

ನವದೆಹಲಿ: ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದಲ್ಲದೆ, ಬಿಜೆಪಿ ವಕ್ತಾರೆ ಸ್ಥಾನದಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರ ತಲೆ ಕತ್ತರಿಸಿದ ವಿಡಿಯೋ ಸೃಷ್ಟಿಸಿದ ಪ್ರಕರಣದಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಫೈಸಲ್ ವಾನಿ ಎಂಬಾತನನ್ನು ಬಂಧಿಸಲಾಗಿದೆ.
ನೂಪುರ್ ಶರ್ಮಾ ಟಿವಿ ಕಾರ್ಯಕ್ರಮವೊಂದರಲ್ಲಿ ನೀಡಿರುವ ಹೇಳಿಕೆ ವಿವಾದಕ್ಕೆ ಒಳಗಾಗಿದ್ದರಿಂದ ಬಿಜೆಪಿ ಆಕೆಯನ್ನು ವಕ್ತಾರೆ ಸ್ಥಾನದಿಂದ ಅಮಾನತುಗೊಳಿಸಿತ್ತು. ಅದಾಗ್ಯೂ ಒಂದು ಸಮುದಾಯದವರ ಆಕ್ರೋಶ ತಣಿಯದಿರುವುದರಿಂದ ದೇಶಾದ್ಯಂತ ಆಕೆಯ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆದಿದೆ. ಇನ್ನು ಕೆಲವೆಡೆ ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಕೆಲವು ಪೊಲೀಸರೂ ಗಾಯಗೊಂಡಿದ್ದಾರೆ.
ಈ ಮಧ್ಯೆ ಕಾಶ್ಮೀರಿ ಯೂಟ್ಯೂಬರ್ ಫೈಸಲ್ ವಾನಿ ಎಂಬಾತ ವಿಎಫ್ಎಕ್ಸ್ ಮೂಲಕ ವಿಡಿಯೋವೊಂದನ್ನು ಸೃಷ್ಟಿಸಿದ್ದಾರೆ. ಅದರಲ್ಲಿ ನೂಪುರ್ ಶರ್ಮಾ ಅವರ ತಲೆ ಕತ್ತರಿಸುವಂಥ ವಿಡಿಯೋ ಸೃಷ್ಟಿಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗಿತ್ತು. ಈ ವಿಡಿಯೋ ವೈರಲ್ ಆಗಿದ್ದು ತೀವ್ರ ವಿರೋಧಕ್ಕೆ ಒಳಗಾಗಿದ್ದಲ್ಲದೇ ವಿವಾದಕ್ಕೀಡಾಗಿತ್ತು.
ಇದರಿಂದ ಎಚ್ಚೆತ್ತ ಫೈಸಲ್ ವಾನಿ ಮರುದಿನವೇ ಇನ್ನೊಂದು ವಿಡಿಯೋ ಅಪ್ಲೋಡ್ ಮಾಡಿ ತನ್ನ 'ಡೀಪ್ ಪೇನ್ ಫಿಟ್ನೆಸ್' ಚಾನೆಲ್ನಲ್ಲಿ ಕ್ಷಮೆ ಯಾಚಿಸಿದ್ದ. ಈ ಮಧ್ಯೆ ಸಫಾ ಕಡಲ್ ಠಾಣೆಯ ಪೊಲೀಸರು ಫೈಸಲ್ ವಾನಿಯನ್ನು ಇಂದು ಬಂಧಿಸಿದ್ದಾರೆ. ಅಲ್ಲದೆ ಸಾರ್ವಜನಿಕ ಶಾಂತಿಗೆ ಧಕ್ಕೆ, ಸಮಾಜದಲ್ಲಿ ಭೀತಿ ಉಂಟು ಮಾಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.