ನಮ್ಮ ಕ್ಯಾಪ್ಟನ್​ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ; ಹೀಗಂದಿದ್ಯಾರು?

bsy
bsy
Published on

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ರಾಜಕೀಯ ಚಟುವಟಿಕೆ ಮತ್ತಷ್ಟು ಗರಿಗೆದರಿದ್ದು, ಕೆಲವು ನಾಯಕರು ಸುದ್ದಿಗೆ ಗ್ರಾಸವಾಗುತ್ತಿದ್ದರೆ, ಇನ್ನು ಕೆಲವರು ವಿವಾದಕ್ಕೂ ಈಡಾಗುತ್ತಿದ್ದಾರೆ. ಈ ಎಲ್ಲದರ ನಡುವೆ ಮುಖ್ಯಮಂತ್ರಿ ಬದಲಾವಣೆ, ರಾಜ್ಯ ಬಿಜೆಪಿಯ ನಾಯಕ ಯಾರು ಎಂಬ ವಿಚಾರಗಳೂ ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತಿವೆ. ಪ್ರತಿಸಲ ಇಂಥದ್ದೊಂದು ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಯಡಿಯೂರಪ್ಪ ಅವರೇ ರಾಜ್ಯ ಬಿಜೆಪಿಯ ನಾಯಕ ಎಂಬುದು ಪ್ರತಿಪಾದನೆ ಆಗುತ್ತಲೇ ಇರುತ್ತದೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು ನಿನ್ನೆಯಷ್ಟೇ ದೆಹಲಿಗೆ ತೆರಳಿ ಮಹಾರಾಷ್ಟ್ರದ ಮಾಜಿ ಸಿಎಂ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಕುತೂಹಲವನ್ನು ಕೆರಳಿಸಿತ್ತು. ಇಂದು ಬೆಳಗ್ಗೆ ಕೊಪ್ಪಳದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ನನ್ನನ್ನು ವಿಲನ್ ಮಾಡಬೇಡಿ. ಅವರ ವಿರುದ್ಧ ಮಾತನಾಡಿದ್ರೆ ನಾವು ಸುಟ್ಟು ಹೋಗ್ತೀವಿ ಎಂದು ಹೇಳಿರುವುದೂ ಗಮನ ಸೆಳೆದಿದೆ.

ಈ ಎಲ್ಲದರ ಮಧ್ಯೆ ಇದೀಗ ಸಚಿವ ಎಸ್​.ಟಿ. ಸೋಮಶೇಖರ್ ಕೊಟ್ಟಿರುವ ಹೇಳಿಕೆ, ಬಿಜೆಪಿಯಲ್ಲಿ ಯಡಿಯೂರಪ್ಪ ನಾಯಕತ್ವವನ್ನು ಪ್ರಶ್ನಿಸುತ್ತಿರುವವರಿಗೆ ಉತ್ತರ ಎಂಬಂತೆ ಹೊರಹೊಮ್ಮಿದೆ. ಇಂದು ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸೋಮಶೇಖರ್​, ನಮ್ಮ ಕ್ಯಾಪ್ಟನ್ ರಮೇಶ್ ಜಾರಕಿಹೊಳಿಯಲ್ಲ. ನಮ್ಮ ಕ್ಯಾಪ್ಟನ್ ರಾಜ್ಯದ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್. ಇವರಿಬ್ಬರನ್ನು ಬಿಟ್ಟು ನಮಗೆ ಯಾರೂ ಕ್ಯಾಪ್ಟನ್ ಅಲ್ಲ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net