

ಸಿಂಧನೂರು: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಈ ಬಾರಿ ಎಂಬತ್ತಕ್ಕೂ ಅಧಿಕ ವರ್ಷದ ವೃದ್ಧರಿಗೆ ಮನೆಯಿಂದಲೇ ಮತದಾನ ಮಾಡಲು ಆಯೋಗ ಅವಕಾಶ ನೀಡಲಾಗಿದೆ. ಈಗಾಗಲೇ ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಅಶಕ್ತರ ಮನೆಗೆ ತೆರಳಿ ಚುನಾವಣಾ ಅಧಿಕಾರಿಗಳು ಮತದಾನ ಮಾಡಿಸುತ್ತಿದ್ದಾರೆ.
ಇದೀಗ ಅಜ್ಜಿಯೊಬ್ಬರು ಮನೆಯಲ್ಲಿ ಮತದಾನ ಮಾಡಿದ ಅರ್ಧಗಂಟೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತಾಲೂಕಿನ ಅಲಬನೂರು ಗ್ರಾಮದ ಮಂಗಮ್ಮ ರಾಜಪ್ಪ ಅಗಸರ(82) ಮೃತಪಟ್ಟ ಅಜ್ಜಿ. ಈ ವಿಷಯವನ್ನು ಸಹಾಯಕ ಚುನಾವಣಾಧಿಕಾರಿ ಅರುಣ ಎಚ್.ದೇಸಾಯಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪಿಆರ್‌ಓ ದಿನೇಶ ಕೆ.ಪಿ ಹಾಗೂ ಎಪಿಆರ್‌ಓ ಬಸಪ್ಪ ಹೆಚ್. ಹಾಗೂ ಸಿಬ್ಬಂದಿ ಮಂಗಮ್ಮ ಅವರ ಮನೆಗೆ ತೆರಳಿದ್ದರು. ಮತಪತ್ರ ಸಂಖ್ಯೆ 349 ಪಡೆದು ಮಧ್ಯಾಹ್ನ 12.20ರ ಸುಮಾರಿಗೆ ಮತದಾನ ಮಾಡಿದ್ದರು. ಇದಾಗಿ 12.50 ಸುಮಾರಿಗೆ ಅಜ್ಜಿ ನಿಧನರಾಗಿದ್ದಾರೆ.