ಮೇಲ್ವರ್ಗದವನ ಹಿತ್ತಿಲಲ್ಲಿದ್ದ ಹೂ ಕಿತ್ತಿದ್ದಕ್ಕೆ ನಾಯ್ಕ್​ ಸಮುದಾಯದ 40 ಕುಟುಂಬಗಳಿಗೆ ಬಹಿಷ್ಕಾರ...!

Dalit boycot
Published on

ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಅಸ್ಪೃಶ್ಯತೆ ಇಂದಿಗೂ ಜಾರಿಯಲ್ಲಿದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಬೆಳಕಿಗೆ ಬಂದಿದೆ. 15 ವರ್ಷದ ಬಾಲಕಿಯೊಬ್ಬಳು ಮೇಲ್ವರ್ಗದವನ ಮನೆಯ ಹಿತ್ತಲಿನಲ್ಲಿದ್ದ ಹೂಗಳನ್ನು ಕಿತ್ತಿದ್ದಕ್ಕೆ ನಾಯ್ಕ್​ ಸಮುದಾಯದ ನಲ್ವತ್ತು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.

ಈ ಘಟನೆ ಎರಡು ತಿಂಗಳ ಹಿಂದಿನದು. ಒಂದು ಕುಟುಂಬ ಇದನ್ನು ಪ್ರಶ್ನಿಸಿದ್ದಕ್ಕೆ ಅಂದಿನಿಂದ ಮಾತುಕತೆ, ಚರ್ಚೆ, ವಾಗ್ವಾದಗಳು ನಡೆದು ಪರಿಸ್ಥಿತಿ ವಿಕೋಪಕ್ಕೆ ತಲುಪಿದೆ. ಊರಿನ 800 ಕುಟುಂಬಗಳ ಪೈಕಿ ಯಾರೊಬ್ಬರು ಇವರ ಜತೆ ಮಾತನಾಡುತ್ತಿಲ್ಲ ಎಂದು ದೂರಲಾಗಿದೆ.

ಓಡಿಶಾದ ದೇನ್​ಕಾನಲ್​ ಜಿಲ್ಲೆಯ ತಮುಸಿಂಗ್​ ಪೊಲೀಸ್​ ಠಾಣೆ ವ್ಯಾಪ್ತಿಯ ಕಾಂತಿಯೋ ಕಾಟೇನಿ ಗ್ರಾಮದ ಘಟನೆಯಿದು. 15 ದಿನಗಳಿಂದ ತಮಗೆ ಸಾಮಾಜಿಕ ಬಹಿಷ್ಕಾರ ವಿಧಿಸಲಾಗಿದೆ ಎಂದು ನಾಯ್ಕ್​ ಸಮುದಾಯದ ಸದಸ್ಯರು ನೀಡಿರುವ ದೂರಿನಲ್ಲಿ ಹೇಳಿದ್ದಾರೆ.

ಪ್ರಕರಣ ತಣ್ಣಗಾಗಲೆಂದು ಹೂ ಕಿತ್ತಿದ್ದಕ್ಕೆ ಕೂಡಲೇ ಕ್ಷಮೆ ಕೇಳಿದ್ದೇವೆ. ಆದರೂ ನಂತರದ ಘಟನೆಗಳು, ಸಂಧಾನ ಮಾತುಕತೆ ಬಳಿಕ ನಮಗೆ ಬಹಿಷ್ಕಾರ ವಿಧಿಸಿದ್ದಾರೆ ಎಂದು ಬಾಲಕಿಯ ತಂದೆ ನಿರಂಜನ ನಾಯ್ಕ್​ ಹೇಳಿದ್ದಾರೆ.

ಊರಿನ ಅಂಗಡಿಯಲ್ಲಿ ಅಗತ್ಯ ದಿನಸಿ ನೀಡುತ್ತಿಲ್ಲ. ಯಾರೂ ಕೆಲಸಕ್ಕೆ ಕರೆಯುತ್ತಿಲ್ಲ. ಊರಿನಲ್ಲಿ ನಡೆಯುವ ಮದುವೆ ಇತ್ಯಾದಿ ಸಮಾರಂಭದಲ್ಲಿ ಪಾಲ್ಗೊಳ್ಳುವಂತಿಲ್ಲ. ಶಾಲೆಯಲ್ಲಿರುವ ನಮ್ಮ ಸಮುದಾಯದ ಶಿಕ್ಷಕರೇ ಮಕ್ಕಳನ್ನು ಬೇರೆಡೆಗೆ ಸೇರಿಸಿ ಎನ್ನುತ್ತಿರುವುದು ದುರಂತ ಎನ್ನುತ್ತಾರೆ ದಲಿತರು.

ಅವರೊಂದಿಗೆ ಯಾರೂ ಮಾತನಾಡದಂತೆ ನಿರ್ಣಯಿಸಿರುವುದು ನಿಜ ಎನ್ನುವ ಗ್ರಾಮದ ಸರ್​ಪಂಚ್​, ಉಳಿದೆಲ್ಲ ಆರೋಪಗಳು ಸತ್ಯಕ್ಕೆ ದೂರ ಎನ್ನುತ್ತಾರೆ. ಅವರು ಮಾಡಿದ ತಪ್ಪಿನಿಂದಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ ಎನ್ನುವುದು ಇನ್ನೊಬ್ಬ ಮುಖಂಡನ ಆರೋಪ.

ಈ ನಡುವೆ ಸ್ಥಳೀಯಾಡಳಿತ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸುತ್ತಿದ್ದು, ಪರಿಹಾರ ಕಾಣದಿದ್ದರೆ, ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net