

ನ್ಯೂಯಾರ್ಕ್: ಜೂನ್ 09 ಇಲ್ಲಿನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕ್ ವಿರುದ್ಧ 6 ರನ್ಗಳ ರೋಚಕ ಗೆಲುವು ಸಾಧಿಸಿದ ಟೀಂ ಇಂಡಿಯಾಗೆ ಎಲ್ಲಿಲ್ಲದ ಮೆಚ್ಚುಗೆ, ಅಭಿನಂದನೆಗಳ ಮಹಾಪೂರವೇ ಹರಿದುಬಂದಿವೆ. ಅದರಲ್ಲೂ ಭಾರತ ಕೊಟ್ಟ 119 ರನ್ಗಳ ಸಾಧಾರಣ ಗುರಿಯನ್ನು ತಲುಪುವಲ್ಲಿ ಮುಗ್ಗರಿಸಿದ ಪಾಕಿಸ್ತಾನ ತಂಡಕ್ಕೆ ಇದೀಗ ಮತ್ತೊಮ್ಮೆ ಟೀಕೆಗಳು ವ್ಯಕ್ತವಾಗಿವೆ.
ಟೀಂ ಇಂಡಿಯಾದ ವಿರುದ್ಧದ ಪಂದ್ಯದಲ್ಲಿ ಹೀನಾಯವಾಗಿ ಸೋತ ಬಳಿಕ ಅಮೆರಿಕಾದ ರಸ್ತೆಬದಿಯಿರುವ ಜಂಟಿ ಪುಡ್ ಸ್ಟಾಲ್ನಲ್ಲಿ ಕಾಣಿಸಿಕೊಂಡ ಪಾಕಿಸ್ತಾನ ತಂಡದ ಯುವ ಬ್ಯಾಟರ್-ವಿಕೆಟ್ ಕೀಪರ್ ಆದ ಆಜಂ ಖಾನ್, ತನ್ನಿಷ್ಟದ ಆಹಾರವನ್ನು ವೇಗವಾಗಿ ತಿನ್ನುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಕ್ರಿಕೆಟಿಗನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
2021ರಲ್ಲಿ ಪಾಕಿಸ್ತಾನ ತಂಡಕ್ಕೆ ಪಾದಾರ್ಪಣೆ ಮಾಡಿದ ಆಜಂ ಖಾನ್, ಕಳೆದ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಪ್ರೇಮಿಗಳ ಕಂಗಣ್ಣಿಗೆ ಗುರಿಯಾಗಿದ್ದರು. 14 ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಡಿರುವ ಆಜಂ ಖಾನ್, ಇತ್ತೀಚೆಗೆ ನಡೆದ ಪಂದ್ಯಗಳಲ್ಲಿ ಮಾತ್ರ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಇದು ಅಪಾರ ಸಂಖ್ಯೆಯ ಪಾಕ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು. ಇನ್ನು ಕ್ರೀಡಾಪಟುಗಳು ಅಂದಮೇಲೆ ಫಿಟ್ನೆಸ್ ಬಹುಮುಖ್ಯವಾದದ್ದು. ಹೀಗಿರುವಾಗ ದಡೂತಿ ದೇಹ ಹೊತ್ತು, ಮೈದಾನಕ್ಕೆ ಬರುವುದು ಎಷ್ಟು ಸರಿ ಎಂದು ಕಿಡಿಕಾರಿದ್ದರು.
ಸದ್ಯ ಇದೆಲ್ಲದರ ಮಧ್ಯೆ ರಸ್ತೆಬದಿ ತಿನ್ನುತ್ತಿರುವ ಆಜಂ ಖಾನ್ರ ವಿಡಿಯೋ ಮಾತ್ರ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಫಿಟ್ನೆಸ್ ಮತ್ತು ಆಟದ ಬಗ್ಗೆ ಹೆಚ್ಚು ಗಮನಹರಿಸುವುದನ್ನು ಬಿಟ್ಟು, ಉಳಿದೆಲ್ಲಾ ಮಾಡುತ್ತೀಯಾ ಎಂದು ವ್ಯಂಗ್ಯವಾಡಿದ್ದಾರೆ,(ಏಜೆನ್ಸೀಸ್).