

ಮೈಸೂರು: ಮೀಸಲಾತಿಯ ಪ್ರಯೋಜನ ಪಡೆದುಕೊಂಡಿರುವ ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳೇ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಬೇಕು. ಅಂಬೇಡ್ಕರ್ ಕಂಡ ಕನಸು ನನಸಾಗಬೇಕಾದರೆ ಸಾಮಾಜಿಕ ನ್ಯಾಯ, ಸಮಾನತೆ ದೊರೆಯಬೇಕು ಎಂದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ತಾಲೂಕಿನ ದೂರ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಡಾ.ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಮಾತನಾಡಿ, ಡಾ.ಅಂಬೇಡ್ಕರ್ ಅವರು ಸಂವಿಧಾನ ತಂದು ಕೊಟ್ಟ 75 ವರ್ಷಗಳ ನಂತರ ಸಾಕಷ್ಟು ಬದಲಾವಣೆಗಳಾಗುತ್ತಿದೆ. ಕರ್ನಾಟಕದಲ್ಲಿ ಶಾಲಾ, ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವುದು ಶುರು ಮಾಡಿದ ಮೇಲೆ ಅದರ ಮಹತ್ವ ಗೊತ್ತಾಗುತ್ತಿದೆ. ಕೇಂದ್ರ ಸರ್ಕಾರವು ಜಯಂತಿ ದಿನದಂದು ಸರ್ಕಾರಿ ರಜೆ ಘೋಷಣೆ ಮಾಡಿದ್ದು ಪ್ರಮುಖವಾಗಿದೆ ಎಂದರು.
ಮೀಸಲಾತಿಯ ಪ್ರಯೋಜನ ಪಡೆದು ಶಾಸಕರು, ಸಚಿವರಾಗಿದ್ದಾರೆ. ಕಿರಿಯ ಸಿಬ್ಬಂದಿಯಿಂದ ಉನ್ನತ ಮಟ್ಟದ ಸ್ಥಾನವನ್ನು ಅಲಂಕರಿಸಿದ್ದಾರೆ. ಹಾಗೆಯೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಸೇರಿದಂತೆ ಎಲ್ಲರೂ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಬೇಕಿದೆ ಎಂದು ಸಲಹೆ ನೀಡಿದರು.
ಬಾಬಾ ಸಾಹೇಬರು ದಲಿತರ ಅಂಬೇಡ್ಕರ್ ಅಲ್ಲ. 140 ಕೋಟಿ ಜನರಿಗೆ ಸೇರಿದ ಅಂಬೇಡ್ಕರ್ ಆಗಿದ್ದಾರೆ. ಇಡೀ ದೇಶದ ಶೋಷಿತರು, ದಮನಿತರು, ನೊಂದವರ ಪರವಾಗಿ ಸಂವಿಧಾನ ಬರೆದು ಅಸಮಾನತೆ ತೊಡೆದು ಹಾಕಿ ಸಮಾನತೆಯನ್ನು ತರಲು ತಮ್ಮ ಜೀವವನ್ನೇ ಮುಡಿಪಾಗಿಟ್ಟರು. ಇಂದು ದೇಶಾದ್ಯಂತ ಪಕ್ಷ, ಜಾತಿ ಇಲ್ಲದೆ ಎಲ್ಲರೂ ಒಂದೇ ಎನ್ನುವ ಮನೋಭಾವದಿಂದ ಜಯಂತಿ ಆಚರಿಸಲಾಗುತ್ತಿದೆ ಎಂದರು.
ಬಡವನಿಂದ ಶ್ರೀಮಂತನ ತನಕವೂ ಒಂದೇ ಒಂದು ಮತದ ಹಕ್ಕನ್ನು ನೀಡಿದರು. ಸ್ವಾತಂತ್ರ್ಯಕ್ಕೂ ಮುನ್ನ ಹಣವುಳ್ಳವರು, ವಿದ್ಯಾವಂತರಿಗೆ ಮಾತ್ರ ಇರುತ್ತಿತ್ತು. ಇಂದು ಗ್ರಾಪಂ ಸದಸ್ಯನಿಂದ ಪ್ರಧಾನಿ ತನಕ ಒಂದು ಮತ. ಒಂದೇ ಮತದಲ್ಲಿ ಅಟಲ್ಬಿಹಾರಿ ವಾಜಪೇಯಿ ಸರ್ಕಾರ ಬಿದ್ದು ಹೋಯಿತು. ಎ.ಆರ್.ಕೃಷ್ಣಮೂರ್ತಿ ಒಂದೇ ವೋಟ್ನಲ್ಲಿ ಸೋಲು ಕಂಡರು ಎಂದರು.
ಅಂಬೇಡ್ಕರ್ ಬಗ್ಗೆ ಬರೀ ಮಾತನಾಡುವುದಲ್ಲ. ಅವರ ಸಂದೇಶವನ್ನು ಎಷ್ಟು ಪಾಲನೆ ಮಾಡುತ್ತಿದ್ದೇವೆ ಎಂಬುದು ಮುಖ್ಯ. ಜೀವನದಲ್ಲಿ ಕನಿಷ್ಠ ಶೇ.20ರಿಂದ 50ರಷ್ಟಾದರೂ ಆಚರಣೆ ಮಾಡುತ್ತೇವೆ ಎನ್ನುವುದು ಇರಬೇಕು ಎಂದರು.
ಶೀಘ್ರ ಸಾಗುವಳಿ: ಹಲವಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವ ಕುರಿತು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರೊಂದಿಗೆ ಚರ್ಚಿಸಲಾಗಿದೆ. ಶೀಘ್ರದಲ್ಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವ ಮಾತನ್ನು ಹೇಳಿದ್ದಾರೆ. ಜಮೀನು ದುರಸ್ತಿ, ಪೋಡು ಮಾಡಿಸಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡಲಾಗುವುದು ಎಂದು ಭರವಸೆ ನೀಡಿದರು.
ಉದ್ಬೂರು ಗ್ರಾಮಕ್ಕೆ 5.5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಶುರುವಾಗಿದೆ. ಉದ್ಬೂರಿನಿಂದ ದೂರ ಗ್ರಾಮದ ರಸ್ತೆ ಕಾಮಗಾರಿಗೆ ಅನುದಾನ ಮಂಜೂರು ಮಾಡುವಂತೆ ಸಲ್ಲಿಸಿದ ಮನವಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ ಎಂದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಮೇಯರ್ ಪುರುಷೋತ್ತಮ್, ಮುಡಾ ಮಾಜಿ ಅಧ್ಯಕ್ಷ ಮರಿಗೌಡ ಸೇರಿದಂತೆ ಇತರರಿದ್ದರು.