

ವಿಜಯವಾಣಿ ಸುದ್ದಿಜಾಲ ಗುರುಪುರ
ಮಂಗಳೂರು ತಾಲೂಕಿನ ಎಡಪದವು-ಪೂಪಾಡಿಕಲ್ಲುವರೆಗೆ ಅಂದಾಜು 10 ಕೋಟಿ ರೂ.ವೆಚ್ಚದಲ್ಲಿ 3 ಕಿಮೀ ಅಂತರದಲ್ಲಿ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿಯಿಂದ ಎಡಪದವು ಗ್ರಾಪಂ ವ್ಯಾಪ್ತಿಯ ಸನಿಲ ಎಂಬಲ್ಲಿ ಕೃಷಿ ಗದ್ದೆಗಳಲ್ಲಿ ಕೆಸರು ನೀರು ತುಂಬಿದ್ದು, ಈ ಅವೈಜ್ಞಾನಿಕ ಕಾಮಗಾರಿಗೆ ಕೃಷಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಸಾಯ ಅಸಾಧ್ಯ: ಪ್ರಸಕ್ತ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ ಅಂಕುಡೊಂಕಾಗಿರುವ ರಸ್ತೆ ನೇರಗೊಳಿಸುವ ಕಾಮಗಾರಿ ನಡೆಯುತ್ತಿದೆ. ರಸ್ತೆ ಅಗಲೀಕರಣಕ್ಕೆ ರಸ್ತೆಯ ಪಕ್ಕದಲ್ಲಿ ಮಣ್ಣು ತುಂಬಿಸಲಾಗಿದೆ. ಸನಿಲ ಎಂಬಲ್ಲಿ ರಸ್ತೆಗೆ ಬೃಹತ್ ಮೋರಿ ಅಳವಡಿಸಲಾಗಿದ್ದು, ಮೋರಿ ಮೂಲಕ ಹರಿದು ಬರುವ ಮಣ್ಣು ಸಹಿತ ಕೆಸರು ನೀರು ಉದಯ ರಾವ್, ದಯಾನಂದ ಕೋಟ್ಯಾನ್ ಮತ್ತು ರಮೇಶ್ ಶೆಟ್ಟಿ ಅವರ ಗದ್ದೆಗಳಲ್ಲಿ ತುಂಬುತ್ತಿದೆ. ಭಾರಿ ಪ್ರಮಾಣದಲ್ಲಿ ಮಣ್ಣು-ಕೆಸರು ನೀರು ತುಂಬಿರುವ ಈ ಗದ್ದೆಗಳಲ್ಲಿ ಕೃಷಿ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾರ್ಗ ಅಗಲೀಕರಣ: ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಹಳೆಯ ತೋಡಿಗೆ ಮಣ್ಣು ಹಾಕಿ ಮುಚ್ಚಲಾಗಿದೆ. ಮೋರಿ ನಿರ್ಮಿಸಿದ ಬಳಿಕವೂ ಇಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ತೋಡು ನಿರ್ಮಿಸಿಲ್ಲ. ಹಾಗಾಗಿ ಕೆಸರು ನೀರು ಮಣ್ಣು ಗದ್ದೆಗಳಲ್ಲಿ ತುಂಬುತ್ತಿದೆ ಎಂದು ಕೃಷಿಕರು ದೂರಿದ್ದಾರೆ.
ವಾಹನ ಸವಾರರಿಗೆ ತೊಂದರೆ: ರಸ್ತೆ ಅಗಲೀಕರಣ ಕಾಮಗಾರಿಯಿಂದ ಸ್ಥಳೀಯವಾಗಿ ಅನ್ಯ ಸಮಸ್ಯೆಗಳೂ ಉಂಟಾಗಿವೆ. ದಿನೇಶ್ ಗೌಡ ಎಂಬುವರ ಮನೆಯ ಮೇಲ್ಭಾಗದಲ್ಲಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕುಸಿಯುವ ಅಪಾಯ ಕಂಡು ಬಂದಿದೆ. ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಿಸಿಲ್ಲ. ಇದರಿಂದ ರಸ್ತೆಯಲ್ಲೇ ಮಳೆ ನೀರು ಹರಿಯುತ್ತಿದ್ದು, ಕೆಲವೆಡೆ ರಸ್ತೆ ಹಾನಿಗೀಡಾಗಿದೆ. ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಇತ್ತ ಗಮನಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.