Donald Trump | ಅಮೆರಿಕಾವನ್ನು ಹಾಳು ಮಾಡಿದ್ದಕ್ಕಾಗಿ ಒಬಾಮಾಗೆ ನೊಬೆಲ್​; ಅವರು ಉತ್ತಮ ಅಧ್ಯಕ್ಷ ಅಲ್ಲ ಎಂದ ಟ್ರಂಪ್!

Obama ,Donald Trump
Published on

Donald Trump: ಅಮೆರಿಕಾದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾರ ವಿರುದ್ಧ ವಾಗ್ದಾಳಿ ನಡೆಸಿರುವ ಡೊನಾಲ್ಡ್ ಟ್ರಂಪ್, ಒಬಾಮಾ ಏನನ್ನು ಸಾಧಿಸದೆ, ನಮ್ಮ ದೇಶವನ್ನು ನಾಶಮಾಡಿದ್ದಕ್ಕಾಗಿ ನೊಬೆಲ್​ ಪ್ರಶಸ್ತಿ ಪಡೆದರು, ಅವರು ಒಳ್ಳೆಯ ಅಧ್ಯಕ್ಷರಾಗಿರಲಿಲ್ಲ ಎಂದು ಟೀಕಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಟ್ರಂಪ್, ಗಾಜಾದಲ್ಲಿ ಶಾಂತಿ ಸ್ಥಾಪಿಸುವುದು ಸೇರಿದಂತೆ, ಒಟ್ಟು ಎಂಟು ಯುದ್ಧಗಳನ್ನು ಕೊನೆಗೊಳಿಸಿದ್ದೇನೆ ಎಂದು ತಮ್ಮ ಕಾರ್ಯವನ್ನು ಸಾಧನೆಗ ಎಂದು ಬಿಂಬಿಸಿಕೊಂಡರು. ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೇವಲ ಎಂಟು ತಿಂಗಳುಗಳಲ್ಲಿ ಒಬಾಮಾಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿದ್ದಕ್ಕೆ ಹತಾಶೆ ವ್ಯಕ್ತಪಡಿಸಿದರು.

ಒಬಾಮಾ ಏನೂ ಮಾಡದ ಕಾರಣ ನೊಬೆಲ್​ ಪಡೆದರು, ಅವರಿಗೆ ಪುರಸ್ಕಾರ ಸಿಕ್ಕಿತು, ಬಹುಶ: ನಮ್ಮ ದೇಶವನ್ನು ನಾಶಮಾಡಿದ್ದಕ್ಕಾಗಿ ಆಯ್ಕೆಯಾದರು ಅವರಿಗೆ ಗೌರವ ನೀಡಿರಬೇಕು ಎಂದರು. ಅಧಿಕಾರ ವಹಿಸಿಕೊಂಡ ಎಂಟು ತಿಂಗಳ ನಂತರ 2009 ರಲ್ಲಿ ಒಬಾಮಾ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಯಿತು. ನಾರ್ವೇಜಿಯನ್ ನೊಬೆಲ್ ಸಮಿತಿಯು ಅಂತರರಾಷ್ಟ್ರೀಯ ರಾಜತಾಂತ್ರಿಕತೆ ಮತ್ತು ಜನರ ನಡುವಿನ ಸಹಕಾರವನ್ನು ಬಲಪಡಿಸಲು ಒಬಾಮಾರ ಅಸಾಧಾರಣ ಪ್ರಯತ್ನಗಳ ಮಾನದಂಡದಡಿಯಲ್ಲಿ ಆಯ್ಕೆ ಮಾಡಿದ್ದರು.

ಜನವರಿಯಲ್ಲಿ ಎರಡನೇ ಬಾರಿ ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟ್ರಂಪ್​​, ನೊಬೆಲ್ ಆಯ್ಕೆ ಪ್ರಕ್ರಿಯೆಯಲ್ಲಿ ಸಲಹಾ ಪಾತ್ರವನ್ನು ವಹಿಸುವ ಓಸ್ಲೋ ಶಾಂತಿ ಸಂಶೋಧನಾ ಸಂಸ್ಥೆಯ ಮೇಲೆ ಪ್ರಭಾವ ಬೀರಲು ಈ ರೀತಿಯ ಪ್ರಯತ್ನಗಳನ್ನು ಮಾಡುತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಾಜಾದ ಕದನ ವಿರಾಮದಲ್ಲಿ ಟ್ರಂಪ್ ಪಾತ್ರವಿರುವುದು ನಿಜ..ಆದರೆ..

ಇಸ್ರೆಲ್​​ ಮತ್ತು ಹಮಾಸ್​​ ನಡುವಿನ ಕದನ ವಿರಾಮದ ಮಾತುಕತೆಯಲ್ಲಿ ಟ್ರಂಪ್ ಪಾತ್ರವನ್ನು ಓಸ್ಲೋ ಶಾಂತಿ ಸಂಶೋಧನಾ ಸಂಸ್ಥೆಯ ನಿರ್ದೇಶಕಿ ನೀನಾ ಗ್ರೇಗರ್ ಒಪ್ಪಿಕೊಂಡರು, ಆದರೆ ಶಾಂತಿ ಪ್ರಸ್ತಾಪವನ್ನು ಕಾರ್ಯಗತಗೊಳಿಸಲಾಗುತ್ತದೆಯೇ ಮತ್ತು ಶಾಶ್ವತ ಶಾಂತಿಗೆ ಕಾರಣವಾಗುತ್ತದೆಯೇ ಎಂಬುದನ್ನು ಇಷ್ಟು ಬೇಗ ಹೇಳಲು ಸಾಧ್ಯವಿಲ್ಲ ಎಂದರು. ಟ್ರಂಪ್ ಶಾಂತಿ ಮಂತ್ರ ಮತ್ತು ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂಬ ಹೇಳಿಕೆಗಳ ಹೊರತಾಗಿಯೂ, ಗಾಜಾ ಮತ್ತು ಇತರ ಪ್ರದೇಶಗಳಲ್ಲಿ ಅವರ ಇತ್ತೀಚಿನ ಪ್ರಯತ್ನಗಳ ಸಂಪೂರ್ಣ ಪರಿಣಾಮವನ್ನು ಇನ್ನೂ ಕಾದು ನೋಡಬೇಕಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಈ ವರ್ಷದ (2025) ನೊಬೆಲ್ ಶಾಂತಿ ಪ್ರಶಸ್ತಿ ಇಂದು (ಶುಕ್ರವಾರ) ಘೋಷಣೆಯಾಗಲಿದೆ. ಇಸ್ರೇಲ್-ಹಮಾಸ್, ರಷ್ಯಾ-ಯೂಕ್ರೇನ್ ನಡುವೆ ಯುದ್ಧ ನಿಲ್ಲಿಸಲು ಹಲವು ಸುತ್ತಿನ ಮಾತುಕತೆ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಾರಿ ನೊಬೆಲ್ ಶಾಂತಿ ಪ್ರಶಸ್ತಿ ತಮಗೇ ಸಿಗಬೇಕು ಎಂಬುದನ್ನು ಬಹಿರಂಗವಾಗಿಯೇ ಹಲವು ವೇದಿಕೆಗಳಲ್ಲಿ, ಹಲವು ಸನ್ನಿವೇಶಗಳಲ್ಲಿ ಹೇಳಿದ್ದು, ಕುತೂಹಲ ಮೂಡಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net