More

    ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಪ್ರಸ್ತಾಪ | ‘ಕೈ’ ನಾಯಕರಲ್ಲೇ ಗೊಂದಲ; ನಿಷೇಧ ಕೈಬಿಡುವಂತೆ ಹಲವರಿಂದ ಒತ್ತಾಯ

    ಬೆಂಗಳೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪವಾಗುತ್ತಿದ್ದಂತೆ ಹಿಂದೂಪರ ಸಂಘಟನೆಗಳು ಸಿಡಿದೆದ್ದಿವೆ. ರಾಜ್ಯದ ಬಹುತೇಕ ಕಡೆಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದು ಚುನಾವಣೆಯ ದೃಷ್ಟಿಯಿಂದ ಕಾಂಗ್ರೆಸ್​ಗೆ ಹಿನ್ನೆಡೆ ಆಗಬಹುದು ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಇದೀಗ ಬಜರಂಗದಳ ನಿಷೇಧ ಮಾಡುತ್ತೇವೆ ಎಂದಿರುವುದಕ್ಕೆ ಕಾಂಗ್ರೆಸ್​ನ ಕೆಲ ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗುತ್ತಿದೆ.

    ಸಲಹೆ ಕೇಳಬೇಕಿತ್ತು…

    ಪ್ರಣಾಳಿಕೆ ಸಿದ್ಧಪಡಿಸುವ ವೇಳೆ ನಮ್ಮ ಅಭಿಪ್ರಾಯ ಸಂಗ್ರಹಿಸಬೇಕಿತ್ತು. ನಮ್ಮ ಸಲಹೆಗಳನ್ನು ಸ್ವೀಕರಿಸದೆ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ಇದು ಚುನಾವಣೆಯ ಹೊತ್ತಿನಲ್ಲಿ ಬಿಜೆಪಿಗೆ ಲಾಭ ಮಾಡಿಕೊಟ್ಟಂತಾಗಿದೆ. ಕೆಲವು ಸೂಕ್ಷ್ಮ ವಿಚಾರಗಳನ್ನು ಗಮನಿಸದೆ ಪ್ರಣಾಳಿಕೆ ಸಿದ್ಧಪಡಿಸಿದರೆ ಇಂತಹ ಎಡವಟ್ಟು ಆಗುತ್ತದೆ ಎಂದು ಕೆಲ ಕಾಂಗ್ರೆಸ್​ನ ಹಿರಿಯ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಪ್ರಧಾನಿ ಮೋದಿ ಮೂರನೇ ಚುನಾವಣಾ ಪ್ರಚಾರ ಕಾರ್ಯಕ್ರಮ ಫಿಕ್ಸ್; ಹೀಗಿದೆ ವೇಳಾಪಟ್ಟಿ

    ಬಜರಂಗದಳ ಬ್ಯಾನ್ ವಿಚಾರ ‘ಕೈ’ ನಾಯಕರಲ್ಲೇ ಅಸಮಾಧಾನ ಉಂಟಾಗಿರುವ ಹಿನ್ನೆಲೆ, ನಿಷೇಧ ಕೈಬಿಡಬೇಕೋ, ಉಳಿಸಿಕೊಳ್ಳಬೇಕೋ ಎಂಬ ಗೊಂದಲ ಇದೀಗ ಕಾಂಗ್ರೆಸ್ ವಲಯದಲ್ಲಿ ಏರ್ಪಟ್ಟಿದೆ. ಕೆಲ ಕಾಂಗ್ರೆಸ್ ಹಿರಿಯ ನಾಯಕರು ನಿಷೇಧ ಕೈಬಿಡುವಂತೆ ಒತ್ತಾಯಿಸಿದ್ದಾರೆ. ಆದರೆ ಇನ್ನು ಕೆಲ ನಾಯಕರು ಯಾವುದೇ ಕಾರಣಕ್ಕೂ ಪ್ರಣಾಳಿಕೆಯಲ್ಲಿ ತಿಳಿಸಿದ್ದ ಭರವಸೆಯನ್ನು ಕೈಬಿಡಬಾರದು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

    ವಿವಾದವನ್ನು ಸಮರ್ಥವಾಗಿ ಎದುರಿಸೋಣ

    ಒಂದು ವೇಳೆ ಬಜರಂಗದಳ ಸಂಘಟನೆಯನ್ನು ನಿಷೇಧ ಮಾಡುತ್ತೇವೆ ಎಂದು ಹೇಳಿರುವುದನ್ನು ಹಿಂತೆಗೆದರೆ ಬಿಜೆಪಿ ಶರಣಾದಂತೆ ಆಗುತ್ತದೆ. ತಪ್ಪು ಮಾಡಿದ್ದೇವೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದೇವೆ ಎಂಬ ಸಂದೇಶ ರಾಜ್ಯದ ಜನತೆಗೆ ರವಾನೆಯಾಗಲಿದೆ. ಹೀಗಾಗಿ ಸದ್ಯ ವಿವಾದಕ್ಕೆ ಕಾರಣವಾಗಿರುವ ವಿಚಾರವನ್ನು ಸಮರ್ಥವಾಗಿ ಎದುರಿಸೋಣ ಎಂದು ಕೆಲ ಕಾಂಗ್ರೆಸ್ ನಾಯಕರು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಭಾರತದಲ್ಲಿ ಸರಾಸರಿ ವೇತನ 50 ಸಾವಿರ ರೂ.!; ಜಾಗತಿಕ ಪಟ್ಟಿಯಲ್ಲಿ 65ನೇ ಸ್ಥಾನ

    ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನಿತ್ತು?

    ಬಿಜೆಪಿ ಜಾರಿಗೆ ತಂದ ಎಲ್ಲಾ ಜನ ವಿರೋಧಿ ಕಾನೂನುಗಳು ಒಂದು ವರ್ಷದಲ್ಲಿ ರದ್ದುಗೊಳಿಸುವುದರ ಜೊತೆಗೆ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ.

    ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲಿ ಭಜರಂಗದಳ ಮತ್ತು ಪಿಎಫ್‍ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ, ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts