ಕರೊನಾವೈರಸ್ ತಗುಲಿತೆಂಬ ಸಂಶಯದಿಂದಲೇ ವಿಷಸೇವಿಸಿ ಪ್ರಾಣಬಿಟ್ಟ ವೃದ್ಧದಂಪತಿ.. ಪತ್ರದಲ್ಲೇನಿತ್ತು?

Poison
Published on

ಹೈದರಾಬಾದ್: ಕರೊನಾವೈರಸ್​​ಗೆ ತುತ್ತಾಗಿರುವ ಅನುಮಾನದ ಮೇಲೆ ವೃದ್ಧ ದಂಪತಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್‌ನ ಪಂಜಗುಟ್ಟದಲ್ಲಿ ನಡೆದಿದೆ.

63 ವರ್ಷದ ವೃದ್ಧ ಹಾಗೂ ಅವರ 60 ವರ್ಷದ ಪತ್ನಿ ಆತ್ಮಹತ್ಯೆ ಮಾಡಿಕೊಂಡವರು.

ಕಳೆದ ಕೆಲವು ದಿನಗಳಿಂದ ಶೀತ ಮತ್ತು ಜ್ವರದಿಂದ ಬಳಲುತ್ತಿದ್ದ ಅವರು ತಮಗೆ ಸೋಂಕು ತಗುಲಿರಬಹುದು ಮತ್ತು ಅದು ಕುಟುಂಬದ ಇತರ ಸದಸ್ಯರಿಗೂ ಹರಡಬಹುದೆಂದು ಭಯಪಟ್ಟಿದ್ದರು.

ವೃದ್ಧ ದಂಪತಿ ತಮ್ಮ ಪುತ್ರರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ಘಟನಾ ಸ್ಥಳದಿಂದ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಶನಿವಾರ ಬೆಳಿಗ್ಗೆ 11: 30 ಕ್ಕೆ ಅವರ ಮಗ ಅವರನ್ನು ಭೇಟಿಯಾಗಲು ಮನೆಗೆ ಬಂದಾಗ ಆ ಮನೆ ಬೀಗ ಹಾಕಿರುವುದನ್ನು ಕಂಡರು. ಕಿಟಕಿಯಲ್ಲಿ ಇಣುಕಿ ನೋಡಿದಾಗ, ಅವರ ತಂದೆ ತಾಯಿ ನೆಲದ ಮೇಲೆ ಮಲಗಿರುವುದನ್ನು ಗಮನಿಸಿದರು. ಆಘಾತಗೊಂಡ ಅವರು ತಕ್ಷಣ ಬಲವಾಗಿ ಬಾಗಿಲು ತಳ್ಳಿ ತೆರೆದಾಗ ಅದಾಗಲೇ ವೃದ್ಧ ದಂಪತಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಕುರಿತು ಅವರು ಪೊಲೀಸರಿಗೆ ಮಾಹಿತಿ ನೀಡಿದರು.

ವೃದ್ಧೆ ಬರೆದಿಟ್ಟ ಆತ್ಮಹತ್ಯೆ ಪತ್ರದಲ್ಲೇನಿದೆ? :ಶವಗಳ ಬಳಿ ಆತ್ಮಹತ್ಯೆ ಪತ್ರ ಕಂಡುಬಂದಿದ್ದು, ಅದನ್ನು ವೃದ್ಧೆ ಬರೆದಿದ್ದಾರೆನ್ನಲಾಗಿದೆ. 'ಕಳೆದ ಕೆಲವು ದಿನಗಳಿಂದ ತಾನು ಮತ್ತು ಪತಿ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದೆವು' ಎಂದು ಪತ್ರದಲ್ಲಿ ಬರೆಯಲಾಗಿದೆ. ತಮಗೆ ಕರೊನಾವೈರಸ್ ತಗುಲಿರಬಹುದು ಮತ್ತು ಅವರ ಮಕ್ಕಳು ಮತ್ತು ಮೊಮ್ಮಕ್ಕಳಿಗೂ ಇದು ಹರಡಬಹುದೆಂದು ಶಂಕಿಸಿ, ಅವರು ಕೀಟನಾಶಕ ಸೇವಿಸಿದ್ದಾರೆ” ಎನ್ನಲಾಗಿದೆ.

ಆದರೆ ಮೃತ ದಂಪತಿ COVID-19 ಪರೀಕ್ಷೆಗೆ ಒಳಗಾಗಿದ್ದರೇ? ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ದಂಪತಿಯನ್ನು ಮಕ್ಕಳು ಆಗಾಗ್ಗೆ ಭೇಟಿ ಮಾಡುತ್ತಿದ್ದರು ಎಂದು ಪಂಜಗುಟ್ಟಾ ವಿಭಾಗ ಸಹಾಯಕ ಪೊಲೀಸ್ ಆಯುಕ್ತರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವೃದ್ಧ ದಂಪತಿ ಶನಿವಾರ ಬೆಳಿಗ್ಗೆ ಸಾವಿಗೀಡಾದ ಐದು ಗಂಟೆಗಳ ನಂತರ ಈ ಘಟನೆ ಬೆಳಕಿಗೆ ಬಂದಿದೆ ಎಂದು ತನಿಖಾ ಅಧಿಕಾರಿಗಳು ಶಂಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net