

ವಿಜಯವಾಣಿ ಸುದ್ದಿಜಾಲ ಬೆಂಗಳೂರು
‘ಎಕೆ 47’, ‘ಲಾಕಪ್ ಡೆತ್’, ‘ಮಂಡ್ಯ’, ‘ಹುಬ್ಬಳ್ಳಿ’ ಸೇರಿ 48 ಸಿನಿಮಾಗಳನ್ನು ನಿರ್ದೇಶಿಸಿರುವ ಓಂಪ್ರಕಾಶ್ ರಾವ್, ಇದೀಗ ‘ಫೀನಿಕ್ಸ್’ ಎಂಬ 49ನೇ ಚಿತ್ರದೊಂದಿಗೆ ಫೀನಿಕ್ಸ್‌ನಂತೆಯೇ ವಾಪಸ್ಸಾಗಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಇತ್ತೀಚೆಗಷ್ಟೆ ಮುಹೂರ್ತ ನೆರವೇರಿತು. ಓಂಪ್ರಕಾಶ್ ರಾವ್, ‘ರಿಮೇಕ್‌ಗಳಿಗೆ ಬ್ರೇಕ್ ಹಾಕಿ ಸ್ವಮೇಕ್‌ನತ್ತ ಗಮನ ಹರಿಸಿದ್ದೇನೆ. ಇದು ಕ್ರೈಮ್ ಥ್ರಿಲ್ಲರ್ ಜಾನರ್ ಚಿತ್ರವಾಗಿದ್ದು, ನಾಯಕಿಯರಾಗಿ ನಿಮಿಕಾ ರತ್ನಾಕರ್, ಕೃತಿಕಾ ಲೋಬೊ ಮತ್ತು ತನುಷಾ ರಜಪುತ್ ನಟಿಸುತ್ತಿದ್ದಾರೆ. ಭಾಸ್ಕರ್ ಶೆಟ್ಟಿ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಬೆಂಗಳೂರು, ಜರ್ಮನಿ ಹಾಗೂ ಆಸ್ಟ್ರಿಯಾದಲ್ಲಿ ಚಿತ್ರೀಕರಣ ನಡೆಸುವ ಪ್ಲ್ಯಾನ್ ಇದೆ’ ಎಂದು ಮಾಹಿತಿ ನೀಡಿದರು.
ನಾಯಕಿ ನಿಮಿತಾ ರತ್ನಾಕರ್, ‘ಟೈಟಲ್ ಕೇಳಿಯೇ ನನಗೆ ಈ ಚಿತ್ರದಲ್ಲಿ ನಟಿಸುವ ಆಸೆಯಾಯಿತು. ಕಥೆ ಕೇಳಿದ ಮೇಲಂತೂ ಬಹಳ ಖುಷಿಯಾಯಿತು. ನಾನು ಇದುವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂದರು. ಓಂಪ್ರಕಾಶ್ ರಾವ್ ನಿರ್ದೇಶನದಲ್ಲಿ ಮೂರನೇ ಬಾರಿಗೆ ನಟಿಸುತ್ತಿರುವ ಬಗ್ಗೆ ಮತ್ತೊಬ್ಬ ನಾಯಕಿ ಕೃತಿಕಾ ಹೇಳಿಕೊಂಡರು.
ಇದುವರೆಗೆ 90 ಚಿತ್ರಗಳಲ್ಲಿ ನಟಿಸಿರುವ ಭಾಸ್ಕರ್ ಶೆಟ್ಟಿ, ‘ಫೀನಿಕ್ಸ್’ನಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಉಳಿದಂತೆ ಕಾಕ್ರೋಚ್ ಸುಧಿ, ವಿನೋದ್ ಕಿನಿ, ರೋಬೋ ಗಣೇಶ್, ಆರ್ಯನ್ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಸಾಧು ಕೋಕಿಲ ಸಂಗೀತ, ರವಿಕುಮಾರ್ ಛಾಯಾಗ್ರಹಣ, ಲಕ್ಷ್ಮಣ್ ಸಂಕಲನವಿರಲಿದೆ.