

YouTube Monetization Rules: ಶರವೇಗದಲ್ಲಿ ಸಾಗುತ್ತಿರುವ ಡಿಜಿಟಲ್ ಯುಗದಲ್ಲಿ ಜನರ ಬೆರಳಂಚಿಗೆ ಹಲವು ವಿಷಯಗಳನ್ನು ಕ್ಷಣಮಾತ್ರದಲ್ಲಿ ತಲುಪಿಸುವ ಯೂಟ್ಯೂಬ್, ಇದೀಗ ತನ್ನ ವಿಡಿಯೋ ಕ್ರಿಯೇಟರ್ಗಳಿಗೆ ಹೊಸ ಶಾಕ್ ನೀಡಿದೆ. ಲಾಭ ಗಳಿಸುವ ಮಾದರಿಯಲ್ಲಿ ಹಲವು ನಿಮಯಗಳನ್ನು ಬದಲಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಯುಟ್ಯೂಬ್ ಸಂಸ್ಥೆ ಮುಂದಾಗಿದೆ.
ಕುಳಿತ ಜಾಗದಿಂದಲೇ ನಿರೀಕ್ಷೆಗೂ ಮೀರಿದ ಹಣವನ್ನು ಗಳಿಸುವುದು ಈಗ ತುಂಬಾ ಸುಲಭ ಎಂದು ಹೇಳುತ್ತಿದ್ದವರಿಗೆ ಯೂಟ್ಯೂಬ್ ಸಂಸ್ಥೆ ಆಘಾತಕಾರಿ ಸುದ್ದಿಯನ್ನೇ ನೀಡಿದೆ. ಯೂಟ್ಯೂಬ್ ಬಳಕೆದಾರರ ಲಾಭ ಗಳಿಕೆಯ ನಿಯಮಗಳಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿದ್ದು, ಈ ಹೊಸ ನಿಯಮಗಳು ಇದೇ ಜುಲೈ 15ರಿಂದ ಜಾರಿಗೆ ಬರಲಿವೆ ಎಂದು ಸ್ಪಷ್ಟಪಡಿಸಿದೆ. ಕೃತಕ ಬುದ್ಧಿಮತ್ತೇ ವಿಷಯವನ್ನು ಪ್ರಕಟಿಸುವ ಮತ್ತು ವಿಷಯವನ್ನು ನಕಲಿಸುವ ಯೂಟ್ಯೂಬ್ ಚಾನಲ್‌ಗಳ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ. ಮತ್ತು ಹಣ ಗಳಿಕೆಯ ಅವಕಾಶವನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.
ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಚಾನೆಲ್‌ಗಳ ಸಂಖ್ಯೆ ಊಹೆಗೂ ಮೀರುವಂತೆ ಬೆಳೆದಿದೆ. ಈ ಪ್ಲಾಟ್ಫಾರ್ಮ್ನಲ್ಲಿರುವ ಬಳಕೆದಾರರು ತಮ್ಮ ಬಹುತೇಕ ವಿಡಿಯೋಗಳಲ್ಲಿ ಎಐ ಬಳಸಿ ಸುಲಭವಾಗಿ ವಿಡಿಯೊಗಳನ್ನು ರಚಿಸುತ್ತಿದ್ದಾರೆ. ಅನೇಕ ಯೂಟ್ಯೂಬ್ ಕ್ರಿಯೇಟರ್ಸ್ ಸಣ್ಣ ಬದಲಾವಣೆಗಳೊಂದಿಗೆ ಇತರರ ವಿಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಅದರಲ್ಲೂ ಹಳೆಯ ವಿಡಿಯೋಗಳು ರೀ-ಅಪ್‌ಲೋಡ್ ಮಾಡುವ ಮೂಲಕ ಹೆಚ್ಚಿನ ವೀಕ್ಷಣೆ ಪಡೆಯುತ್ತಿದ್ದಾರೆ. ಇದನ್ನೆಲ್ಲ ಬಹಳ ಸೂಕ್ಷ್ಮವಾಗಿ ಗಮನಿಸಿರುವ ಸಂಸ್ಥೆ, ಇನ್ಮುಂದೆ ಹಣ ಗಳಿಸುವ ದಾರಿ ಮತ್ತಷ್ಟು ಕಠಿಣವಾಗಲಿದೆ ಎಂಬುದನ್ನು ಕಟ್ಟುನಿಟ್ಟಿನ ಕ್ರಮ ಮೂಲಕ ಎಚ್ಚರಿಸಿದೆ.
ಜುಲೈ 15, 2025ರಿಂದ, ಒಂದೇ ವಿಡಿಯೊವನ್ನು ಪದೇ ಪದೇ ಅಪ್‌ಲೋಡ್ ಮಾಡುವವರು ಅಥವಾ ಬೇರೆಯವರು ಈಗಾಗಲೇ ಪಬ್ಲಿಶ್ ಮಾಡಿರುವ ವಿಡಿಯೊವನ್ನು ಪೋಸ್ಟ್ ಮಾಡುವವರು ಇನ್ಮುಂದೆ ಯುಟ್ಯೂಬ್ನಿಂದ ಹಣವನ್ನು ಪಡೆಯುವುದಿಲ್ಲ. ಇದಲ್ಲದೆ, ಆ ಚಾನಲ್‌ನ ಹಣ ಗಳಿಕೆಯೂ ಬಂದ್ ಆಗಲಿದೆ.
ಪ್ಲಾಟ್‌ಫಾರ್ಮ್‌ಗೆ ಅಪ್‌ಲೋಡ್ ಮಾಡಲಾದ ವಿಡಿಯೊಗಳ ಗುಣಮಟ್ಟವನ್ನು ಸುಧಾರಿಸಲು ಯೂಟ್ಯೂಬ್ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ರೀತಿಯಾಗಿ, ಯೂಟ್ಯೂಬ್ ತನ್ನ ನಿಯಮಗಳನ್ನು ಬಿಗಿಗೊಳಿಸುತ್ತಿದೆ. ಇದು ಕ್ರಿಯೇಟರ್ಸ್ ಶ್ರಮ ಉಳಿಸಿಕೊಳ್ಳುವುದು ಮತ್ತು ಪ್ಲಾಟ್‌ಫಾರ್ಮ್‌ನ ದುರುಪಯೋಗಪಡಿಸಿಕೊಳ್ಳುವ ಚಾನಲ್‌ಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಮೂಲ ಉದ್ದೇಶವಾಗಿದೆ.
ಯೂಟ್ಯೂಬ್ ಸ್ಪಷ್ಟವಾಗಿ ಎಐ ವಿಷಯವನ್ನು ನಿಷೇಧಿಸಿಲ್ಲ. ಆದಾಗ್ಯೂ, ಈ ನವೀಕರಣವು ಎಐ ಧ್ವನಿಗಳು, ಅವತಾರಗಳು ಅಥವಾ ಸ್ವಯಂಚಾಲಿತ ಸ್ಕ್ರಿಪ್ಟ್‌ಗಳನ್ನು ಹೆಚ್ಚು ಅವಲಂಬಿಸಿರುವ ಚಾನಲ್‌ಗಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು. ಈ ಕಠಿಣ ನಿಯಮಗಳು ಮಾನವರ ಬದಲು ಸ್ವಯಂಚಾಲಿತವಾಗಿ ಉತ್ಪತ್ತಿಯಾಗುವ ಧ್ವನಿಗಳನ್ನು ಒಳಗೊಂಡಿರುವ ಮತ್ತು ಕೃತಕ ಬುದ್ಧಿಮತ್ತೇ ಬಳಸಿ ತಯಾರಿಸುವ ವಿಡಿಯೊಗಳಿಗೂ ಅನ್ವಯಿಸುತ್ತದೆ.
ಜುಲೈ 15ರಿಂದ, ಯೂಟ್ಯೂಬ್ ಹೊಸ ವಿಷಯಕ್ಕೆ ಆದ್ಯತೆ ನೀಡುತ್ತದೆ. ಇದು ಹೊಸ ಮಾಹಿತಿಯನ್ನು ಒದಗಿಸುವ ಅಥವಾ ಶೈಕ್ಷಣಿಕ, ನವೀನ, ಸೃಜನಶೀಲ ಅಥವಾ ಮನರಂಜನೆಯ ವಿಡಿಯೊಗಳನ್ನು ಮಾತ್ರ ಅನುಮತಿಸುತ್ತದೆ. ನಿಮ್ಮ ವಿಷಯವು ವಿಶೇಷವಾಗಿ ಉಪಯುಕ್ತವಾಗಿದ್ದರೆ ಮಾತ್ರ ಯೂಟ್ಯೂಬ್ನಿಂದ ಲಾಭ ನೋಡಲು ಸಾಧ್ಯ ಎಂಬುದು ಗಮನದಲ್ಲಿರಲಿ.