಅನಿಲ ದುರಂತ ಸಂಭವಿಸಿದ್ದರಿಂದ ಏನಾಗುತ್ತಿದೆ ಎಂಬುದು ಯಾರ ಗಮನಕ್ಕೂ ಬಂದಿರಲಿಲ್ಲ. ಹೀಗಾಗಿ ಸಹಾಯಕ್ಕೂ ಯಾರನ್ನೂ ಕೂಗುವಂತಿರಲಿಲ್ಲ. ರಸ್ತೆಗಳಲ್ಲಿ ನೂರಾರು ಜನರು ಪ್ರಜ್ಞೆ ತಪ್ಪಿ ಬಿದ್ದಿದ್ದರು.

ಐದು ಹಳ್ಳಿಗಳ ಜನರ ತೆರವು: ಆರ್​ಆರ್​ವಿ ಪುರಂ, ವೆಂಕಟಾಪುರಂ, ಬಿ.ಸಿ. ಕಾಲನಿ, ಪದ್ಮಪುರಂ, ಕಾಂಪಾರಪಾಳ್ಯಂನ ಜನರನ್ನು ಹಳ್ಳಿಗಳಿಂದ ತೆರವು ಮಾಡಲಾಗುತ್ತಿದೆ. ಕಾರ್ಖಾನೆ ಸುತ್ತಲಿನ ಐದು ಕಿ.ಮೀ.ವರೆಗೂ ಅಸಹನೀಯ ದುರ್ವಾಸನೆ ಹಬ್ಬಿತ್ತು. ಕಾರ್ಖಾನೆಯಿಂದ ಮೂರು ಕಿ.ಮೀ ವ್ಯಾಪ್ತಿಯೊಳಗಿರುವ ಜನರು ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆರಂಭದಲ್ಲಿ ಪರಿಹಾರ ಪಡೆ ಸಿಬ್ಬಂದಿಗೆ ಫ್ಯಾಕ್ಟರಿ ಇರುವ ಹಳ್ಳಿಗೂ ತೆರಳಲು ಸಾಧ್ಯವಾಗಿರಲಿಲ್ಲ.

ದುರಂತ ಸಂಭವಿಸಿದ್ದು ಹೇಗೆ?: ಲಾಕ್​ಡೌನ್​ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕಾರ್ಖಾನೆಯನ್ನು ಮರು ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿತ್ತು. ಇದಕ್ಕಾಗಿ ರಾತ್ರಿ ಪಾಳಿಯಲ್ಲಿ 15 ಜನರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಬೆಳಗ್ಗೆ ಇನ್ನಷ್ಟು ಜನರು ಸೇರಿಕೊಂಡಿದ್ದರು. ಸ್ಟೈರೀನ್​ ಅನಿಲವಿರುವ ಟ್ಯಾಂಕ್​ನಲ್ಲಿ ಸೋರಿಕೆ ಉಂಟಾಗಿದೆ ಎಂದು ಆಂಧ್ರಪ್ರದೇಶದ ಕೈಗಾರಿಕಾ ಸಚಿವ ಎಂ. ಗೌತಮ್​ ರೆಡ್ಡಿ ಹೇಳಿದ್ದಾರೆ.

ಸದ್ಯ ಹತ್ತು ಜನರು ಮೃತಪಟ್ಟಿದ್ದು, 20 ಜನರನ್ನು ವಿವಿಧ ಆಸ್ಪತ್ರೆಗಳಲ್ಲಿ ವೆಂಟಿಲೇಟರ್​ನಲ್ಲಿ ಇಡಲಾಗಿದೆ. 246 ಜನರ ಸ್ಥಿತಿ ಗಂಭೀರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net