

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ಸುಂದರ್ ಇತ್ತೀಚಿನ ವರ್ಷಗಳಲ್ಲಿ ನಟನೆಯಿಂದ ಕೊಂಚ ದೂರ ಉಳಿದಿದ್ದು, ಚಿತ್ರ ನಿರ್ಮಾಣ ಹಾಗೂ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚಿಗೆ ಅವರ ನಿರ್ಮಾಣದ ಅರನ್ಮನೈ-4 100 ಕೋಟಿ ಕ್ಲಬ್ ಗಳಿಸಿದ್ದು, ಮೇಕಿಂಗ್ ವಿಚಾರವಾಗಿ ಚಿತ್ರ ಸಾಕಷ್ಟು ಸದ್ದು ಮಾಡಿತ್ತು. ಈ ವೇಳೆ ಮಾತನಾಡಿದ್ದ ಅವರು ಆ ರೀತಿಯ ಸಿನಿಮಾಗಳಿಗೆ ದಕ್ಷಿಣದಲ್ಲಿ ಬೇಡಿಕೆಯೇ ಇಲ್ಲ ಎಂದು ಹೇಳಿದ್ದಾರೆ.
ಅರನ್ಮನೈ-4 ಚಿತ್ರ 100 ಕೋಟಿ ಕ್ಲಬ್ ಸೇರಿದ ಬೆನ್ನಲ್ಲೇ ಚಿತ್ರತಂಡ ಸಕ್ಸಸ್ ಪಾರ್ಟಿ ಆಯೋಜಿಸಿತ್ತು. ಈ ವೇಳೆ ಮಾತನಾಡಿದ ನಟಿ ಖುಷ್ಬೂ ನನಗೂ ಡಾರ್ಲಿಂಗ್ಸ್, ಬದಾಯಿ ಹೋ, ಕ್ರ್ಯೂ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡುವ ಆಸೆ ಇದೆ. ಆದರೆ, ದಕ್ಷಿಣ ಭಾರತದಲ್ಲಿ ಆ ರೀತಿಯ ಸಿನಿಮಾಗಳಿಗೆ ಹೆಚ್ಚಿನ ಬೇಡಿಕೆ ಇಲ್ಲ. ದಕ್ಷಿಣದಲ್ಲಿ ಈ ರೀತಿಯ ಮಲ್ಟಿಪ್ಲೆಕ್ಸ್ ಆಡಿಯನ್ಸ್ಗಳು ಹುಟ್ಟಿಕೊಂಡಿಲ್ಲ. ಬದಾಯಿ ಹೋ ಚಿತ್ರವನ್ನು ತಮಿಳಿಗೆ ರಿಮೇಕ್ ಮಾಡಲಾಗಿತ್ತು. ಆದರೆ, ಚಿತ್ರ ಗೆದ್ದಿಲ್ಲ.
ಇದಕ್ಕೆ ಇನ್ನೂ ಸಮಯ ಬೇಕಾಗುತ್ತದೆ. ಸಿನಿಮಾಗಳನ್ನು ಮಾಡುವ ವಿಧಾನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಹೀರೋಗಳಿಂದ ಬಿಸ್ನೆಸ್ ಆಗುತ್ತದೆ ಎನ್ನುವ ಮನಸ್ಥಿತಿ ಇನ್ನೂ ಇದೆ. ಇದರ ಜೊತೆಗೆ ನಟಿಯರು ಕೂಡ ಪ್ರಮುಖ ಪಾತ್ರ ವಹಿಸಿ ಮಿರಾಕಲ್ಗಳನ್ನು ಮಾಡಬಹುದಾಗಿದೆ. ಹಾಗೆಂದ ಮಾತ್ರಕ್ಕೆ ಮಹಿಳೆಯನ್ನು ಕೆಟ್ಟ ರೀತಿಯಲ್ಲಿ ತೋರಿಸಬೇಕಾಗಿಲ್ಲ. ನನಗೂ ಕಮರ್ಷಿಯಲ್ ಚಿತ್ರಗಳನ್ನು ನಿರ್ಮಿಸಬೇಕೆಂದ ಆಸೆ ಇದೆ. ಹಾಗೆಂದ ಮಾತ್ರಕ್ಕೆ ಸುಮ್ಮನೇ ಬಂಡವಾಳ ಹೂಡಲು ಸಾಧ್ಯವಿಲ್ಲ ಎಂದು ನಟಿ ಖುಷ್ಬೂ ಸುಂದರ್ ಹೇಳಿದ್ದಾರೆ.
ದಿ ಬರ್ನಿಂಗ್ ಟ್ರೇನ್ ಚಿತ್ರದಲ್ಲಿ ನಟಿಸುವ ಮೂಲಕ ಬಾಲ ಕಲಾವಿದೆಯಾಗಿ ಚಿತ್ರರಂಗ ಪ್ರವೇಶಿಸಿದ ಖುಷ್ಬೂ ಸುಂದರ್ ಆ ಬಳಿಕ ಅವರು ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರಿಗೆ ಕರ್ನಾಟಕದಲ್ಲಿ ಅಪಾರ ಅಭಿಮಾನಿ ಬಳಗವಿದೆ.