

ನವದೆಹಲಿ: ಕರೊನಾ ಸಂಕಷ್ಟ ಅಥವಾ ಇತರ ಕಾರಣಗಳಿಂದಾಗಿ ಕೆಲಸ ಕಳೆದುಕೊಂಡವರಿಗೆ ಕೇಂದ್ರ ಸರ್ಕಾರ ನಿರುದ್ಯೋಗ ಭತ್ಯೆಯನ್ನು ನೀಡಲಿದೆ. ಅದಕ್ಕಾಗಿ ನಿಗದಿಪಡಿಸಲಾಗಿದ್ದ ಮಾನದಂಡಗಳಲ್ಲಿ ಕೊಂಚ ವಿನಾಯ್ತಿಯನ್ನು ನೀಡಿದೆ. ಇದರಿಂದ ಅಂದಾಜು 40 ಲಕ್ಷ ಕಾರ್ಮಿಕರು ಪ್ರಯೋಜನ ಪಡೆಯಲಿದ್ದಾರೆ.
ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡುವ, ಇಎಸ್ಐ ವಿಮಾದಾರರಾಗಿರುವ ನೌಕರರು ಮೂರು ತಿಂಗಳ ಸರಾಸರಿ ಸಂಬಳದ ಶೇ.50 ರಷ್ಟು ಮೊತ್ತವನ್ನು ನಿರುದ್ಯೋಗ ಭತ್ಯೆಯನ್ನಾಗಿ ಪಡೆಯಬಹುದು. ಇದಕ್ಕೆ ನೌಕರರೇ ನೇರವಾಗಿ ಅರ್ಜಿ ಸಲ್ಲಿಸಬಹುದು.
2020ರ ಮಾರ್ಚ್ 24ರಿಂದ ಡಿಸೆಂಬರ್ 31ರ ಅವಧಿಯಲ್ಲಿ ಈಗಾಗಲೇ ಕೆಲಸ ಕಳೆದುಕೊಂಡಿರುವ ಹಾಗೂ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ ನೌಕರರು ಇದರ ಪ್ರಯೋಜನ ಪಡೆಯಬಹುದು.
ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ನೇತೃತ್ವದಲ್ಲಿ ನಡೆದ ಕಾರ್ಮಿಕರ ರಾಜ್ಯ ವಿಮಾ ಸಂಸ್ಥೆಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಈ ಯೋಜನೆಯಡಿ ಕೊನೆಯದಾಗಿ ಪಡೆದ ಸಂಬಳದ ಶೇ.50ಕ್ಕೆ ಸಮಾನವಾಗಿ ಆರ್ಥಿಕ ನೆರವನ್ನು ಮೂರು ತಿಂಗಳ ಅವಧಿಗೆ ನೀಡಲಾಗುತ್ತದೆ ಎಂದು ಇಎಸ್ಐಸಿ ಮಂಡಳಿ ಸದಸ್ಯೆ ಅಮರ್ಜೀತ್ ಕೌರ್ ಮಾಹಿತಿ ನೀಡಿದ್ದಾರೆ. ವಿನಾಯ್ತಿಯನ್ನು ಕೊಂಚ ಸಡಿಸಿದ್ದರೆ, 75 ಲಕ್ಷಕ್ಕೂ ಅಧಿಕ ನೌಕರರು ಇದರ ಸೌಲಭ್ಯ ಪಡೆಯಬಹುದಿತ್ತು ಎಂಬುದು ಅವರ ಅಭಿಪ್ರಾಯ.
ಮಾಸಿಕ 21,000 ರೂ.ವರೆಗೆ ಸಂಬಳ ಪಡೆಯುವವರು ಇಎಸ್ಐ ವಿಮಾ ವ್ಯಾಪ್ತಿಗೆ ಬರುತ್ತಾರೆ. ಪ್ರತಿ ತಿಂಗಳು ಆರೋಗ್ಯ ಸೇವೆಗಾಗಿ ಕಂತುಗಳನ್ನು ಕಟ್ಟುತ್ತಿರುತ್ತಾರೆ. ಇದಕ್ಕಾಗಿ ಇವರನ್ನು ವಿಮಾದಾರರು ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ವಿಮಾದಾರರಾಗಿರುವ ಮಹಿಳೆಯರು ಬಾಣಂತನದ ರಜೆಯಲ್ಲಿದ್ದಾಗ ಆ ಸಂಬಳವನ್ನು ಇಎಸ್ಐ ಮೂಲಕವೇ ನೀಡಲಾಗುತ್ತದೆ.
ಎರಡು ವರ್ಷದಿಂದ ಉದ್ಯೋಗದಲ್ಲಿದ್ದು, ಕನಿಷ್ಠ ಮೂರು ತಿಂಗಳ ವಿಮೆ ಪಾವತಿಸಿದವರು ಈ ಯೋಜನೆಗೆ ಅರ್ಹರಾಗಿದ್ದಾರೆ. ಹೆಚ್ಚಿನ ಮಾಹಿತಿಗೆ ಸ್ಥಳೀಯ ಇಎಸ್ಐ ಕಚೇರಿಯನ್ನು ಸಂಪರ್ಕಿಸಬಹುದು.