

ಗುರುಪುರ: ಮನುಷ್ಯನ ದುರಾಸೆಯಿಂದ ಪ್ರಕೃತಿಯಲ್ಲಿ ವಿಕೃತಿ ಉಂಟಾಗಿರುವ ಹಿನ್ನೆಲೆಯಲ್ಲಿ ಇಂದು ಭೂಕುಸಿತ, ನೆರೆ ಹೆಚ್ಚಾಗಿದೆ. ಪ್ರಕೃತಿ ಮುನಿದರೆ ಮನುಷ್ಯ ಏನೂ ಮಾಡಲಾರ. ಮರಗಳ ನಾಶದಿಂದ ಪ್ರಕೃತಿಯ ಸಮತೋಲನ ತಪ್ಪಿದ್ದು, ಮರ ಬೆಳೆಸುವುದು ಇಂದಿನ ಅಗತ್ಯ. ಪರಿಸರ ಉಳಿಸುವುದು ನಮ್ಮ ಆದ್ಯತೆಯಾಗಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಬಿಜೆಪಿಯ ಮಂಗಳೂರು ನಗರ ಉತ್ತರ ಮಂಡಲದ ರೈತ ಮೋರ್ಚಾ ಹಾಗೂ ಗಂಜಿಮಠ ವ್ಯವಸಾಯ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಭಾನುವಾರ ಮಳಲಿಯ ಮಟ್ಟಿಯ ಫ್ರೆಂಡ್ಸ್ ಕ್ಲಬ್‌ನಲ್ಲಿ ವನ ಮಹೋತ್ಸವ ಹಾಗೂ ಸಸಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗಂಜಿಮಠ ವ್ಯವಸಾಯ ಸಂಘದ ಅಧ್ಯಕ್ಷ ಸೋಹನ್ ಅತಿಕಾರಿ ಅಧ್ಯಕ್ಷತೆ ವಹಿಸಿದ್ದರು. ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಮಂಡಲದ ರೈತ ಮೋರ್ಚಾ ಅಧ್ಯಕ್ಷ ಸುಕೇಶ್ ಮಾಣೈ, ಮಂಗಳೂರು ತಾಲೂಕು ಕಿಸಾನ್ ಸಂಘದ ಅಧ್ಯಕ್ಷ ಜಯಾನಂದ ನಾಯ್ಕ, ಗುರುಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶೋಧನ್ ಆದ್ಯಪಾಡಿ, ಎಡಪದವು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಹಾಬಲ ಸಾಲ್ಯಾನ್, ಭೋಜ ಮೇಂಡ, ಸೋಹನ್ ಆಳ್ವ ಮಲ್ಲೂರು, ಅನಿಲ್ ರೈ ತಿರುವೈಲು ಮತ್ತಿತರರು ಇದ್ದರು. ಗುರುಪ್ರಸಾದ್ ನಿರೂಪಿಸಿದರು. ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುಕುಮಾರ್ ದೇವಾಡಿಗ ವಂದಿಸಿದರು.