

Operation Sindoor: ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಅಮಾಯಕರ ಪ್ರಾಣ ಕಸಿದ ಪಾಕ್ ಉಗ್ರರ ಅಟ್ಟಹಾಸ ಮುರಿಯಲು ಆಪರೇಷನ್ ಸಿಂಧೂರ ಮೂಲಕ ದಾಳಿ ನಡೆಸಿದ ಭಾರತ, ಭಯೋತ್ಪಾದಕರ ನೆಲೆಯನ್ನು ಅಕ್ಷರಶಃ ಛಿದ್ರಗೊಳಿಸಿದೆ. ಪ್ರವಾಸಿಗರನ್ನು ಗುಂಡಿಕ್ಕಿ ಕೊಂದ ಉಗ್ರರ ಕ್ರೌರ್ಯಕ್ಕೆ ಇದೀಗ ಭಾರತ ತಕ್ಕ ಪಾಠ ಕಲಿಸಿದೆ. 'ಆಪರೇಷನ್ ಸಿಂಧೂರ್' ಹೆಸರಿನಲ್ಲಿ ಭಾರತೀಯ ಸೇನೆ ಪಾಕಿಸ್ತಾನದಲ್ಲಿರುವ ಉಗ್ರರ ಶಿಬಿರಗಳ ಮೇಲೆ ಮಿಂಚಿನ ದಾಳಿ ನಡೆಸಿತು.
ಅಮಾಯಕರ ಪ್ರಾಣ ಕಸಿಯುವುದು ಹೇಗೆ ಎಂದು ಕಲಿಯಲು ಶಿಬಿರಗಳಲ್ಲಿ ಅಡಗಿ ಕುಳಿತಿದ್ದ ಉಗ್ರರ ತಾಣಗಳ ಮೇಲೆಯೇ ಭಾರತೀಯ ಸೇನೆ ಬಾಂಬ್ಗಳ ಮಳೆ ಸುರಿಸಿತು. ಪಾಕಿಸ್ತಾನದ ಪ್ರದೇಶಕ್ಕೆ ನುಗ್ಗಿ ಅತ್ಯಂತ ಶಸ್ತ್ರಸಜ್ಜಿತ ಗುಂಪನ್ನು ಧ್ವಂಸಗೊಳಿಸಿದೆ. ಈ ರೀತಿಯ ದಾಳಿ ಇದೇ ಮೊದಲಲ್ಲ. ಈ ಹಿಂದೆಯೂ ಭಾರತ ಹಲವು ಬಾರಿ ಪಾಕಿಸ್ತಾನದ ವಿರುದ್ಧ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಿದೆ.
ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದೆ ಮತ್ತು ಭಾರತದ ವಿರುದ್ಧ ಭಯೋತ್ಪಾದಕ ಗುಂಪುಗಳನ್ನು ಪ್ರಚೋದಿಸುತ್ತಿದೆ ಎಂಬುದಕ್ಕೆ ಹಲವು ಘನಘೋರ ಘಟನೆಗಳೇ ಸಾಕ್ಷಿ. ಉಗ್ರರ ಆಶ್ರಯಕ್ಕೆ ಬೆಂಬಲ ಕೊಡುವ ರಣಹೇಡಿ ಪಾಕ್ಗೆ ಹಲವಾರು ಬಾರಿ ಭಾರತ ತಕ್ಕ ಉತ್ತರವೂ ನೀಡಿದೆ, ಪಾಠವೂ ಕಲಿಸಿದೆ. ಪ್ರತೀಕಾರದ ದಾಳಿಗಳ ಹೊರತಾಗಿಯೂ, ಪಾಕಿಸ್ತಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ 70 ವರ್ಷಗಳಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ನಡೆಸಿದ ಪ್ರಮುಖ ಮಿಲಿಟರಿ ಕಾರ್ಯಾಚರಣೆಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಇದನ್ನೂ ಓದಿ: ಔಷಧ, ವೈದ್ಯಕೀಯ ಉಪಕರಣಗಳ ಟೆಂಡರ್ ಪರಿಶೀಲನೆಗೆ ತಂಡ ರಚನೆ
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ 'ಆಪರೇಷನ್ ಸಿಂಧೂರ' ಪ್ರಾರಂಭಿಸಿತು. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಒಟ್ಟು ಒಂಬತ್ತು ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿತು. ಆಪರೇಷನ್ ಸಿಂಧೂರ ದಾಳಿಯಲ್ಲಿ ಹಲವು ಉಗ್ರರ ನೆತ್ತರು ಹರಿಸುವಲ್ಲಿ ಭಾರತೀಯ ಸೇನೆ ಮೇಲುಗೈ ಸಾಧಿಸಿದೆ.
ಫೆಬ್ರವರಿ 14, 2019ರಂದು, ಪುಲ್ವಾಮಾದಲ್ಲಿ ಸಿಆರ್ಪಿಎಫ್ ಸಿಬ್ಬಂದಿಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿದರು. ಈ ದಾಳಿಯಲ್ಲಿ 40 ಸೈನಿಕರು ಹುತಾತ್ಮರಾದರು. ಜೈಶ್-ಎ-ಮೊಹಮ್ಮದ್ ಉಗ್ರ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿತು. ಇದಕ್ಕೆ ಪ್ರತೀಕಾರವಾಗಿ, ಭಾರತೀಯ ವಾಯುಪಡೆ ಫೆಬ್ರವರಿ 26ರಂದು ಬಾಲಕೋಟ್ನಲ್ಲಿರುವ ಜೈಶ್ ಭಯೋತ್ಪಾದಕ ಶಿಬಿರದ ಮೇಲೆ ವಾಯುದಾಳಿ ನಡೆಸಿತು. 1971ರ ಯುದ್ಧದ ಬಳಿಕ ಭಾರತೀಯ ವಾಯುಪಡೆ ಪಾಕಿಸ್ತಾನದ ಪ್ರದೇಶವನ್ನು ಪ್ರವೇಶಿಸಿ ವಾಯುದಾಳಿ ನಡೆಸಿದ್ದು ಇದೇ ಮೊದಲು.
ಸೆಪ್ಟೆಂಬರ್ 2016ರಲ್ಲಿ, ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿರುವ ಭಾರತೀಯ ಸೇನಾ ನೆಲೆಯ ಮೇಲೆ ಉಗ್ರರು ದಾಳಿ ನಡೆಸಿದರು. ಈ ದಾಳಿಯಲ್ಲಿ 19 ಜನರು ಸಾವನ್ನಪ್ಪಿದರು. ಆ ಘಟನೆಯ 10 ದಿನಗಳ ನಂತರ, ಭಾರತ ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ, ಹಲವರ ಪ್ರಾಣ ಪಕ್ಷಿಯನ್ನು ಹಾರಿಸಿತು.
ಮೇ 1999ರಲ್ಲಿ, ಪಾಕ್ ಸೇನೆಯು ಕಾರ್ಗಿಲ್ ವಲಯವನ್ನು ಅಕ್ರಮವಾಗಿ ಪ್ರವೇಶಿಸಿತು. ಇದು ಭಾರತ ಆಪರೇಷನ್ ವಿಜಯ್ ಪ್ರಾರಂಭಿಸಲು ದೊಡ್ಡ ಕಾರಣವಾಯಿತು. ಎರಡು ದೇಶಗಳ ನಡುವೆ ಭೀಕರ ಯುದ್ಧ ಸಂಭವಿಸಿತು. ಜುಲೈ ವೇಳೆಗೆ, ಭಾರತ ಆ ಪ್ರದೇಶವನ್ನು ಮರಳಿ ವಶಪಡಿಸಿಕೊಂಡಿದ್ದು ಇತಿಹಾಸ.
ಲಡಾಖ್ನ ಸಿಯಾಚಿನ್ ಹಿಮನದಿಯ ಪ್ರಮುಖ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಭಾರತ 'ಆಪರೇಷನ್ ಮೇಘದೂತ್' ಅನ್ನು ಪ್ರಾರಂಭಿಸಿತು. ಸಾಲ್ಟೊರೊ ರಿಟ್ಜ್ ಮೇಲೆ ಮೇಲುಗೈ ಸಾಧಿಸಿದ ಭಾರತೀಯ ಪಡೆಗಳು, ಆ ಪ್ರದೇಶದಲ್ಲಿ ಶಾಶ್ವತ ನೆಲೆಯನ್ನು ಸ್ಥಾಪಿಸಿತು. ಅತ್ಯುನ್ನತ ಹಂತದಲ್ಲಿ ಈ ಯುದ್ಧಭೂಮಿ ಭಾರತದ ಕಾರ್ಯತಂತ್ರದ ಕೇಂದ್ರವಾಗಿದೆ.
ಪೂರ್ವ ಪಾಕಿಸ್ತಾನದಲ್ಲಿ ಹಿಂಸಾತ್ಮಕ ಘಟನೆಗಳು ನಡೆಯುತ್ತಿರುವಾಗ ಪಾಕ್ ಭಾರತದ ಮೇಲೆ ದಾಳಿ ನಡೆಸಿತು. ಇದು ಎರಡೂ ದೇಶಗಳ ನಡುವೆ ಯುದ್ಧಕ್ಕೆ ಕಾರಣವಾಯಿತು. ಅದೇ ಸಮಯದಲ್ಲಿ, ಡಿಸೆಂಬರ್ 4, 1971 ರಂದು ಭಾರತೀಯ ನೌಕಾಪಡೆಯು ಕರಾಚಿ ಬಂದರನ್ನು ಗುರಿಯಾಗಿಸಿಕೊಂಡು 'ಆಪರೇಷನ್ ಟ್ರೈಡೆಂಟ್' ನಡೆಸಿತು. ಭಾರತೀಯ ಕ್ಷಿಪಣಿ ದೋಣಿಗಳು ಪಾಕಿಸ್ತಾನಿ ನೌಕಾ ಸ್ವತ್ತುಗಳು ಮತ್ತು ಇಂಧನ ನಿಕ್ಷೇಪಗಳನ್ನು ನಾಶಪಡಿಸಿತು. ಆ ಯುದ್ಧದಲ್ಲಿ ಭಾರತೀಯ ನೌಕಾಪಡೆಯು ಪ್ರಾಬಲ್ಯವನ್ನು ತೋರಿಸಿತು. ಅಂತಿಮವಾಗಿ, ಬಾಂಗ್ಲಾದೇಶ ರಚನೆಯೊಂದಿಗೆ ಈ ಯುದ್ಧ ಅಂತ್ಯಕಂಡಿತು.
ಪಾಕಿಸ್ತಾನ ಸೇನೆಯು 1965ರಲ್ಲಿ ಕಾಶ್ಮೀರವನ್ನು ಆಕ್ರಮಿಸಿಕೊಳ್ಳುವ ಉದ್ದೇಶದಿಂದ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದು ಪಾಕಿಸ್ತಾನಿ ಸೈನಿಕರು ಮತ್ತು ಬಂಡುಕೋರರು ವೇಷ ಧರಿಸಿ ಕಾಶ್ಮೀರಕ್ಕೆ ನುಸುಳಲು ನಡೆಸಿದ ರಹಸ್ಯ ಕಾರ್ಯಾಚರಣೆಯಾಗಿತ್ತು. ಇದನ್ನು 'ಆಪರೇಷನ್ ಜಿಬ್ರಾಲ್ಟರ್' ಎಂದು ಹೆಸರಿಸಲಾಯಿತು. ಇದನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿತು. ಎರಡೂ ಕಡೆಗಳಲ್ಲಿ ಭಾರಿ ಪ್ರಾಣಹಾನಿ ಸಂಭವಿಸಿತು. ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ಎರಡನೇ ಅತಿದೊಡ್ಡ ಯುದ್ಧಕ್ಕೆ ಕಾರಣವಾಯಿತು. ವಿಶ್ವಸಂಸ್ಥೆಯ ಆದೇಶದ ಮೇರೆಗೆ 1966ರಲ್ಲಿ ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಸಂಘರ್ಷ ಕೊನೆಗೊಂಡಿತು.
ಸ್ವಾತಂತ್ರ್ಯದ ಕೆಲವು ತಿಂಗಳ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಭುಗಿಲೆದ್ದಿತು. ಇದನ್ನು ಮೊದಲ ಕಾಶ್ಮೀರ ಯುದ್ಧ ಎಂದು ಕರೆಯಲಾಗುತ್ತದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಬೆಂಬಲಿತವಾದ ಬುಡಕಟ್ಟು ಮಿಲಿಟಿಯಾ ಪಡೆಗಳು. ಆ ಸಮಯದಲ್ಲಿ, ಈ ಪ್ರದೇಶದ ಮಹಾರಾಜ ಭಾರತವನ್ನು ಸೇರಲು ತನ್ನ ಸಿದ್ಧತೆಯನ್ನು ವ್ಯಕ್ತಪಡಿಸಿದ್ದರು. ಇದು ಪ್ರದೇಶವನ್ನು ರಕ್ಷಿಸಲು ಭಾರತೀಯ ಪಡೆಗಳನ್ನು ಅಲ್ಲಿಗೆ ಕಳುಹಿಸಿದಾಗ ಎರಡೂ ದೇಶಗಳ ನಡುವೆ ಯುದ್ಧಕ್ಕೆ ಕಾರಣವಾಯಿತು.
ಇದು 1948ರವರೆಗೆ ಮುಂದುವರೆಯಿತು. ವಿಶ್ವಸಂಸ್ಥೆಯ ಹಸ್ತಕ್ಷೇಪದೊಂದಿಗೆ ಎರಡೂ ದೇಶಗಳ ನಡುವಿನ ಯುದ್ಧ ಸಮರ ಅಂತ್ಯ ಕಂಡಿತು. ಜಮ್ಮು ಮತ್ತು ಕಾಶ್ಮೀರದ ಮೂರನೇ ಎರಡರಷ್ಟು ಪ್ರದೇಶವು ಭಾರತದ ನಿಯಂತ್ರಣಕ್ಕೆ ಬಂದರೂ, ಉಳಿದ ಭಾಗವು ಪಾಕಿಸ್ತಾನದ ನಿಯಂತ್ರಣದಲ್ಲಿ ಉಳಿಯಿತು. ಅದನ್ನೇ ಇಂದು ನಾವು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಎಂದು ಕರೆಯುತ್ತೇವೆ,(ಏಜೆನ್ಸೀಸ್).