ಪಾಕಿಸ್ತಾನವನ್ನು ಭಾರತ ಸೋಲಿಸುವುದು ಕನ್ಫರ್ಮ್​; ಪಾಕ್ ಮಾಜಿ ಕ್ರಿಕೆಟಿಗನ ಭವಿಷ್ಯವಾಣಿ ವೈರಲ್

India Pakistan
Published on

ನವದೆಹಲಿ: ಚುಟುಕು ವಿಶ್ವ ಸಮರ ಆರಂಭಕ್ಕೆ ಕೌಂಟ್​ಡೌನ್​ ಶುರುವಾಗಿದ್ದು, ಜೂನ್​ 02ರಂದು 9ನೇ ಆವೃತ್ತಿಯ ಟಿ20 ವಿಶ್ವಕಪ್​ಗೆ ವಿದ್ಯುಕ್ತ್​ ಚಾಲನೆ ದೊರೆಯಲಿದೆ. ಈ ಬಾರಿಯ ಟೂರ್ನಿಯಲ್ಲಿ 20 ದೇಶಗಳು ಭಾಗಿಯಾಗುತ್ತಿದ್ದು, ತಂಡಗಳ ನಡುವೆ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದಾಗಿದೆ. ಟೂರ್ನಿ ಆರಂಭದ ಮೊದಲ ವಾರದಲ್ಲೇ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಕದನ ನಡೆಯಲಿದ್ದು, ಕ್ರೀಡಾಭಿಮಾನಿಗಳು ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದಾರೆ.

ಈ ಎರಡು ತಂಡಗಳ ಕಾಳಗದಲ್ಲಿ ಯಾವ ತಂಡ ಗೆಲ್ಲಲಿದೆ ಎಂಬ ಚರ್ಚೆಗಳು ಈಗಾಗಲೇ ಶುರುವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ನೀಡಿರುವ ಹೇಳಿಕೆ ಸಖತ್​ ವೈರಲ್​ ಆಗುತ್ತಿದೆ. ಭಾರತದ ಪರ ಪಾಕ್​ನ ಮಾಜಿ ಕ್ರಿಕೆಟಿಗರೊಬ್ಬರು ಹೇಳಿಕೆ ನೀಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪಾಕ್​ನ ಕ್ರಿಕೆಟ್​ ತಂಡದ ಮಾಜಿ ವಿಕೆಟ್​ ಕೀಪರ್​, ಬ್ಯಾಟ್ಸ್​ಮನ್​ ಕಮ್ರಾನ್​ ಅಕ್ಮಲ್​ ವಿರುದ್ಧ ಅಲ್ಲಿನ ಅಭಿಮಾನಿಗಳು ಕಿಡಿಕಾರಿದ್ದಾರೆ.

ಇನ್​​ಸ್ಟಾಗ್ರಾಮ್​ನ ಕ್ರಿಯೇಟ್​ ಮೋಡ್​ನಲ್ಲಿ ಅಭಿಮಾನಿಯೊಬ್ಬರು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಯಾರು ಗೆಲ್ತಾರೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಕಮ್ರಾನ್​ ಖಂಡಿತವಾಗಿಯೂ ಭಾರತ ಗೆಲ್ಲುತ್ತದೆ. ಯಾವುದೇ ಅನುಮಾನ ಬೇಡ ಎಂದು ಉತ್ತರಿಸಿದ್ದಾರೆ. ಪಾಕಿಸ್ತಾನ ತಂಡಕ್ಕೆ ಟೀಮ್ ಇಂಡಿಯಾವನ್ನು ಸೋಲಿಸಲಾಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

Kamran-Akmal

ಬಳಿಕ ಇದಕ್ಕೆ ಕಾರಣ ನೀಡಿದ ಕಮ್ರಾನ್​ ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ​ ಕ್ರಿಕೆಟ್‌ನ ಮಟ್ಟ ಎಲ್ಲರಿಗೂ ತಿಳಿದಿದೆ. ನಾವು ಐರ್ಲೆಂಡ್‌ನಂತಹ ಸಣ್ಣ ತಂಡಗಳ ವಿರುದ್ಧ ಸೋಲುತ್ತಿದ್ದೇವೆ. ನ್ಯೂಜಿಲೆಂಡ್​, ದಕ್ಷಿಣ ಆಫ್ರಿಕಾ ಮತ್ತು ಇತರ ಯಾವುದೇ ತಂಡವಾಗಿದ್ದರೆ ಪರವಾಗಿಲ್ಲ ಎನ್ನಬಹುದು. ಆದರೆ ಸಣ್ಣ ಪುಟ್ಟ ತಂಡಗಳ ವಿರುದ್ಧ ಮುಗ್ಗರಿಸುತ್ತಿರುವ ಪಾಕಿಸ್ತಾನ  ಭಾರತದ ವಿರುದ್ಧದ ಗೆಲ್ಲುತ್ತದೆ ಎಂದು ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಭಾರತೀಯ ಆಟಗಾರರು ಐಪಿಎಲ್ ಮುಗಿಸಿ ಬಂದಿದ್ದಾರೆ. ಐಪಿಎಲ್‌ನಲ್ಲಿ ಅತ್ಯುತ್ತಮ ಬೌಲರ್‌ಗಳು ಮತ್ತು ಬ್ಯಾಟರ್‌ಗಳು 40 ರಿಂದ 50 ಸಾವಿರ ಪ್ರೇಕ್ಷಕರ ಮುಂದೆ ಪ್ರದರ್ಶನ ನೀಡಿ ಬಂದಿದ್ದಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅಂದರೆ ಅಲ್ಲಿ ಆಡುವುದು ಕಠಿಣ ಕ್ರಿಕೆಟ್ ಮತ್ತು ಗುಣಮಟ್ಟದ ಕ್ರಿಕೆಟ್. ಇಂತಹ ಎಲ್ಲಾ ತಯಾರಿಗಳೊಂದಿಗೆ ಬಂದಿರುವ ಭಾರತ ತಂಡವು ಪಾಕಿಸ್ತಾನವನ್ನು ಸೋಲಿಸುವುದರಲ್ಲಿ ಅನುಮಾನವೇ ಬೇಡ ಎಂದು ಹೇಳಿದ್ದಾರೆ.

ಇತ್ತ ಕಮ್ರಾನ್​ ಅಕ್ಮಲ್​ ನೀಡಿರುವ ಹೇಳಿಕೆ ವ್ಯಾಪಕ ಚರ್ಚೆಗ ಆಸ್ಪದ ಮಾಡಿಕೊಟ್ಟಿದ್ದು, ಪರ-ವಿರೋಧದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಪಂದ್ಯ ಶುರುವಾಗುವುದಕ್ಕೂ ಮುನ್ನ ಸೋಲೊಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ಭಾರತದ ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ. ಪಾಕ್ ಅಭಿಮಾನಿಗಳು ಮಾಜಿ ಕ್ರಿಕೆಟಿಗನ ಹೇಳಿಕೆಗೆ ಭಾರೀ ವಿರೋಧ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಪ್ರಸ್ತುತ ಪಾಕಿಸ್ತಾನ ತಂಡದ ಪ್ರದರ್ಶನ ಗಮನಿಸಿದರೆ ಅಕ್ಮಲ್ ಅವರ ಮಾತು ನಿಜವಾಗಲಿದೆ ಎಂದು ಕಮೆಂಟ್​ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net