ಕ್ವಾರಂಟೈನ್​ನಲ್ಲಿದ್ದ ಗೆಳೆಯನಿಗೆ ಹಲ್ವಾ ತಗೊಂಡು ಹೋದವನನ್ನು ಹುಡುಕುತ್ತಿದ್ದಾರೆ ಪೊಲೀಸರು!

Halwa
Published on

ಅಡೂರ್​: ಕರೋನಾ ಸೋಂಕು ಕಾರಣಕ್ಕೆ ಕ್ವಾರಂಟೈನ್​ನಲ್ಲಿ ಇದ್ದ ಗೆಳೆಯನಿಗೆ ಹಲ್ವಾ ತಗೊಂಡು ಹೋಗಿದ್ದವನನ್ನು ಹುಡುಕುತ್ತಿದ್ದಾರೆ ಪೊಲೀಸರು! ಹಲ್ವಾ ತಗೊಂಡು ಹೋಗಿ ಗೆಳೆಯನಿಗೆ ಕೊಡೋದು ಅಪರಾಧವಾ? ಎಂಬ ಸಂದೇಹ ಮೂಡುವುದು ಸಹಜ. ಅಸಲಿ ಕಥೆ ಬೇರೆಯೇ ಇದೆ.

ಅಡೂರಿನ ಗವರ್ನಮೆಂಟ್​ ಬಾಯ್ಸ್ ಹೈ ಸ್ಕೂಲ್​ ಸಮೀಪದ ಸರ್ಕಾರಿ ಸಂಸ್ಥೆಯಲ್ಲಿ ಅನಯಾಡಿ ನಿವಾಸಿಯೊಬ್ಬರು ಕ್ವಾರಂಟೈನ್​ನಲ್ಲಿದ್ದಾರೆ. ಈತ ಹೈದರಾಬಾದ್​ನಿಂದ ಮೂರು ದಿನಗಳ ಹಿಂದಷ್ಟೇ ಊರಿಗೆ ಬಂದಿದ್ದ. ಈ ವಿಷಯ ಗೊತ್ತಾಗುತ್ತಿದ್ದಂತೆ ಅಧಿಕಾರಿಗಳು ಈತನನ್ನು ಕ್ವಾರಂಟೈನ್​ ಗೆ ಒಳಪಡಿಸಿದ್ದರು. ಈತನ ಸ್ನೇಹಿತ ಅನಯಾಡಿಯ ವಯ್ಯಂಕರ ನಿವಾಸಿ ವಿನೋದ್​.

ಕ್ವಾರಂಟೈನ್​ನಲ್ಲಿ ಇರುವ ಗೆಳೆಯನಿಗಾಗಿ ವಿನೋದ್ ಹಲ್ವಾ ಮತ್ತು ಇತರೆ ಆಹಾರ ಸಾಮಗ್ರಿಯನ್ನು ತಂದಿದ್ದ. ಅದನ್ನು ಕ್ವಾರಂಟೈನ್ ಕೇಂದ್ರದಲ್ಲಿರುವ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದ. ಅದನ್ನು ಪರಿಶೀಲಿಸಿದಾಗ ಹಲ್ವಾ ಮಾತ್ರ ಬೇರೆಯದೇ ಪರಿಮಳ ಸೂಸುತ್ತಿತ್ತು. ಅದನ್ನು ಮತ್ತು ಪರಿಶೀಲನೆಗೆ ಒಳಪಡಿಸಿದಾಗ ಆ ಹಲ್ವಾ ಒಳಗೆ ಗಾಂಜಾ ಪತ್ತೆಯಾಗಿದೆ!! ಆದರೆ, ಅದನ್ನು ತಂದು ಕೊಟ್ಟ ವಿನೋದ್ ಸ್ಥಳದಿಂದ ನಾಪತ್ತೆ!

ಪೊಲೀಸರು ಪ್ರಕರಣ ದಾಖಲಿಸಿದ್ದು, ವಿನೋದ್​ಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಆತನ ಮನೆಗೆ ಹೋಗಿ ವಿಚಾರಿಸಿದಾಗಲೂ ಅಲ್ಲಿ ಆತ ಇರಲಿಲ್ಲ. ಹೀಗಾಗಿ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net