More

    ಜೀವ ನುಂಗುವ ಸುಂದರ ಕಡಲು…!

    ಇರಲಿ ಎಚ್ಚರ ನೀರಿಗಿಳಿಯುವ ಮೊದಲು — ಪ್ರಾಣ ಹಿಂಡೀತು ಸಮುದ್ರದ ಒಡಲು

    ಪ್ರಶಾಂತ ಭಾಗ್ವತ, ಉಡುಪಿ
    ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜಾ ಆರಂಭಗೊಂಡಿದ್ದು, ಕುಟುಂಬ ಸಮೇತ ಹಾಗೂ ಸ್ನೇಹಿತರ ತಂಡಗಳು ಕಡಲ ನಗರಿ ಉಡುಪಿಯ ಮಲ್ಪೆಗೆ ದಾಂಗುಡಿ ಇಡುತ್ತಿವೆ. ಇದು ಸಂತಸದ ಸಂಗತಿಯಾದರೂ, ಸಮುದ್ರಕ್ಕೆ ಇಳಿಯುವ ಮುನ್ನ ಎಚ್ಚರಿಕೆ ಪಾಲಿಸದೆ ಅಮೂಲ್ಯ ಜೀವ ಕಳೆದುಕೊಳ್ಳುತ್ತಿರುವುದು ದುಃಖದ ಸಂಗತಿಯಾಗಿದೆ.

    ಮಲ್ಪೆ ಬೀಚ್​ಗೆ ಪ್ರತಿದಿನವೂ ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಇಲ್ಲಿ ಈಗ ಜೀವ ಸುರಕ್ಷತೆಯ ಪ್ರಶ್ನೆ ಎದುರಾಗಿದೆ. ಹೇಳಿಕೊಳ್ಳಲು ಇಲ್ಲಿ ಎಲ್ಲ ವ್ಯವಸ್ಥೆಯಿದ್ದರೂ, ಯಾವುದೂ ಕಾರ್ಯಾಚರಣೆಯಲ್ಲಿ ಇಲ್ಲ ಎಂಬ ಆರೋಪ ಕೇಳಿ ಬಂದಿದೆ.

    ಪ್ರವಾಸಿಗರ ನಿರ್ಲಕ್ಷ್ಯ

    ಇತ್ತೀಚೆಗೆ ಮಲ್ಪೆ ಕಡಲಿಗೆ ಈಜಲು ಹೋದ ಹೊರ ಜಿಲ್ಲೆಯ ಕೆಲ ಯುವ ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ. ಹಳ್ಳಿಗಳ ಸಣ್ಣ ಕೆರೆ ಅಥವಾ ನಗರಗಳ ಸ್ವಿಮ್ಮಿಂಗ್​ ಫೂಲ್ ಗಳಲ್ಲಿ ಮಾತ್ರ ಈಜಿದ ಅನುಭವ ಇರುವ ಪ್ರವಾಸಿಗರಿಗೆ ಕಡಲಿನ ಅಬ್ಬರ ತಿಳಿದಿರುವುದೇ ಇಲ್ಲ. ಆಳ ಕಡಲಿಗೆ ತೆರಳಿದರೆ ಜೀವಕ್ಕೆ ಅಪಾಯವಾಗುತ್ತದೆ ಎಂಬ ಸೂಚನಾ ಲಕ ನೋಡಿಯೂ ಸಹ ಲೆಕ್ಕಿಸದೆ ಈಜಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

    56 ಜನರು ಬಲಿ

    ಕೇವಲ ಎರಡು ವರ್ಷ ನಾಲ್ಕು ತಿಂಗಳ ಅವಧಿಯಲ್ಲಿ ಮಲ್ಪೆ ಬೀಚೊಂದರಲ್ಲೇ ಮೀನುಗಾರರೂ ಸೇರಿದಂತೆ 56 ಜನರು ಮೃತಪಟ್ಟಿದ್ದಾರೆ. ಮಲ್ಪೆ ಪೊಲೀಸ್​ ಠಾಣೆಯಲ್ಲಿ ಲಭ್ಯವಿರುವ ಮಾಹಿತಿಯಂತೆ 2022ರಲ್ಲಿ 19 ಜನ, 2023ರಲ್ಲಿ 24 ಜನ ಹಾಗೂ 2024ರ ಏಪ್ರಿಲ್​ 21ರ ವರೆಗೆ 13 ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಇನ್ನಿತರ ಬೀಚ್​ಗಳ ಮಾಹಿತಿಯನ್ನೂ ಸೇರಿಸಿದರೆ ಮೃತಪಟ್ಟವರ ಸಂಖ್ಯೆ 4 ಪಟ್ಟು ಹೆಚ್ಚಲಿದೆ.

    ಕೈಕೊಟ್ಟ ಜೀವರಕ್ಷಕರು

    ಪ್ರವಾಸಿಗರ ಜೀವ ರಕ್ಷಣೆಗಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆ ಇರುವ ಮಲ್ಪೆ ಡೆವೆಲೆಪ್​ಮೆಂಟ್​ ಬೋರ್ಡ್​ ಕಳೆದ ಮೂರು ತಿಂಗಳ ಹಿಂದೆ 18 ಜನರಿಗೆ ಲೈಫ್ ಗಾರ್ಡ್​ ತರಬೇತಿ ನೀಡಿ, ಅವರಿಗೆ ಉದ್ಯೋಗದ ಪತ್ರವನ್ನೂ ನೀಡಿತ್ತು. ಆದರೆ, ಅವರೆಲ್ಲ ವಸತಿ ನೀಡುವಂತೆ ಹಾಗೂ ವೇತನ ಹೆಚ್ಚಿಸುವಂತೆ ಒತ್ತಾಯಿಸಿ, ಇನ್ನೂ ಪ್ರವಾಸಿಗರ ಲೈಫ್ ಗಾರ್ಡ್ ಕೆಲಸಕ್ಕೆ ಬಂದಿಲ್ಲ. ಹೀಗಾಗಿ ಸಹಸ್ರ ಸಂಖ್ಯೆಯಲ್ಲಿ ಬರುವ ಪ್ರವಾಸಿಗರ ಜೀವ ರಕ್ಷಣೆ ತೊಡಕಾಗಿದೆ.

    ಸುರಕ್ಷತಾ ಕ್ರಮ ಪರಿಶೀಲಿಸಿದ ಅಧಿಕಾರಿಗಳು

    ಇತ್ತೀಚೆಗೆ ಮಲ್ಪೆ ಬೀಚ್​ನಲ್ಲಿ ಹೊರ ಜಿಲ್ಲೆಯ ಇಬ್ಬರು ಪ್ರವಾಸಿ ಯುವಕರು ಮೃತಪಟ್ಟ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿಯ ಸೂಚನೆಯ ಮೇರೆಗೆ ನಗರಸಭೆಯ ಆಯುಕ್ತ ರಾಯಪ್ಪ ಅವರು ಭೇಟಿ ನೀಡಿ ಸುರಕ್ಷತಾ ಕ್ರಮ ಪರಿಶೀಲಿಸಿದರು. ಕೂಡಲೇ ಮೂವರು ಲೈಫ್ ಗಾರ್ಡ್ ಗಳನ್ನು ನೇಮಿಸಿಕೊಳ್ಳುವಂತೆ ಸಾಹಸಿ ಕ್ರೀಡೆಗಳ ಓಶಿಯನ್​ ಎಡ್ವೆಂಚರ್ಸ್​ನ ಮಾಲೀಕರಿಗೆ ಸೂಚಿಸಿದರು. ಅಲ್ಲದೆ, ಬೀಚ್​ ನಿರ್ವಹಣೆಯ ಲೀಸ್​ ಪಡೆದ ಗುತ್ತಿಗೆದಾರರಿಗೂ ಸಹ ಕೂಡಲೇ 8 ಜನ ಲೈಫ್ ಗಾರ್ಡ್ ನೇಮಿಸುವಂತೆ ಆದೇಶಿಸಿದರು. ಅಲ್ಲದೆ, ಮಲ್ಪೆ ಠಾಣೆ ಪೊಲೀಸರೊಂದಿಗೂ ಸಭೆ ನಡೆಸಿದರು.

    ಮಲ್ಪೆ ಬೀಚ್​ನಲ್ಲಿರುವ ಎಚ್ಚರಿಕೆಯ ಫಲಕ ನೋಡಿಯೂ ಸಹ ಕೆಲ ಈಜು ಭಾರದ ಪ್ರವಾಸಿಗರು ನಿಗದಿತ ಜಾಗ ಬಿಟ್ಟು ಸ್ವಲ್ಪ ದೂರಕ್ಕೆ ಹೋಗಿ ಆಳ ಕಡಲಿಗೆ ಇಳಿಯುತ್ತಿದ್ದಾರೆ. ಇದರಿಂದ ಅವಡ ಸಂಭವಿಸುತ್ತಿದೆ. ತರಬೇತಿ ಪಡೆದ ಲೈಫ್ ಗಾರ್ಡ್​ಗಳು ಕೆಲಸಕ್ಕೆ ಬರುತ್ತಿಲ್ಲ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್​ ಹಾಗೂ ಹೋಮ್​ಗಾರ್ಡ್ಸ್​ ನೇಮಕಕ್ಕೆ ತೊಡಕಾಗಿದೆ. ಪ್ರವಾಸಿಗರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

    ಡಾ. ಕೆ.ವಿದ್ಯಾಕುಮಾರಿ.
    ಜಿಲ್ಲಾಧಿಕಾರಿ, ಉಡುಪಿ

    ಮಲ್ಪೆಯಲ್ಲಿ ಬರುವ ಸಾವಿರಾರು ಜನರ ರಕ್ಷಣೆಗೆ ಕನಿಷ್ಠ 15 ಲೈಫ್ ಗಾರ್ಡ್​ಇರಲೇಬೇಕು. ಈಜಲು ನಿಗದಿತ ಸ್ಥಳ ಗುರುತಿಸಿ, ಮದ್ಯಪಾನ ಮಾಡಿದವರನ್ನು ಈಜಲು ತೆರಳದಂತೆ ತಡೆ ಹಿಡಿಯಬೇಕು. ಅಪಾಯಕ್ಕೆ ಸಿಲುಕಿದವರನ್ನು ರಸಲು ಜೆಸ್ಕಿ (ಸ್ಪೀಡ್​ ಬೋಟ್​) ವ್ಯವಸ್ಥೆ ಮಾಡಲೇಬೇಕು. ನೀರಿಗೆ ಬಿದ್ದು ಮೃತಪಟ್ಟವರ ಪೋಟೋ ಇರುವ ಫ್ಲೆಕ್ಸ್ ಅಳವಡಿಸಬೇಕು. ಇದರಿಂದ ನೀರಿಗಿಳಿಯುವ ಪ್ರವಾಸಿಗರಿಗೆ ಸ್ವಲ್ಪ ಭಯವಾಗುತ್ತದೆ.

    ಈಶ್ವರ ಮಲ್ಪೆ.
    ಮುಳುಗುತಜ್ಞ, ಮಲ್ಪೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts