

ಮೆಲ್ಬೋರ್ನ್: ಭಾರತ ತಂಡ ಟಿ-20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಿದೆ. ಟಾಸ್ ಗೆದ್ದು, ಫೀಲ್ಡಿಂಗ್ ಆಯ್ದುಕೊಂಡ ನಾಯಕ ರೋಹಿತ್ ಶರ್ಮಾ ಲೆಕ್ಕಾಚರಕ್ಕೆ ತಕ್ಕಂತೆ ಭಾರತೀಯ ಬೌಲರ್ಗಳು ಆರಂಭದಲ್ಲಿ ಬೌಲಿಂಗ್ ಮಾಡಿದರು. ಆದರೆ ಕೊನೆಯಲ್ಲಿ ದುಬಾರಿಯಾದ ಬೌಲರ್ಗಳು, ಪಾಕಿಸ್ತಾನ ಬ್ಯಾಟ್ಸ್ಮನ್ಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾದರು.
ಫೀಲ್ಡಿಂಗ್ ವೇಳೆ ಆರ್.ಅಶ್ವಿನ್ ಕ್ಯಾಚ್ ಕೈಚೆಲ್ಲಿದ್ದರು. ಇದು ಪಾಕಿಸ್ತಾನ ಉತ್ತಮ ಮೊತ್ತ ಕಲೆ ಹಾಕುವಲ್ಲಿ ನೆರವಾಯಿತು ಎಂದು ಕ್ರಿಕೆಟ್ ಪ್ರೇಮಿಗಳು ಟ್ವೀಟ್ ಮಾಡುತ್ತಿದ್ದಾರೆ. ಮೊಹಮ್ಮದ್ ಶಮಿ ಎಸೆದ ಬೌನ್ಸರ್ನ್ನು ಎದುರಿಸಿ ಶಾನ್ ಮಸೂದ್ ಬ್ಯಾಟ್ ಬೀಸುತ್ತಾರೆ. ಈ ವೇಳೆ ಫೈನ್ ಲೆಗ್ನಲ್ಲಿದ್ದ ಅಶ್ವಿನ್ ಕ್ಯಾಚ್ ಹಿಡಿಯುವಲ್ಲಿ ವಿಫಲರಾಗುತ್ತಾರೆ. ಜೀವದಾನದ ನೆರವಿನಿಂದ ಮಸೂದ್ 52 ರನ್ ಗಳಿಸಿ ಪಾಕಿಸ್ತಾನ ತಂಡಕ್ಕೆ ನೆರವಾಗುತ್ತಾರೆ.
ನಿರ್ಣಾಯಕ ಪಂದ್ಯದಲ್ಲಿ ಎರಡು ಕ್ಯಾಚ್ ಕೈಚೆಲ್ಲಿದ ಕುರಿತಾಗಿ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಕ್ಯಾಚ್ ಬಿಟ್ಟಿರುವುದ ಪಾಕಿಸ್ತಾನಕ್ಕೆ ನೆರವಾಗಿದೆ. ಅಶ್ವಿನ್ ಕ್ಯಾಚ್ ಕೈಚೆಲ್ಲಿರುವುದನ್ನು ನಾನು ಊಹಿಸಿದ್ದೆ. ಆದರೆ ಕ್ಯಾಚ್ಗಳು ಪಂದ್ಯದ ಗತಿ ಬದಲಿಸುವಲ್ಲಿ ನೆರವಾಗುತ್ತದೆ. ವಿಚಲಿತರಾಗಬೇಡಿ, ನೀವು ಉತ್ತಮವಾಗಿಯೇ ಬೌಲಿಂಗ್ ಮಾಡಿದ್ದೀರ. ಈ ಪಂದ್ಯವನ್ನು ನಾವು ಗೆಲ್ಲುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.