

ನವದೆಹಲಿ: ಆರ್ಥಿಕ ಸಂಕಷ್ಟದಿಂದ ತೀವ್ರವಾಗಿ ಕಂಗೆಟ್ಟಿರುವ ಪಾಕಿಸ್ತಾನ ವಿಶ್ವದ ಮುಂದೆ ಬೆತ್ತಲಾದರೂ ತನ್ನ ನರಿ ಬುದ್ದಿಯನ್ನು ಬಿಟ್ಟು ಬಾಳುವುದು ದೂರದ ಮಾತಾಗಿದೆ. ಸದಾ ಭಾರತದ ಕುರಿತಾಗಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಸದಾ ಟೀಕೆಗೆ ಗುರಿಯಾಗುವ ಪಾಕಿಸ್ತಾನದ ಮಾಜಿ ಮತ್ತು ಹಾಲಿ ಸಚಿವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಈ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ರನ್ನು ಹೊಗಳಿ ರಾಜಕೀಯ ಬಿರುಗಾಳಿ ಸೃಷ್ಟಿಸಿದ ಪಾಕಿಸ್ತಾನಿ ನಾಯಕ ಫವಾದ್ ಚೌಧರಿ ಪಾಕಿಸ್ತಾನದ ಪ್ರತಿಯೊಬ್ಬರೂ ನರೇಂದ್ರ ಮೋದಿ ಅವರನ್ನು ಸೋಲಿಸಬೇಕೆಂದು ಬಯಸುತ್ತಾರೆ ಎಂದು ಹೇಳಿದ್ದಾರೆ. ಇದು ಸಾಕಷ್ಟು ಖಂಡನೆಗೆ ಗುರಿಯಾಗಿದ್ದು, ಪಾಕ್ ನಾಯಕನಿಗೂ ಭಾರತದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಗೂ ಏನು ಸಂಬಂಧ ಎಂದು ಹಲವರು ಪ್ರಶ್ನಿಸಿದ್ದಾರೆ.
ಈ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಸೋಲು ಅವಶ್ಯಕವಾಗಿದೆ. ಭಾರತ ಮತ್ತು ಪಾಕಿಸ್ತಾನ ಎರಡರಲ್ಲೂ ಉಗ್ರವಾದವನ್ನು ಸೋಲಿಸಿದಾಗ ಭಾರತ ಮತ್ತು ಪಾಕಿಸ್ತಾನ ಹತ್ತಿರವಾಗಬಹುದು. ಪಾಕಿಸ್ತಾನದಲ್ಲಿ ಭಾರತದ ಬಗ್ಗೆ ಯಾವುದೇ ದ್ವೇಷವಿಲ್ಲ. ಆದರೆ ಬಿಜೆಪಿ-ಆರ್‌ಎಸ್‌ಎಸ್ ಸಿದ್ಧಾಂತವು ಪಾಕಿಸ್ತಾನದ ಬಗ್ಗೆ ದ್ವೇಷವನ್ನು ಹರಡುತ್ತಿದೆ. ಭಾರತೀಯ ಮತದಾರರು ಮೂರ್ಖರಲ್ಲ. ಹಿಂದೂಸ್ತಾನ್ ಪ್ರಗತಿಪರ ದೇಶವಾಗಿ ಮುಂದುವರಿಯಬೇಕು ಎಂದು ಹೇಳಿದ್ದಾರೆ.
ನಾನು ಉಗ್ರರ ವಿರುದ್ಧ ನಿಲ್ಲುವ ಯಾರನ್ನೇ ಆದರೂ ಬೆಂಬಲಿಸುತ್ತೇನೆ. ಮೋದಿ ದ್ವೇಷ ಮತ್ತು ಉಗ್ರವಾದದ ಸಂಕೇತವಾಗಿದ್ದಾರೆ. ಹಿಂದೂ ಮಹಾಸಭಾದ ಉದಯದಿಂದಾಗಿ ಭಾರತದ ಮುಸ್ಲಿಮರು ತೀವ್ರ ದ್ವೇಷವನ್ನು ಎದುರಿಸುತ್ತಿದ್ದಾರೆ, ಪಾಕ್ ಸಂಸ್ಥಾಪಕರು ಭಾರತದಲ್ಲಿ ವಾಸಿಸುತ್ತಿರುವ ಮುಸ್ಲಿಮರ ಹಕ್ಕುಗಳಿಗಾಗಿ ನಿಲ್ಲುತ್ತೇನೆ. ಪಾಕ್ ಸರ್ಕಾರಕ್ಕೆ ಇದರಲ್ಲಿ ಯಾವುದೇ ಪಾತ್ರವಿಲ್ಲ. ಆದರೆ ಭಾರತದಲ್ಲಿ ಮುಸ್ಲಿಂ ಹಕ್ಕುಗಳಿಗಾಗಿ ನಾನು ಯಾವುದೇ ಸಾಮರ್ಥ್ಯದಲ್ಲಿ ಮಾತನಾಡುತ್ತೇನೆ. ಒಂದು ಅಂಶವೆಂದರೆ ದ್ವೇಷದ ಶಕ್ತಿಗಳನ್ನು ಸೋಲಿಸಬೇಕು ಮತ್ತು ದ್ವೇಷ ಮತ್ತು ಉಗ್ರವಾದದ ಆರೆಸ್ಸೆಸ್-ಬಿಜೆಪಿಯನ್ನು ಸೋಲಿಸಬೇಕು. ಅವರನ್ನು ಸೋಲಿಸಿದವರು ಜಾಗತಿಕ ಗೌರವವನ್ನು ಗಳಿಸುತ್ತಾರೆ.
ರಾಹುಲ್ ಗಾಂಧಿಯಾಗಲಿ, ಅರವಿಂದ್ ಕೇಜ್ರಿವಾಲ್ ಆಗಲಿ ಅಥವಾ ಮಮತಾ ಬ್ಯಾನರ್ಜಿಯಾಗಲಿ ಮೋದಿಯನ್ನು ಸೋಲಿಸುವವರಿಗೆ ನನ್ನ ಶುಭಾಶಯಗಳು. ಪ್ರತಿಪಕ್ಷಗಳಿಗೆ ಬೆಂಬಲ ನೀಡುವ ಮೂಲಕ ಪಾಕಿಸ್ತಾನದ ಪ್ರತಿಯೊಬ್ಬರೂ ನರೇಂದ್ರ ಮೋದಿ ಅವರನ್ನು ಸೋಲಿಸಬೇಕೆಂದು ಬಯಸುತ್ತಾರೆ ಎಂದು ಪಾಕ್ನ ಮಾಜಿ ಸಚಿವ ಫವಾದ್ ಚೌಧರಿ ಹೇಳಿದ್ದಾರೆ.
ಲೋಕಸಭೆ ಚುನಾವಣೆಯ 7ನೇ ಹಂತದ ಮತದಾನ ನಡೆಯುತ್ತಿರುವಾಗಲೇ ಪಾಕ್ನ ಮಾಜಿ ಸಚಿವ ಫವಾದ್ ಚೌಧರಿ ಹೇಳಿಕೆ ಸಖತ್ ವೈರಲ್ ಆಗಿದ್ದು, ಭಾರತದ ಆಂತರಿಕ ವಿಚಾರವಾಗಿ ಮಾತನಾಡಲು ಇವರಿಗೆ ಏನು ಸಂಬಂಧ ಎಂದು ಹಲವರು ಪ್ರಶ್ನಿಸಿದ್ದಾರೆ. ಇತ್ತ ಫವಾದ್ ಹೇಳಿಕೆ ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.