ಬಿಸಿಯೂಟದ ಜತೆಗೆ ಮಕ್ಕಳಿಗೆ ಇನ್ಮುಂದೆ ಉಪಾಹಾರ- ಹೊಸ ನಿಯಮದಲ್ಲೇನಿದೆ?

bisiyuta
Published on

ನವದೆಹಲಿ: ಕೇಂದ್ರ ಸರ್ಕಾರ ಇದಾಗಲೇ ಜಾರಿಗೆ ತಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್‍ಇಪಿ) ಶಾಲೆಯ ಪಠ್ಯಕ್ರಮಗಳು ಸೇರಿದಂತೆ ಕೆಲವೊಂದು ಮಹತ್ತರ ಬದಲಾವಣೆಯನ್ನು ಮಾಡಲಾಗಿದೆ.

ಈ ಪೈಕಿ ಒಂದು ಬದಲಾವಣೆ ಎಂದರೆ ಶಾಲಾ ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರ ನೀಡುವ ಯೋಜನೆ. ಈ ಯೋಜನೆಯು ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಅನ್ವಯ ಆಗಲಿದೆ. ಮಧ್ಯಾಹ್ನದ ಬಿಸಿಯೂಟದ ಜತೆಗೆ ಉಪಾಹಾರವನ್ನೂ ಉಚಿತವಾಗಿ ನೀಡಲು ಈ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ.

ಮಕ್ಕಳು ಬೌದ್ಧಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಪೌಷ್ಟಿಕಾಂಶವುಳ್ಳ ಉಪಾಹಾರ ಅಗತ್ಯವಾಗಿದೆ. ಎಷ್ಟೋ ವಿದ್ಯಾರ್ಥಿಗಳಿಗೆ ಆಹಾರ ಸಿಗದಂಥ ಪರಿಸ್ಥಿತಿ ಇದೆ. ಇದೇ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗುವುದು ಇದೆ. ಈ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ನೀಡುತ್ತಿದ್ದ ಬಿಸಿಯೂಟದ ಜತೆಜತೆಗೆ ಬೆಳಗಿನ ತಿಂಡಿಯನ್ನೂ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಈ ಬಗ್ಗೆ ಎನ್‌ಇಪಿಯಲ್ಲಿ ಪ್ರಸ್ತಾಪಿಸಲಾಗಿದೆ.

ಮಕ್ಕಳು ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸದಿದ್ದರೆ ಅವರಲ್ಲಿ ಗರಿಷ್ಠ ಕಲಿಕೆ ಕೊರತೆ ಕಂಡುಬರುತ್ತದೆ. ಆದಕಾರಣ, ಪೋಷಣೆ ಮತ್ತು ಆರೋಗ್ಯಕ್ಕೆ (ಮಾನಸಿಕ ಆರೋಗ್ಯ) ಆದ್ಯತೆ ನೀಡಬೇಕು. ಈ ಹಿನ್ನೆಲೆಯಲ್ಲಿ ಬೆಳಗಿನ ಉಪಾಹಾರ ಬಹು ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಮಕ್ಕಳ ಅರಿವು ಮತ್ತು ಕಲಿಕೆ ಸಾಮಥ್ಯರ್ ವೃದ್ದಿಯಾಗುತ್ತದೆ ಎಂದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿವರಿಸಲಾಗಿದೆ.

ಮಕ್ಕಳಿಗೆ ಆರೋಗ್ಯಕರ ಉಪಾಹಾರ ಮತ್ತು ಊಟದ ವ್ಯವಸ್ಥೆ ಜತೆಗೆ ಅವರ ಶಿಕ್ಷಣ ಕಲಿಕೆ ಹೆಚ್ಚಳಕ್ಕಾಗಿ ತರಬೇತಿ ಪಡೆದ ಸಾಮಾಜಿಕ ಕಾರ್ಯಕರ್ತರು, ಆಪ್ತಸಮಾಲೋಚಕರು, ಸಮುದಾಯ ಸೇವೆಯಲ್ಲಿ ತೊಡಗುವವರನ್ನು ಬಳಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net