

ಕೇರಳ: ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಹದಿನಾಲ್ಕು ವರ್ಷದ ಹುಡುಗಿಯೊಬ್ಬಳು ಮೊನ್ನೆಮೊನ್ನೆಯಷ್ಟೇ 4 ತಿಂಗಳ ಮಗುವಿನೊಂದಿಗೆ ಪತ್ತೆಯಾಗಿದ್ದಾಳೆ. ವಿಶೇಷವೆಂದರೆ ಒಂದು ರಾಜ್ಯದಿಂದ ಕಾಣೆಯಾಗಿದ್ದ ಈಕೆ ಮತ್ತೊಂದು ರಾಜ್ಯದಲ್ಲಿ ಪತ್ತೆಯಾಗಿದ್ದು, ಪೊಲೀಸರು ಈಗ ಅವಳನ್ನು ಮಾತೃರಾಜ್ಯಕ್ಕೆ ಕರೆ ತಂದಿದ್ದಾರೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಝಿಂಜಂಪರ ಎಂಬಲ್ಲಿನ 14 ವರ್ಷದ ಹುಡುಗಿ 2019ರಲ್ಲಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿದ್ದರೂ ಆಕೆಯ ಪತ್ತೆ ಆಗಿರಲಿಲ್ಲ. ಆದರೆ ಆಕೆ ತಮಿಳುನಾಡಿನ ಮಧುರೈನಲ್ಲಿ ಇರುವ ಕುರಿತು ಕೆಲವೇ ದಿನಗಳ ಹಿಂದೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಮೇರೆಗೆ ಜೂ.18ರಂದು ಅಲ್ಲಿಗೆ ಹೋಗಿದ್ದ ಪೊಲೀಸರಿಗೆ ಕಾಣೆಯಾಗಿದ್ದ ಬಾಲಕಿ, ಆಕೆಯ 4 ತಿಂಗಳ ಮಗುವಿನೊಂದಿಗೆ ಪತ್ತೆಯಾಗಿದ್ದಾಳೆ.
ಈ ಹುಡುಗಿಯ ತಾಯಿ ಕೇರಳದಲ್ಲಿ ಕೇಟರಿಂಗ್ ಮಾಡುತ್ತಿದ್ದು, ಆಕೆಯೊಂದಿಗೆ ಮಗಳೂ ಕೆಲಸ ಮಾಡುತ್ತಿದ್ದಳು. ಈಗ ಆಕೆ ತನ್ನ ತಾಯಿಯೊಂದಿಗೆ ಕೆಲಸ ಮಾಡುತ್ತಿದ್ದ 22 ವರ್ಷದ ವ್ಯಕ್ತಿಯೊಂದಿಗೆ ತಮಿಳುನಾಡಿನ ಮನೆಯೊಂದರಲ್ಲಿ ನೆಲೆಸಿದ್ದು, ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಆ ವ್ಯಕ್ತಿಯೊಂದಿಗೆ ಓಡಿಹೋಗಿರುವ ಹುಡುಗಿ, ಆತನೊಂದಿಗೆ ನೆಲೆಸಿದ್ದಳು. ಅಲ್ಲಿದ್ದವರ ಮಾಹಿತಿ ಪ್ರಕಾರ ಇಬ್ಬರೂ ಗಂಡ-ಹೆಂಡತಿಯಂತೆ ಇದ್ದರು ಎನ್ನಲಾಗಿದೆ. ಹುಡುಗಿಯ ಗಂಡ ಎನ್ನಲಾದ ವ್ಯಕ್ತಿ ಪೊಲೀಸರ ಕಾರ್ಯಾಚರಣೆ ವೇಳೆ ತಲೆಮರೆಸಿಕೊಂಡಿದ್ದಾನೆ.
ಈಗ 16 ವರ್ಷವಾಗಿರುವ ಆ ಹುಡುಗಿಯನ್ನು ಆಕೆಯ ನಾಲ್ಕು ತಿಂಗಳ ಮಗುವಿನ ಜೊತೆ ಕೇರಳಕ್ಕೆ ಕರೆತಂದಿರುವ ಪೊಲೀಸರು, ಗಂಡ ಎನ್ನಲಾದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮಾತ್ರವಲ್ಲ ಆತನ ಪತ್ತೆಗೆ ಬಲೆ ಬೀಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)