

Amit Shah: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಾಶಗೊಳಿಸಲು ದೃಢ ಸಂಕಲ್ಪವನ್ನು ತೊಟ್ಟಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಇತ್ತೀಚಿನ ಭದ್ರತಾ ಸನ್ನಿವೇಶ, ಕಾರ್ಯಾಚರಣೆಗಳು ಮತ್ತು ಸಂಘಟಿತ ಭಯೋತ್ಪಾದನಾ ನಿಗ್ರಹ ಪ್ರಯತ್ನಗಳ ಕುರಿತು ಅಧಿಕಾರಿಗಳು ಗೃಹ ಸಚಿವರಿಗೆ ವಿವರಿಸಿದ್ದಾರೆ. ಅಲ್ಲದೆ, ಭದ್ರತಾ ಪಡೆಗಳ ದೃಢನಿಶ್ಚಯ ಮತ್ತು ಒಗ್ಗಟ್ಟಿನ ಕಾರ್ಯವನ್ನು ಶ್ಲಾಘಿಸಿದ ಶಾ, ಎಲ್ಲ ಕ್ರಮಗಳು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಜಾಲಗಳನ್ನು ಬಹುತೇಕ ದುರ್ಬಲಗೊಳಿಸಿವೆ ಎಂದು ಪ್ರತಿಪಾದಿಸಿದ್ದಾರೆ.
ಮುಂದುವರೆದು ಮಾತನಾಡಿದ ಶಾ, ನಮ್ಮ ಸರ್ಕಾರವು ಎಲ್ಲಾ ಅಗತ್ಯ ಸಂಪನ್ಮೂಲಗಳನ್ನು ಒದಗಿಸುವುದನ್ನು ಮುಂದುವರಿಸುತ್ತದೆ ಮತ್ತು ಭದ್ರತಾ ಸಂಸ್ಥೆಗಳಿಗೆ ಸಂಪೂರ್ಣ ಕಾರ್ಯಾಚರಣೆಯ ಸ್ವಾತಂತ್ರ್ಯವನ್ನು ಕೊಡುತ್ತದೆ. ಭಾರತ ತನ್ನ ನೆಲದಿಂದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಬದ್ಧವಾಗಿದೆ ಎಂದು ಶಾ ಒತ್ತಿ ಹೇಳಿದ್ದಾರೆ.
ಅಲ್ಲದೆ, ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿದ ಶಾ, ಕಣಿವೆಯಲ್ಲಿ ವಿಶ್ವಾಸ ಮತ್ತು ಸ್ಥಿರತೆಯನ್ನು ಬಲಪಡಿಸಲು ಸಹಾಯ ಮಾಡಿದ ಸ್ಥಳೀಯ ಆಡಳಿತ ಮತ್ತು ಭದ್ರತಾ ಸಂಸ್ಥೆಗಳ ತ್ವರಿತ ಪ್ರತಿಕ್ರಿಯೆಯನ್ನು ಶ್ಲಾಘಿಸಿದ್ದಾರೆ. ಯಾವುದೇ ಭದ್ರತಾ ಲೋಪಗಳನ್ನು ತಡೆಗಟ್ಟಲು ಅಂತರ್ ಸಂಸ್ಥೆ ಸಮನ್ವಯ ಮತ್ತು ಉನ್ನತ ಮಟ್ಟದ ಜಾಗರೂಕತೆಗೆ ಶಾ ಕರೆ ನೀಡಿದ್ದಾರೆ.
ಈ ವರ್ಷದ ಚಳಿಗಾಲ ಆರಂಭವಾಗುತ್ತಿದ್ದಂತೆ, ಹಿಮದ ಹೊದಿಕೆಯಡಿಯಲ್ಲಿ ನಡೆಯಬಹುದಾದ ಒಳನುಸುಳುವಿಕೆ ಪ್ರಯತ್ನಗಳನ್ನು ತಡೆಯಲು ಸಂಪೂರ್ಣ ಜಾಗರೂಕರಾಗಿರುವಂತೆ ಗೃಹ ಸಚಿವರು ರಕ್ಷಣಾ ಪಡೆಗಳಿಗೆ ಅದೇಶಿಸಿದ್ದಾರೆ.
ದೆಹಲಿಯಲ್ಲಿ ನಡೆದ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಕೇಂದ್ರ ಗೃಹ ಕಾರ್ಯದರ್ಶಿ, ಸೇನಾ ಮುಖ್ಯಸ್ಥರು, ಗುಪ್ತಚರ ಬ್ಯೂರೋ ನಿರ್ದೇಶಕರು, ಮುಖ್ಯ ಕಾರ್ಯದರ್ಶಿ, ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಶ್ವತ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ಮೋದಿ ಸರ್ಕಾರದ ಪೂರ್ವಭಾವಿ ಮತ್ತು ಸಮಗ್ರ ವಿಧಾನವನ್ನು ಪರಿಶೀಲನಾ ಸಭೆಯು ಪ್ರತಿಬಿಂಬಿಸಿದೆ. (ಏಜೆನ್ಸೀಸ್)