

ನವದೆಹಲಿ: ಜೂನ್ 02ರಿಂದ ಆರಂಭವಾಗಲಿರುವ ಟಿ-20 ವಿಶ್ವಕಪ್ಗೆ ದಿನಗಣನೆ ಆರಂಭವಾಗಿದ್ದು, ಕ್ರೀಡಾಭಿಮಾನಿಗಳು ಚುಟುಕು ವಿಶ್ವಸಮರವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಯುಎಸ್ಎ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯಲಿರುವ ಚುಟುಕು ವಿಶ್ವಸಮರದಲ್ಲಿ ಟೀಮ್ ಇಂಡಿಯಾ ಜೂನ್ 01ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದ್ದು, ಇದಕ್ಕೂ ಮುನ್ನ ರೋಹಿತ್ ಶರ್ಮಾ ಕುರಿತು ಮಾಜಿ ನಾಯಕರೊಬ್ಬರು ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.
ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಶಕೀಬ್ ಹಸನ್ ಈ ಹೇಳಿಕೆ ನೀಡಿದ್ದು, ಹಲವರನ್ನು ಹುಬ್ಬೇರುವಂತೆ ಮಾಡಿದೆ. ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯಕ್ಕೂ ಮುನ್ನ ಈ ಹೇಳಿಕೆ ನೀಡಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಟೀಮ್ ಇಂಡಿಯಾಗೆ ಏಕಾಂಗಿಯಾಗಿ ಮ್ಯಾಚ್ ಗೆಲ್ಲಿಸಿಕೊಡುವ ಶಕ್ತಿ ಇದ್ದರೆ ನನ್ನ ಪ್ರಕಾರ ಅದು ರೋಹಿತ್ ಶರ್ಮಾಗೆ ಎಂದು ಹೇಳಲು ಇಷ್ಟಪಡುತ್ತೇನೆ. ಏಕೆಂದರೆ ನಾಯಕನಾಗಿ ಆವರು ತಂಡವನ್ನು ಮುನ್ನಡೆಸಿರುವ ರೀತಿ ಅದ್ಭುತವಾಗಿದ್ದು, ತಂಡ ಹಲವು ದಾಖಲೆಗಳನ್ನು ಮಾಡಿದೆ. ಎಲ್ಲಾ ಆಟಗಾರರು ಅವರನ್ನು ತಂಡದ ನಾಯಕ ಎಂದು ಗೌರವಿಸುತ್ತಾರೆಂದು ನಾನು ಭಾವಿಸಿದ್ದೇನೆ. ಏಕಾಂಗಿಯಾಗಿ ಎದುರಾಳಿಯ ಆಟವನ್ನುಕಿತ್ತುಕೊಳ್ಳುವ ಸಾಮರ್ಥ್ಯವಿದ್ದರೆ ಅದು ರೋಹಿತ್ಗೆ ಮಾತ್ರ ಸಾಧ್ಯ ಎಂದು ಶಕೀಬ್ ಅಲ್ ಹಸನ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಹಾಗೂ ಬಾಂಗ್ಲದೇಶ ನಡುವಿನ ಅಭ್ಯಾಸ ಪಂದ್ಯ ಶುರುವಾಗುವುದಕ್ಕೂ ಮುನ್ನ ಶಕೀಬ್ ಅಲ್ ಹಸನ್ರ ಈ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಶಕೀಬ್ರ ಈ ಹೇಳಿಕೆ ಅಭಿಮಾನಿಗಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.