ಹುಡುಗಿಗೆ ಕೈಕೊಟ್ಟು ಅರೆಸ್ಟ್​ ಆಗಿದ್ದ ಆರೋಪಿಗೆ ಜೈಲಿನಲ್ಲೇ ಮದುವೆ!

Marriage
Published on

ಭುವನೇಶ್ವರ್​: ಮದುವೆಯಾಗುವುದಾಗಿ ನಂಬಿಸಿ ವಂಚಿಸಿ ಜೈಲು ಪಾಲಾಗಿದ್ದ ಆರೋಪಿಗೆ ಜೈಲಿನಲ್ಲೇ ಸಂತ್ರಸ್ತೆ ಜತೆ ಮದುವೆ ಮಾಡಿಸಿರುವ ಅಪರೂಪದ ಘಟನೆ ಒಡಿಶಾದಲ್ಲಿ ನಡೆದಿದೆ.

ಆರೋಪಿ ನರಸಿಂಗ್​ ದಾಸ್​ ಮತ್ತು ಸಂತ್ರಸ್ತೆ ಪೂಜಾ ದಾಸ್​ಗೆ ವೇದಿಕ ಸಂಪ್ರದಾಯದ​ ಪ್ರಕಾರ ಕಟಕ್ ಜಿಲ್ಲೆಯ ಚೌದ್ವಾರ ಸರ್ಕಲ್​ ಜೈಲಿನಲ್ಲಿ ಎರಡು ಕುಟುಂಬದ ಸಮ್ಮುಖದಲ್ಲೇ ಸಿಬ್ಬಂದಿ ಮದುವೆ ಮಾಡಿಸಿದ್ದಾರೆ.

ಆರೋಪಿ ನರಸಿಂಗ್​ ಸರ್ದಾರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಸಂಕತಾರಾಸ್ ಗ್ರಾಮದ ನಿವಾಸಿ. ಈತ ಅದೇ ಗ್ರಾಮದ ಪೂಜಾ ಎಂಬಾಕೆಯನ್ನು ಪ್ರೀತಿಸಿದ್ದ. ಆದಾಗ್ಯು ಆಕೆಗೆ ಮೋಸ ಮಾಡಿ ಮತ್ತೊಬ್ಬಳೊಂದಿಗೆ ಮದುವೆ ಆಗಲು ಯೋಜನೆ ರೂಪಿಸಿದ್ದ. ಸಂತ್ರಸ್ತೆಯ ಕುಟುಂಬಕ್ಕೆ ಈ ಬಗ್ಗೆ ಗೊತ್ತಾದಾಗ ಅವರು ಪೊಲೀಸ್​ ಠಾಣೆಯ ಮೆಟ್ಟಿಲೇರಿ ಪ್ರಕರಣ ದಾಖಲಿಸಿದ್ದರು.

ದೂರಿನ ಆಧಾರದ ಮೇಲೆ ನರಸಿಂಗ್​​ನನ್ನು ಪೊಲೀಸರು 2019ರ ಸೆಪ್ಟೆಂಬರ್​ 28ರಂದು ಪೊಕ್ಸೊ ಕಾಯ್ದೆ ಅಡಿ ಬಂಧಿಸಿ, ಚೌದ್ವಾರ ಜೈಲಿಗೆ ಅಟ್ಟಿದ್ದರು. ಈ ವೇಳೆ ಸಂತ್ರಸ್ತೆ ಅಪ್ರಾಪ್ತೆಯಾಗಿದ್ದಳು.

ನಾವಿಬ್ಬರು ಪ್ರೀತಿಸುತ್ತಿದೆವು. ಮದುವೆಗೆ ಒಪ್ಪದಿದ್ದಾಗ ನಮ್ಮ ಕುಟುಂಬಸ್ಥರು ನೀಡಿದ ದೂರಿನ ಅನ್ವಯ ನರಸಿಂಗ್​ನನ್ನು ಬಂಧಿಸಲಾಗಿತ್ತು. ಜೈಲಿನಲ್ಲಿರುವಾಗ ಮದುವೆಗೆ ಒಪ್ಪಿಗೆ ನೀಡಿದ್ದ. ಅದರಂತೆಯೇ ಇಂದು ಮದುವೆ ನಡೆದಿದೆ. ನಾವಿಬ್ಬರು ಒಳ್ಳೆಯ ಜೀವನ ನಡೆಸುತ್ತೇವೆಂಬ ಭರವಸೆ ಇದೆ ಸಂತ್ರಸ್ತೆ ಪೂಜಾ ಹೇಳಿದರು.

ಇಬ್ಬರು ಮದುವೆಯನ್ನು ಒಡಿಶಾ ಹೈಕೋರ್ಟ್​ ಮಧ್ಯಸ್ಥಿಕೆಯಲ್ಲಿ ನಡೆಸಲಾಗಿದೆ ಎಂದು ಜೈಲಿನ ಡಿಐಜಿ ಕುಲಮಣಿ ಬೆಹೆರಾ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net