-ಹರಿಪ್ರಸಾದ್ ನಂದಳಿಕೆ, ಕಾರ್ಕಳ
ಅವಿಭಜಿತ ಜಿಲ್ಲೆಯಲ್ಲಿ ಮಾವು ಇಳುವರಿ ಕುಠಿತವಾಗಿದ್ದು, ಮಾರುಕಟ್ಟೆಗೆ ಹೊರ ರಾಜ್ಯದ ಮಾವುಗಳಿಗೆ ಭಾರಿ ಬೇಡಿಕೆಯಿದೆ. ಸ್ಥಳೀಯ ಮಾವು ಅಧಿಕ ದರಕ್ಕೆ ಮಾರಟವಾಗುತ್ತಿದ್ದರೂ ಬೇಡಿಕೆಯಷ್ಟು ಮಾವಿನಕಾಯಿ ಸಿಗುತ್ತಿಲ್ಲ.
ಕೃಷಿಕರಿಗೆ ಭರ್ಜರಿ ಆದಾಯ ನೀಡುತ್ತಿದ್ದ ಮಾವಿನ ಬೆಳೆಯ ಇಳುವರಿ ಕುಂಠಿತವಾಗಿದ್ದು, ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಶೆಯುಂಟಾಗಿದೆ. ಕರಾವಳಿಯಲ್ಲಿ ತೋಟಗಾರಿಕಾ ಬೆಳೆಯಾಗಿರುವ ಮಾವಿನ ಇಳುವರಿಯಲ್ಲಿ ಈ ಬಾರಿ ಗಣನೀಯ ಕುಸಿತವಾಗಿದೆ. ಪ್ರಸಕ್ತ ವರ್ಷದ ಹವಮಾನ ಬದಲಾವಣೆಯ ಪರಿಣಾಮವಾಗಿ ಇಳುವರಿ ಕುಸಿತಕ್ಕೆ ಕಾರಣ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಮಾವಿನಕಾಯಿಗೆ ಭರ್ಜರಿ ಬೇಡಿಕೆಯಿದ್ದು, ಅಧಿಕ ದರಕ್ಕೆ ಮಾರಾಟವಾಗುತ್ತಿದೆ. ಕಾಟು ಮಾವಿನ ಮಿಡಿ ಒಂದಕ್ಕೆ 4-6 ರೂ.ಗೆ ಮಾರಾಟವಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ 500 ಮಾವಿನ ಮಿಡಿಗಳಿಗೆ 1500-2000 ರೂ.ಗೆ ಮಾರಾಟವಾದರೆ ಪಟ್ಟಣ, ನಗರ ಪ್ರದೇಶದಲ್ಲಿ ಸುಮಾರು 2 ಸಾವಿರದಿಂದ 2500 ಸಾವಿರ ರೂ.ಗೆ ಮಾರಾಟವಾಗುತ್ತಿದೆ.
ಉಪ್ಪಿನಕಾಯಿಗೆ ಮಾವಿಲ್ಲ
ಪ್ರತಿ ವರ್ಷ ಮಾವಿನಕಾಯಿಯನ್ನು ಸಂಗ್ರಹಿಸಿ ಉಪ್ಪಿಕಾಯಿ ತಯಾರಿಸುವ ಮಂದಿ ಈ ಬಾರಿ ಬೇಡಿಕೆಯಷ್ಟು ಮಾವಿನ ಮಿಡಿ ಸಿಗದೆ ನಿರಾಸೆಗೊಂಡಿದ್ದಾರೆ.
ಹೊರ ರಾಜ್ಯದ ಮಾವು ಮಾರಾಟ
ಜಿಲ್ಲೆಯಯಲ್ಲಿ ವಿವಿಧ ತಳಿಯ ಮಾವು ಪ್ರಮುಖ ಮಾರುಕಟ್ಟೆಗೆ ಪ್ರವೇಶಿಸಿ, ಭರ್ಜರಿ ವ್ಯಾಪಾರವು ನಡೆಯುತ್ತಿದೆ. ಜಿಲ್ಲೆಯ ಮಾರುಕಟ್ಟೆಗೆ ಬಹುತೇಕ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೇ ಮಾವು ಪೂರೈಕೆಯಾಗುತ್ತದೆ. ದ.ಕ ಹಾಗೂ ಉಡುಪಿ ಜಿಲ್ಲೆಯ ರೈತರು ಮಾವು ಬೆಳೆಯನ್ನು ಪ್ರಮುಖ ಆದಾಯ ಬೆಳೆಯಾಗಿ ಪರಿಗಣಿಸಿಲ್ಲ ಹೀಗಾಗಿ ಕೆಲವೇ ಹೆಕ್ಟೆರ್ ಪ್ರದೇಶದಲ್ಲಿ ಮಾತ್ರ ಮಾವು ಬೆಳೆಯಲಾಗುತ್ತದೆ.
ಮಾರುಕಟ್ಟೆಯಲಿ ರತ್ನಗಿರಿ, ರಸಪುರಿ, ಬೆನೆಟಾ ಅಪೂಸ್, ಬಾದಾಮಿ, ಮಲ್ಲಿಕಾ, ತೋತಪುರಿ, ಸಿಂಡುಲಾ, ಬೇನಿಶಾ, ಮುಂಡಪ್ಪ, ನೀಲಂ ಸಹಿತ ಮೊದಲಾದ ಹಣ್ಣುಗಳು ಮಾರಾಟವಾಗುತ್ತಿವೆ. ಪ್ರಸ್ತುತ ಹಾಸನ, ಮಹಾರಾಷ್ಟ್ರ, ತುಮಕೂರು, ಚಿಕ್ಕಮಗಳೂರು, ಬೆಂಗಳೂರು, ಶ್ರೀನಿವಾಸ್‌ಪುರ, ಚಿಂತಾಮಣಿ, ಆಂಧ್ರಪ್ರದೇಶ, ಭಾಗದಿಂದ ಮಾವಿನ ಹಣ್ಣು ಉಡುಪಿ ಹಾಗೂ ದ.ಕ ಜಿಲ್ಲೆಗಳ ಮಾರುಕಟ್ಟೆಗೆ ಪೂರೈಕೆಯಾಗುತ್ತಿದೆ.
ಹವಮಾನದ ವೈಪರೀತ್ಯದಿಂದ ಈ ಬಾರಿ ಮಾವಿನ ಹಣ್ಣಿನ ಇಳುವರಿಯಲ್ಲಿ ಕಡಿಮೆಯಾಗಿದೆ. ಬೇಡಿಕೆಯಷ್ಟು ಸ್ಥಳೀಯ ಮಾವಿನಕಾಯಿಗಳು ಸಿಗುತ್ತಿಲ್ಲ. ಹೀಗಾಗಿ ಸ್ಥಳೀಯ ಮಾವಿನ ಕಾಯಿಗೆ ಭರ್ಜರಿ ಬೇಡಿಕೆಯಿದೆ, ದರವೂ ಹೆಚ್ಚಾಗಿದೆ.
-ಸೂರಜ್ ಕುಲಾಲ್, ಮುಂಡ್ಕೂರು
ಏರುತ್ತಿರುವ ತಾಪಮಾನದಿಂದ ಮರಗಳು ಇನ್ನೂ ಹೂವು ಬಿಟ್ಟಿಲ್ಲ. ಹೀಗಾಗಿ ಇಳುವರಿ ಕಡಿಮೆಯಾಗಿದೆ.
-ಶ್ರೀನಿವಾಸ್, ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕಾ ಇಲಾಖೆ