

‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ವಿವರವನ್ನು ಮಾಧ್ಯಮಗಳಿಗೆ ಒದಗಿಸುವಲ್ಲಿ ಸರ್ಕಾರ ವಿಭಿನ್ನ ನಡೆಯನ್ನು ಅನುಸರಿಸಿತು. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರೊಂದಿಗೆ ರಕ್ಷಣಾ ಇಲಾಖೆಯ ಮಹಿಳಾ ಅಧಿಕಾರಿಗಳಾದ ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಮೂಲಕ ಭಾರತವು ಪಾಕಿಸ್ತಾನದ ಉನ್ನತ ಮಿಲಿಟರಿ ಅಧಿಕಾರಿಗಳು ಪ್ರತಿಪಾದಿಸಿದ ‘ಎರಡು ರಾಷ್ಟ್ರ’ ಸಿದ್ಧಾಂತಕ್ಕೆ ತಕ್ಕ ತಿರುಗೇಟನ್ನು ನೀಡಿದೆ. ಏಪ್ರಿಲ್ 16ರಂದು ನಡೆದಿದ್ದ ಸಮಾವೇಶವೊಂದರಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್, ‘ಹಿಂದುಗಳು ಮತ್ತು ಮುಸ್ಲಿಮರು ವಿಭಿನ್ನ ರಾಷ್ಟ್ರಗಳು’ ಎಂದು ಹೇಳಿದ್ದರು.
ನವದೆಹಲಿ: ಆಪರೇಷನ್ ಸಿಂಧೂರಕ್ಕೆ ಸಂಬಂಧಪಟ್ಟಂತೆ ಬುಧವಾರ ಬೆಳಗ್ಗೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಹಿಳಾ ಸೇನಾಧಿಕಾರಿಗಳು ಮಾಹಿತಿ ನೀಡಿದ್ದು, ಈ ಮೂಲಕ ನಾರಿಶಕ್ತಿಯ ಪ್ರದರ್ಶನವಾಗಿದೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಸುದ್ದಿಗೋಷ್ಠಿ ನಡೆಸಿದರು. ಮೊದಲು ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಪಾಕಿಸ್ತಾನವು ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿದೆ. ಪಾಕಿಸ್ತಾನದಲ್ಲಿನ ಭಯೋತ್ಪಾದಕರ ನೆಲೆಗಳನ್ನು ನಾಶಪಡಿಸುವ ನಿಟ್ಟಿನಲ್ಲಿ ನಮ್ಮ ಹಕ್ಕು ಚಲಾಯಿಸಿದ್ದೇವೆ. ಏಪ್ರಿಲ್ 22ರಂದು ಪಹಲ್ಗಾಮ್ಲ್ಲಿ ದಾಳಿ ನಡೆಸಿದ ಉಗ್ರರನ್ನು ಶಿಕ್ಷೆಗೆ ಗುರಿಪಡಿಸಲು ದಾಳಿ ನಡೆದು 15 ದಿನಗಳು ಕಳೆದರೂ, ಪಾಕಿಸ್ತಾನವು ತನ್ನ ಭೂಪ್ರದೇಶ ಹಾಗೂ ಅದರ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿನ ಉಗ್ರರ ನೆಲೆಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ, ಭಾರತದ ವಿರುದ್ಧವೇ ಆರೋಪಗಳನ್ನು ಮಾಡುತ್ತಿತ್ತು ಎಂದು ಕಿಡಿಕಾರಿದರು.
ಬಳಿಕ ಮಾತನಾಡಿದ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಭಾರತದ ವಾಯುಪಡೆ ನಡೆಸಿದ ಕಾರ್ಯಾಚರಣೆ ಹೇಗಿತ್ತು ಎಂಬ ವಿವರಣೆ ನೀಡಿದರು. ಭಾರತದ ಗಡಿ ಭಾಗದಿಂದ 15 ರಿಂದ 18 ಕಿಲೋಮೀಟರ್ ದೂರದಲ್ಲಿರುವ 9 ಉಗ್ರರ ಕ್ಯಾಂಪ್ಗಳ ಮೇಲೆ ಸೇನೆ ದಾಳಿ ನಡೆಸಿ ಧ್ವಂಸಗೊಳಿಸಿರುವುದನ್ನು ವಿವರಿಸಿದರು. ರಾತ್ರಿ 1.30ರ ಸಮಯದಲ್ಲಿ ಭಾರತೀಯ ಸೇನೆಯು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ವಾಯುದಾಳಿ ನಡೆಸಿದೆ. ಈ ಜಾಗಗಳಿಂದಲೇ ಭಯೋತ್ಪಾದಕ ಕೃತ್ಯ ನಡೆಸಲು ಯೋಜನೆ ರೂಪಿಸಿ ಕೆಲಸ ಮಾಡಲಾಗುತ್ತಿತ್ತು. ನಮ್ಮ ಸೇನೆ ಬಹಳ ಜಾಗರೂಕವಾಗಿ ಕೇವಲ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಿದೆ ಎಂದರು.
ಕಳೆದ 3 ದಶಕಗಳಿಂದ ಉಗ್ರವಾದ ಬೆಳೆಯುತ್ತಲೇ ಇದ್ದು, ಪಾಕಿಸ್ತಾನ, ಪಿಒಕೆ ಭಾಗದಲ್ಲಿ ಹರಡಿಕೊಂಡಿದೆ. ಭಾರತೀಯ ಸೇನೆ, ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿಲ್ಲ ಹಾಗೂ ಯಾವುದೇ ನಾಗರಿಕರಿಗೂ ಹಾನಿ ಉಂಟು ಮಾಡಿಲ್ಲ. ಭಾರತೀಯ ಸೇನೆ ಪ್ರಮುಖವಾಗಿ ಪಿಒಕೆಯಲ್ಲಿದ್ದ 21 ಉಗ್ರರ ಕ್ಯಾಂಪ್ಗಳನ್ನು ಟಾರ್ಗೆಟ್ ಮಾಡಿತ್ತು. ಕಳೆದ 30 ವರ್ಷಗಳಿಂದ ಈ ಕ್ಯಾಂಪ್ಗಳಲ್ಲೇ ಉಗ್ರರ ನೇಮಕಾತಿ ನಡೆಸಿ ತರಬೇತಿ ಕೊಡಲಾಗುತ್ತಿದೆ. ಉಗ್ರರ ಟ್ರೖೆನಿಂಗ್ ಸೆಂಟರ್ಗಳೇ ನಮ್ಮ ಸೇನೆಯ ಗುರಿಯಾಗಿತ್ತು. ಇಂಟೆಲಿಜೆನ್ಸ್ ನೀಡಿರುವ ಮಾಹಿತಿಯ ಆಧಾರದ ಮೇರೆಗೆ ದಾಳಿ ಮಾಡುವ ಜಾಗಗಳನ್ನು ಆಯ್ಕೆ ಮಾಡಿಕೊಂಡು ನಾಗರಿಕರು, ಸೇನೆಗೆ ತೊಂದರೆಯಾಗದಂತೆ ಉಗ್ರರ ಕಟ್ಟಡಗಳನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಿದ್ದೇವೆ ಎಂದು ಮಹಿಳಾ ಅಧಿಕಾರಿಗಳು ತಿಳಿಸಿದರು.
ವಿಡಿಯೋ ಬಿಡುಗಡೆ: ಭಯೋತ್ಪಾದಕ ದಾಳಿಯಿಂದ ಭಾರತದಲ್ಲಾದ ಸಾವು-ನೋವುಗಳಿಗೆ ಸಂಬಂಧಿಸಿದ ವಿಡಿಯೋವನ್ನು ಅಧಿಕಾರಿಗಳು ಪ್ರಸಾರ ಮಾಡಿದರು. ಕಳೆದೊಂದು ದಶಕದಲ್ಲಿ ಪಾಕಿಸ್ತಾನದ ಭಯೋತ್ಪಾದಕ ದಾಳಿಗಳಿಗೆ 350ಕ್ಕೂ ಹೆಚ್ಚು ಭಾರತೀಯ ನಾಗರಿಕರು ಬಲಿಯಾಗಿದ್ದು, 800ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಭದ್ರತಾ ಪಡೆಯ 600ಕ್ಕೂ ಹೆಚ್ಚು ಯೋಧರು ಉಗ್ರರ ದಾಳಿಯಲ್ಲಿ ಜೀವ ಕಳೆದುಕೊಂಡಿದ್ದರೆ, 1,400ಕ್ಕೂ ಹೆಚ್ಚು ಯೋಧರು ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ ಎಂದು ವಿಡಿಯೋ ಮೂಲಕ ಸೇನೆ ಮಾಹಿತಿ ಹಂಚಿಕೊಂಡಿದೆ.
ಮೂಲತಃ ಗುಜರಾತಿನ ವಡೋದರಾದವರಾಗಿರುವ ಸೋಫಿಯಾ ಖುರೇಷಿ ಸೇನಾ ಹಿನ್ನೆಲೆಯುಳ್ಳ ಕುಟುಂಬದವರು. ಖುರೇಷಿ ತಾತ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಇವರ ತಂದೆ ಸಹ ಸೈನ್ಯದಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೈವಿಕ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸೋಫಿಯಾ ಖುರೇಷಿ, 1999ರಲ್ಲಿ ಚೆನ್ನೆ ೖನ ಆಫೀಸರ್ಸ್ ಟ್ರೖೆನಿಂಗ್ ಅಕಾಡೆಮಿ ಮೂಲಕ ನಿಯೋಜಿತಗೊಂಡು, ಭಾರತೀಯ ಸೇನೆಯ ಪ್ರಮುಖ ಶಾಖೆಯಾದ ಕೋರ್ ಆಫ್ ಸಿಗ್ನಲ್ಸ್ಗೆ ಸೇರಿದರು. 2006ರಲ್ಲಿ ಕಾಂಗೋದಲ್ಲಿ ನಡೆದ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 2016ರಲ್ಲಿ ಎಕ್ಸ್ಸೈರ್ಸ್ ಫೋರ್ಸ್ 18 ಎಂಬ ಬಹುರಾಷ್ಟ್ರೀಯ ಮಿಲಿಟರಿ ಸಮರಾಭ್ಯಾಸದಲ್ಲಿ ಭಾರತೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆ ಪಾತ್ರರಾದವರು. ಖುರೇಷಿ ಪಂಜಾಬ್ ಗಡಿಯಲ್ಲಿ ನಡೆದ ‘ಆಪರೇಷನ್ ಪರಾಕ್ರಮ್ನಲ್ಲಿ ಭಾಗವಹಿಸಿದ್ದರು. 2010ರಿಂದ ನವದೆಹಲಿಯಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳ ಕೇಂದ್ರದೊಂದಿಗೆ ಕೆಲಸ ಮಾಡುತ್ತಿದ್ದಾರೆ.
ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಪೈಲಟ್ ಆಗಿರುವ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಇಂಜಿನಿಯರಿಂಗ್ ಪದವಿ ಪಡೆದಿದ್ದು, ಅವರ ಕುಟುಂಬದಲ್ಲಿ ಸಶಸ್ತ್ರ ಪಡೆ ಸೇರಿದ ಮೊದಲಿಗರಾಗಿದ್ದಾರೆ. 2019ರ ಡಿಸೆಂಬರ್ 18ರಂದು ಭಾರತೀಯ ವಾಯು ಪಡೆಯಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿ ನಿಯೋಜನೆಗೊಂಡಿರುವ ವ್ಯೋಮಿಕಾ, 2,500ಕ್ಕೂ ಹೆಚ್ಚು ಗಂಟೆಗಳ ಕಾಲ ಹೆಲಿಕಾಪ್ಟರ್ ಹಾರಾಟದ ಅನುಭವ ಹೊಂದಿದ್ದಾರೆ. ಭಾರತದ ಅತ್ಯಂತ ಸವಾಲಿನ ಭೂಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರದ ಎತ್ತರದ ವಲಯಗಳಿಂದ ಹಿಡಿದು ಈಶಾನ್ಯ ಭಾರತದವರೆಗೆ ಚೇತಕ್ ಮತ್ತು ಚೀತಾದಂತಹ ಹೆಲಿಕಾಪ್ಟರ್ಗಳ ಹಾರಾಟದ ಕಾರ್ಯ ನಿರ್ವಹಿಸಿದ್ದಾರೆ. 2020ರಲ್ಲಿ, ಅರುಣಾಚಲ ಪ್ರದೇಶದಲ್ಲಿ ಪ್ರಮುಖ ರಕ್ಷಣಾ ಕಾರ್ಯಾಚರಣೆಯನ್ನು ಮುನ್ನಡೆಸಿ, ನಾಗರಿಕರನ್ನು ಸ್ಥಳಾಂತರಿಸಲು ಯಶಸ್ವಿಯಾಗಿದ್ದಾರೆ. ತಮ್ಮ ಸಾಮರ್ಥ್ಯ ಮತ್ತು ಧೈರ್ಯದಿಂದ ವಾಯುಪಡೆಯ ಉನ್ನತ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿರುವ ವ್ಯೋಮಿಕಾ, ವಾಯುಪಡೆಯ ಮುಖ್ಯಸ್ಥರಾದ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ರಿಂದ ಪ್ರಶಂಸಾ ಪತ್ರಗಳನ್ನು ಪಡೆದಿದ್ದಾರೆ.