

ಹಾವೇರಿ: ಊರಿಗೆ ತೆರುಳಲು ಬಸ್ಗಾಗಿ ಕಾಯುತ್ತಿದ್ದ ಯುವತಿಯ ಮೊಬೈಲ್ ಕದ್ದು ಓಡುತ್ತಿದ್ದ ಕಳ್ಳನನ್ನು ಯುವತಿಯೇ ಬೆನ್ನತ್ತಿ ಹಿಡಿದ ಘಟನೆ ಹಾವೇರಿಯ ಬಸ್ ನಿಲ್ದಾಣದಲ್ಲಿ ನಡೆದಿದೆ.
ಯುವತಿ ಖದೀಮನನ್ನು ಬೆಂಡೆತ್ತಿ ಬೆವರಿಳಿಸುವ ವೇಳೆ ಬಸ್ ನಿಲ್ದಾಣದಲ್ಲಿದ್ದ ಜನರು ಆಕೆಯ ನೆರವಿಗೆ ಬಂದರು. ಅಲ್ಲದೆ, ತಾನೊಂದು, ನೀನೊಂದು ಎಂಬಂತೆ ಕಳ್ಳನಿಗೆ ಧರ್ಮದೇಟು ಸಹ ನೀಡಿದರು. ಈ ಘಟನೆ ನಿನ್ನೆ (ಸೆ.28) ರಾತ್ರಿ ನಡೆದಿದೆ.
ಸಾರಿಗೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಖದೀಮನನ್ನು ಬಸ್ ನಿಲ್ದಾಣದಲ್ಲಿ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ ಮತ್ತು ಕತ್ತುಪಟ್ಟಿ ಹಿಡಿದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನನ್ನು ಬಂಧಿಸಿ ಪೊಲೀಸರು ಠಾಣೆಗೆ ಕರೆದೊಯ್ದರು. ಮೊಬೈಲ್ ಕದ್ದು ಸಿಕ್ಕಿಬಿದ್ದ ಖದೀಮನನ್ನು ರಾಜು ಎಂದು ಗುರುತಿಸಲಾಗಿದೆ.
ಇದೇ ವೇಳೆ ಯುವತಿಯ ಧೈರ್ಯಕ್ಕೆ ಸಾರ್ವಜನಿಕರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.