ಪಾಕ್​ನ ಮಾಜಿ ಪ್ರಧಾನಿ ಇಮ್ರಾನ್​ ಖಾನ್ ಭ್ರಷ್ಟಾಚಾರ ಮಾಡಿದ ಪ್ರಕರಣದಲ್ಲಿ 3 ವರ್ಷ ಅಂದರ್…

imran khan
Published on

ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತೋಶಖಾನಾ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿದೆ ಮತ್ತು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಪಾಕಿಸ್ತಾನದ ರಾಜಕೀಯ ಪಕ್ಷವಾದ ಪಿಟಿಐನ ಅಧ್ಯಕ್ಷರೂ ಆಗಿದ್ದ ಇಮ್ರಾನ್​ ಖಾನ್​ರನ್ನು, ಅವರ ಜಮಾನ್ ಪಾರ್ಕ್ ಮನೆಯಲ್ಲಿ ಬಂಧಿಸಲಾಗಿದೆ ಎಂದು ಅವರ ಪಕ್ಷ ಟ್ವೀಟ್​ನಲ್ಲಿ ತಿಳಿಸಿದೆ.

ತೋಶಖಾನಾ ಪ್ರಕರಣ, ಅಂದರೆ, ಸರ್ಕಾರಕ್ಕೆ ವಿದೇಶಿ ಗಣ್ಯರು ನೀಡಿದ್ದ ಉಡುಗೊರೆಗಳನ್ನು ಸ್ವಂತ ಲಾಭಕ್ಕಾಗಿ ಮಾರಿದ ಆರೋಪದಲ್ಲಿ ಇಮ್ರಾನ್ ಖಾನ್ ತಪ್ಪಿತಸ್ಥರೆಂದು ಶನಿವಾರ ಇಸ್ಲಾಮಾಬಾದ್ ವಿಚಾರಣಾ ನ್ಯಾಯಾಲಯವು ಘೋಷಿಸಿದೆ ಎಂದು ಪಾಕಿಸ್ತಾನದ ಪತ್ರಿಕೆ ದಿ ಡಾನ್ ವರದಿ ಮಾಡಿದೆ.

ನ್ಯಾಯಾಲಯವು ಇಮ್ರಾನ್ ಖಾನ್ ಮೇಲೆ 1 ಲಕ್ಷ ಪಾಕಿಸ್ತಾನಿ ರೂ. ದಂಡ ವಿಧಿಸಿದ್ದು, ಅದನ್ನು ಪಾವತಿಸಲು ವಿಫಲವಾದರೆ, ಹೆಚ್ಚುವರಿ ಆರು ತಿಂಗಳು ಜೈಲು ಶಿಕ್ಷೆಯನ್ನು ಸಂಪೂರ್ಣಗೊಳಿಸಬೇಕಾಗುತ್ತದೆ ಎಂದು ವರದಿಯಾಗಿದೆ.

"ಇಮ್ರಾನ್ ಖಾನ್ ಅವರನ್ನು ಅನರ್ಹಗೊಳಿಸುವುದು ಮತ್ತು ಜೈಲಿಗೆ ಹಾಕುವುದೇ ಉದ್ದೇಶವಾಗಿದ್ದು ಇದು ಕಾನೂನಿನ ಅಪಹಾಸ್ಯವಾಗಿದೆ. ಇದು ಸಂಪೂರ್ಣವಾಗಿ ನಾಚಿಕೆಗೇಡಿನ ವಿಚಾರವಾಗಿದ್ದು ಅಸಹ್ಯಕರವಾಗಿದೆ" ಎಂದು ಅವರ ಪಕ್ಷ ಪಿಟಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇಂದು ವಿಚಾರಣೆಯ ಸಮಯದಲ್ಲಿ, ಹೆಚ್ಚುವರಿ ಜಿಲ್ಲೆ ಮತ್ತು ಅಧಿವೇಶನ ನ್ಯಾಯಾಧೀಶರು ( ADSJ ) ಈ ಪ್ರಕರಣದಲ್ಲಿ ಮಾಜಿ ಪ್ರಧಾನ ಮಂತ್ರಿಯ ವಿರುದ್ಧದ ಆರೋಪಗಳು ಸಾಬೀತಾಗಿದೆ ಎಂದು ಹುಮಾಯುನ್ ದಿಲಾವರ್ ತೀರ್ಪು ನೀಡಿದರು. “ಇಮ್ರಾನ್ ಖಾನ್ ಪಾಕಿಸ್ತಾನದ ಚುನಾವಣಾ ಆಯೋಗಕ್ಕೆ ನಕಲಿ ವಿವರಗಳನ್ನು ಸಲ್ಲಿಸಿದ್ದು ಭ್ರಷ್ಟಾಚಾರದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ” ಎಂದು ಅವರು ಹೇಳಿದ್ದಾರೆ.

ವಿದೇಶಗಳಿಗೆ ಭೇಟಿ ನೀಡಿದಾಗ 140 ಮಿಲಿಯನ್ ಡಾಲರ್​ ಹಾಗೂ 6,35,000 ಗಿಂತ ಹೆಚ್ಚಿನ ಮೌಲ್ಯದ ದೇಶದ ಸ್ವಾಧೀನದಲ್ಲಿನ ಉಡುಗೊರೆಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಖಾನ್ ತನ್ನ 2018 ರಿಂದ 2022 ರ ಪ್ರಧಾನ ಮಂತ್ರಿ ಪಟ್ಟವನ್ನು ದುರುಪಯೋಗಪಡಿಸಿಕೊಂಡ ಆರೋಪವಿದೆ.

ವಿಚಾರಣೆಯ ವಿರುದ್ಧ ಇಮ್ರಾನ್ ಖಾನ್ ಅವರ ಮನವಿಯನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿತ್ತು. ಅದಾದ ಒಂದು ದಿನದ ನಂತರ ಈ ತೀರ್ಪು ಬಂದಿದೆ. ಇದರಲ್ಲಿ ಮಾಜಿ ಪ್ರಧಾನ ಮಂತ್ರಿ ಅವರು ರಾಜ್ಯದಿಂದ ಉಳಿಸಿಕೊಂಡಿರುವ ಉಡುಗೊರೆಗಳ ವಿವರಗಳನ್ನು ಮರೆಮಾಚಿದ್ದಾರೆ ಎಂದು ಆರೋಪಿಸಲಾಗಿದೆ.

ಕಳೆದ ವರ್ಷ ಅಕ್ಟೋಬರ್ 21ರಂದು ಇಸಿಪಿ, "ಸುಳ್ಳು ಹೇಳಿಕೆಗಳು ಮತ್ತು ತಪ್ಪಾದ ಘೋಷಣೆ" ಮಾಡಿದ್ದಕ್ಕಾಗಿ ತೋಶಖಾನಾ ಪ್ರಕರಣದಲ್ಲಿ ಮಾಜಿ ಪ್ರಧಾನ ಮಂತ್ರಿಯನ್ನು ಅನರ್ಹಗೊಳಿಸಿತು".

ಖಾನ್ ದೇಶಾದ್ಯಂತ 140 ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದು ಅವುಗಳಲ್ಲಿ ಭಯೋತ್ಪಾದನೆ, ಹಿಂಸೆ, ಧರ್ಮನಿಂದೆ, ಭ್ರಷ್ಟಾಚಾರ ಮತ್ತು ಕೊಲೆಯಂತಹ ಆರೋಪಗಳು ಪ್ರಮುಖವಾಗಿದೆ. ಅವಿಶ್ವಾಸ ಮತವನ್ನು ಕಳೆದುಕೊಂಡ ನಂತರ ಕಳೆದ ವರ್ಷ ಏಪ್ರಿಲ್ ನಲ್ಲಿ ಖಾನ್ ಅವರನ್ನು ಅಧಿಕಾರದಿಂದ ಹೊರಹಾಕಲಾಗಿತ್ತು. ರಷ್ಯಾ, ಚೀನಾ ಮತ್ತು ಅಫ್ಘಾನಿಸ್ತಾನದ ಬಗ್ಗೆ ಅವರ ಸ್ವತಂತ್ರ ವಿದೇಶಾಂಗ ನೀತಿ ನಿರ್ಧಾರಗಳಿಂದಾಗಿ ಅವರನ್ನು ಗುರಿಯಾಗಿಸಿಕೊಂಡು ನಡೆಸಿದ ಅಮೆರಿಕದ ನೇತೃತ್ವದ ಪಿತೂರಿಯ ಭಾಗವಾಗಿ ಪ್ರಧಾನಿ ಪಟ್ಟದಿಂದ ತೆಗೆದುಹಾಕಲಾಗಿದೆ ಎಂದು ಇಮ್ರಾನ್​ ಖಾನ್​ ಆರೋಪಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net