ನಟ ಸಿದ್ಧಾರ್ಥ್​ಗೆ ತಟ್ಟಿದ ಕಾವೇರಿ ಪ್ರತಿಭಟನೆಯ ಬಿಸಿ: ಕನ್ನಡಿಗರ ಪರವಾಗಿ ಕ್ಷಮೆ ಕೋರಿದ ಪ್ರಕಾಶ್​ ರಾಜ್

Prakash Raj
Published on

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ಇಂದು ಕರ್ನಾಟಕ ಬಂದ್​ ಆಚರಣೆ ನಡೆಯುತ್ತಿದೆ. ಇದರ ನಡುವೆ ತಮಿಳು ನಟ ಸಿದ್ಧಾರ್ಥ್​ಗೆ ಪ್ರತಿಭಟನೆಯ ಬಿಸಿ ತಟ್ಟಿದ್ದು, ಕನ್ನಡ ಪರ ಸಂಘಟನೆಗಳ ನಡೆಯನ್ನು ನಟ ಪ್ರಕಾಶ್​ ರಾಜ್​ ಖಂಡಿಸಿದ್ದಾರೆ.

ಇನ್ನೇನು ಬಿಡುಗಡೆಯಾಗಲಿರುವ ಚಿಕ್ಕು ಚಿತ್ರದ ಪ್ರಚಾರಕ್ಕೆಂದು ನಟ ಸಿದ್ಧಾರ್ಥ್​ ನಿನ್ನೆ (ಸೆ.28) ಬೆಂಗಳೂರಿಗೆ ಬಂದಿದ್ದರು. ನಗರದ ಖಾಸಗಿ ಪ್ರದೇಶವೊಂದರಲ್ಲಿ ಸಿನಿಮಾ ಪ್ರಚಾರದ ನಿಮಿತ್ತ ಸುದ್ದಿಗೋಷ್ಠಿ ನಡೆಸುವಾಗ ಅಲ್ಲಿಗೆ ಮಧ್ಯ ಪ್ರವೇಶ್​ ಮಾಡಿದ ಕರವೇ ಸ್ವಾಭಿಮಾನಿ ಸೇನೆಯ ಕಾರ್ಯಕರ್ತರು ನಟ ಸಿದ್ಧಾರ್ಥ್​ ಅವರನ್ನು ಬಲವಂತವಾಗಿ ಸುದ್ದಿಗೋಷ್ಠಿಯೊಂದು ಹೊರಗಡೆ ಕಳುಹಿಸಿದರು.

ಇದೀಗ ಕರವೇ ಸ್ವಾಭಿಮಾನಿ ಸೇನೆಯ ನಡೆಗೆ ಪ್ರಕಾಶ್ ರಾಜ್ ವಿರೋಧ ವ್ಯಕ್ತಪಡಿಸಿದ್ದಾರೆ. ದಶಕಗಳಷ್ಟು ಹಳೆಯದಾದ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿರುವ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಕೇಂದ್ರ ಮಧ್ಯಸ್ಥಿಕೆ ವಹಿಸುವಂತೆ ಒತ್ತಡ ಹಾಕದ ಉಪಯೋಗಕ್ಕೆ ಬಾರದ ಸಂಸದರನ್ನು ಪ್ರಶ್ನಿಸುವ ಬದಲು ಜನಸಾಮಾನ್ಯ ಹಾಗೂ ಕಲಾವಿದರಿಗೆ ತೊಂದರೆ ಕೊಡುವುದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡಿಗನಾಗಿ, ಕನ್ನಡಿಗರ ಪರವಾಗಿ ಕ್ಷಮೆ ಇರಲಿ ಎಂದು ಟ್ವೀಟ್ ಮಾಡುವ ಮೂಲಕ ನಟ ಸಿದ್ಧಾರ್ಥ್​ ಪರ ಬ್ಯಾಟ್​ ಬೀಸಿದ್ದಾರೆ. ಆದರೆ, ಪ್ರಕಾಶ್​ ರಾಜ್​​ ಅವರು ಕಾವೇರಿ ಕುರಿತಾಗಿ ಯಾವುದೇ ಒಂದೂ ಟ್ವೀಟ್​ ಮಾಡಿಲ್ಲ.

ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ಕಳೆದ ಮಂಗಳವಾರವಷ್ಟೇ (ಸೆ.26) ಬೆಂಗಳೂರು ಬಂದ್​ ಆಚರಿಸಲಾಯಿತು. ಯಶಸ್ವಿಯೂ ಆಯಿತು. ಇಂದು ಅಖಂಡ ಕರ್ನಾಟಕ ಬಂದ್​ ಆಚರಣೆ ಆರಂಭವಾಗಿದೆ. ಸಂಚಾರ ಸಹ ವಿರಳವಾಗಿದೆ. ಇಂದಿನ ಬಂದ್​ ಪರಿಣಾಮ ಹೆಚ್ಚಾಗಿರಲಿದೆ.

ಕರ್ನಾಟಕದಿಂದ ತಮಿಳುನಾಡಿಗೆ 15 ದಿನಗಳವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್​​ ನೀರನ್ನು ಹರಿಸಬೇಕೆಂದು ಸೆ.12ರಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಆದೇಶವನ್ನು ಪಾಲಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸೆ.18ರಂದು ಆದೇಶ ಹೊರಡಿಸಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್​ಗೆ ಕರ್ನಾಟಕ ಮೇಲ್ಮನವಿ ಸಲ್ಲಿಸಿತ್ತು. ಸೆ.21ರಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ CWMA ಆದೇಶವನ್ನು ಎತ್ತಿಹಿಡಿದಿತ್ತು. ಅದರಂತೆ ರಾಜ್ಯ ಸರ್ಕಾರ ನೀರು ಬಿಡುಗಡೆ ಸಹ ಮಾಡಿತು. ಅತ್ತ ಸಂಘಟನೆಗಳು ಬಂದ್​ ಸಹ ಆಚರಿಸಿದವು. ಇದರ ನಡುವೆ ಮತ್ತೆ 3000 ಸಾವಿರ ಕ್ಯೂಸೆಕ್​ ನೀರು ಹರಿಸಲು ಕಾವೇರಿ ನದಿ ನೀರು ಸಮಿತಿ ಶಿಫಾರಸು ಮಾಡಿರುವುದರಿಂದ ಇಂದಿನ ಕರ್ನಾಟಕ ಬಂದ್​ ತೀವ್ರತೆ ಪಡೆದುಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ರಸ್ತೆಗಿಳಿಯೂ ಮುನ್ನ ಎಚ್ಚರ

ಇಂದು ರಾಜ್ಯದೆಲ್ಲೆಡೆ ಭಾರೀ ಪ್ರತಿಭಟನೆಗಳು ನಡೆಯಲಿದೆ. ಅದರಲ್ಲಿ ರಸ್ತೆ ತಡೆಯೇ ಪ್ರಮುಖವಾಗಿರಲಿದ್ದು, ಎಲ್ಲ ಹೆದ್ದಾರಿಗಳನ್ನು ಬಂದ್​ ಮಾಡಲು ಕನ್ನಡ ಪರ ಸಂಘಟನೆಗಳು ಪ್ಲಾನ್​ ಮಾಡಿವೆ. ಹೀಗಾಗಿ ರಸ್ತೆಗಿಳಿಯುವ ಮುನ್ನ ವಾಹನ ಸವಾರರು ತುಂಬಾ ಎಚ್ಚರಿಕೆ ವಹಿಸುವುದು ಸೂಕ್ತ. ಇಲ್ಲವಾದಲ್ಲಿ ಪ್ರತಿಭಟನೆಯ ನಡುವೆ ಸಿಲುಕಿ ಪರದಾಡಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net