"ತುರ್ತು ಕ್ರಮ ಕೈಗೊಳ್ಳದ ಅಧಿಕಾರಿಗಳ ಮೇಲೆ ನರಹತ್ಯೆಯ ಕೇಸ್​ ಹಾಕಬೇಕು"

coronavaccine
Published on

ನವದೆಹಲಿ : ದೇಶದಲ್ಲಿರುವ ಕರೊನಾ ಲಸಿಕೆಗಳನ್ನು ತಯಾರಿಸುವ ಸಾಮರ್ಥ್ಯವನ್ನು ಬಳಸಲು ತುರ್ತು ಕ್ರಮ ತೆಗೆದುಕೊಳ್ಳದೆ ಸಮಯ ವ್ಯರ್ಥ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ನರಹತ್ಯೆಯ ಆರೋಪದ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದೆಹಲಿ ಹೈಕೋರ್ಟ್​ ಕಟುವಾಗಿ ಹೇಳಿದೆ. ಸ್ಪುಟ್ನಿಕ್​ ವಿ ಲಸಿಕೆ ಉತ್ಪಾದಿಸಲು ಸರ್ಕಾರದ ವತಿಯಿಂದ ಅನುಮತಿಯನ್ನು ಬೇಗ ದೊರಕಿಸುವಂತೆ ಕೋರಿ ದೆಹಲಿಯ ಫಾರ್ಮ ಕಂಪೆನಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ನಿನ್ನೆ ಈ ಮಾತು ಹೇಳಿತು.

ಲಸಿಕೆ ಉತ್ಪಾದಿಸಲು ಅವಕಾಶ ಮತ್ತು ಮೂಲಸೌಕರ್ಯ ಭಾರತದಲ್ಲಿ ಲಭ್ಯವಿದ್ದರೂ ಅದನ್ನು ಸಮರ್ಪಕವಾಗಿ ಬಳಸಲಾಗುತ್ತಿಲ್ಲ. ಲಸಿಕೆಗಳ ಕೊರತೆಯಿಂದ ಹೆಚ್ಚು ಜನರು ಸಾವಿಗೀಡಾಗುತ್ತಿದ್ದು, ಸರ್ಕಾರ ಲಸಿಕೆ ಉತ್ಪಾದನೆಗೆ ಬೆಂಬಲ ನೀಡುವ ತುರ್ತು ಅಗತ್ಯವಿದೆ. ಆದರೆ, ಈ ಬಗ್ಗೆ ಅಧಿಕಾರಿಗಳಲ್ಲಿ ಭಯದ ವಾತಾವರಣವಿದೆ ಎಂದು ಕೋರ್ಟ್​ ಹೇಳಿತು.

"ತಾವು ಕೈಗೊಳ್ಳುವ ನಿರ್ಧಾರದ ಬಗ್ಗೆ ವಿಜಿಲೆನ್ಸ್ ವಿಚಾರಣೆ ನಡೆಯುತ್ತೆ, ಆಡಿಟ್​ ನಡೆಯುತ್ತೆ, ಇಲ್ಲ ಪೊಲೀಸ್ ತನಿಖೆ ನಡೆಯುತ್ತೆ ಎಂಬ ಭಯದ ಮನೋಭಾವದಿಂದ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ, ಈ ತನಿಖೆ ಮತ್ತು ಆಡಿಟ್​ಗಳ ಬಗ್ಗೆ ಎಚ್ಚರದಿಂದಿರುವ ಸಮಯ ಇದಲ್ಲ. ಇದು ಎಷ್ಟೋ ಜನರ ಸಾವಿಗೆ ಕಾರಣವಾಗುತ್ತಿದೆ. ಲಭ್ಯವಿರುವ ಸಾಮರ್ಥ್ಯವನ್ನು ಬಳಸದೆ ಕಾಲ ಹಾಕುತ್ತಿರುವ ಜನರ ಮೇಲೆ ನರಹತ್ಯೆಯ ಆರೋಪ ಹೊರಿಸಬೇಕಾಗಿದೆ" ಎಂದು ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ನಜ್ಮಿ ವಾಜಿರಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.

ರಷ್ಯನ್ ಡೈರೆಕ್ಟ್​ ಇನ್​ವೆಸ್ಟ್​ಮೆಂಟ್​ ಫಂಡ್​ನೊಂದಿಗೆ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿರುವ ಅರ್ಜಿದಾರ ಪೆನೇಷಿಯ ಬಯೋಟೆಕ್​ ಕಂಪೆನಿಯ ಸ್ಯಾಂಪಲ್​​ಗಳನ್ನು ಕ್ಲಿಯರ್​ ಮಾಡುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ತ್ವರಿತಗೊಳಿಸಬೇಕೆಂದು ಕೋರ್ಟ್​ ಆದೇಶ ನೀಡಿತು. ಲಸಿಕೆಯು ಸಾರ್ವಜನಿಕ ಬಳಕೆಗೆ ಅನುಮೋದನೆ ಪಡೆದಿರುವಾಗ ಕಂಪೆನಿಯ ಉತ್ಪಾದನೆ ಅಗತ್ಯ ಮಾನದಂಡಗಳಿಗೆ ಸೂಕ್ತವಾಗಿದೆಯೇ ಎಂದಷ್ಟೇ ನೋಡುವ ಕೆಲಸ ಸರ್ಕಾರದ ಮೇಲಿದೆ ಎಂದು ಕೋರ್ಟ್​ ಹೇಳಿತು.

"ಆಮದು ಮಾಡುವ ಲಸಿಕೆಗಳಿಗೆ ಬ್ರಿಡ್ಜ್​ ಟ್ರಯಲ್ ನಡೆಸದಿರುವಂತೆ ನಿರ್ಧರಿಸಿರುವಾಗ ದೇಶೀಯ ಉತ್ಪಾದಕರಿಗೆ ಮಾತ್ರ ಅದನ್ನು ಕಡ್ಡಾಯಗೊಳಿಸುವುದು ಎಷ್ಟು ಸರಿ ?" ಎಂದು ಪ್ರಶ್ನಿಸಿದ ನ್ಯಾಯಪೀಠ, ದೇಶದಲ್ಲಿ ಲಭ್ಯವಿರುವ ಅವಕಾಶಗಳನ್ನು ಉಪಯೋಗಿಸದೆ, ವಿದೇಶೀಯರು ಅದರಿಂದ ಲಾಭ ಪಡೆಯುವಂತೆ ಮಾಡಬಾರದು ಎಂದಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net