More

    ಕಡ್ಡಾಯವಾಗಿ ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ

    ಮೈಸೂರು:ದೇಶದ ಸಂವಿಧಾನ ಸಮಾನ ಅಧಿಕಾರವಾಗಿ ಲಿಂಗ, ಜಾತಿ, ಧರ್ಮ, ವರ್ಗಗಳ ಭೇದವಿಲ್ಲದ ಎಲ್ಲ ವಯಸ್ಕರಿಗೆ ಮತದಾನದ ಹಕ್ಕನ್ನು ನೀಡಿದೆ. ಕಡ್ಡಾಯವಾಗಿ ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ವಿವಿಧ ಸಂಘಟನೆಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು ನಗರದಲ್ಲಿ ಸೋಮವಾರ ಜಾಗೃತಿ ಮೂಡಿಸಿದರು.
    ನಗರದ ಕಲಾಮಂದಿರದ ಆವರಣದಲ್ಲಿ ಸಮಾನ ಮನಸ್ಕ ಸಂಘಟನೆ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಸೇರಿದಂತೆ ಇತರ ಸಂಘಟನೆಗಳಿಂದ ಕರಪತ್ರ, ಭಿತ್ತಿಪತ್ರವನ್ನು ಪ್ರದರ್ಶಿಸುವ ಮೂಲಕ ಮತ ಜಾಗೃತಿ ಮೂಡಿಸಲಾಯಿತು.
    ಚುನಾವಣೆ ಪ್ರಜಾತಂತ್ರದ ಹಬ್ಬ. ಸಮಬಲರ ಮಧ್ಯೆ ಸ್ಪರ್ಧೆ ನಡೆದರೆ ಅದು ಸಂಭ್ರಮ, ಕೆಲವರು ಅತಿಬಲರಾದಾಗ ಅದು ಸಂಘರ್ಷ. ಇದೀಗ ಸಂಭ್ರಮಕ್ಕಿಂತ ಹೆಚ್ಚು ಸಂಘರ್ಷ ಎದ್ದು ಕಾಣುತ್ತಿದೆ. ಸಂವಿಧಾನವೇ ಅಪಾಯದಲ್ಲಿದೆ. ಸರ್ವ ಸಮಾನತೆಯ ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳ ಮೇಲೆ ದಾಳಿ ಮಾಡುವ ವಿಪರ್ಯಾಸಗಳು ಕಾಣುತ್ತಿವೆ ಎಂದರು.
    ಮಹಿಳೆಯರಿಗೆ ಘನತೆಯ ಬದುಕನ್ನು ಖಾತ್ರಿಪಡಿಸುವ ಸಂವಿಧಾನದ ಅಡಿಯಲ್ಲಿಯೇ ಇಂಚಿಂಚಾಗಿ ಅವಳ ಬದುಕನ್ನೇ ಹರಿದು ಮುಕ್ಕುವ ಕೃತ್ಯಗಳು ರಾಜಾರೋಷವಾಗಿ ಜಾರಿಯಲ್ಲಿವೆ. ಸಮಾಜದಲ್ಲಿ ಎಲ್ಲರನ್ನೂ ಗೌರವಿಸುವ ಕೆಲಸವಾಗಲಿ. ಪ್ರಜಾತಂತ್ರದಲ್ಲಿ ನಮಗೆ ಸಿಕ್ಕಿರುವ ಮತ್ತು ದಕ್ಕಿಸಿಕೊಂಡಿರುವ ಹಕ್ಕುಗಳನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ನಾವೀಗ ಎಚ್ಚರ ತಪ್ಪಿದರೆ ಪಶ್ಚಾತ್ತಾಪ ಪಡಬೇಕಾದೀತು. ತಪ್ಪದೇ ಮತ ಹಾಕೋಣ. ದ್ವೇಷ ರಾಜಕಾರಣವನ್ನು ಸೋಲಿಸಿ ಸಂವಿಧಾನದ ಉಳಿಸೋಣ ಎಂದು ಮತದಾರರಲ್ಲಿ ಮನವಿ ಮಾಡಿದರು.
    ಇದೇ ಸಂದರ್ಭದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹೊರತಂದಿರುವ ಭಾರತದ ಮಹಿಳೆಯರ ಸ್ಥಿತಿಗತಿಗಳು 2014-24ರ ದಶಕಗಳ ಅನುಭವ ಕುರಿತು ಕಿರು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸಂಘಟನೆಯ ಪ್ರಮುಖ ಪ್ರೊ. ಕೆ. ಕಾಳಚನ್ನೇಗೌಡ, ಡಾ. ರತಿ ರಾವ್, ಕೆ.ಆರ್.ಸುಮತಿ, ಸುಶೀಲಾ, ದೇವಿ ಮಂಡ್ಯ, ಡಾ.ಸಬೀಹಾ ಭೂಮಿಗೌಡ, ಡಾ. ಲಕ್ಷ್ಮಿನಾರಾಯಣ, ನಾ. ದಿವಾಕರ, ಆರ್.ಲಕ್ಷ್ಮಣ್, ಸವಿತಾ ಪ .ಮಲ್ಲೇಶ್, ಭರತ್ ರಾಜ್, ಜಗನಾಥ್ ಸೂರ್ಯ, ಆಶಾ. ಸುಶೀಲಾ, ಸುನಂದ ಲಿಂಗರಾಜಮೂರ್ತಿ, ಶಿವರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts