ನಿಫಾ ವೈರಸ್​​​ ಸೋಂಕಿಗೆ ತುತ್ತಾಗಿದ್ದ ನಾಲ್ವರು ಸೋಂಕಿತರೂ ಗುಣಮುಖ, ನಿರ್ಬಂಧಗಳನ್ನು ವಾಪಸ್​​ ಪಡೆದ ಸರ್ಕಾರ

kmi
Published on

ಕೇರಳ: ದೇವರ ನಾಡು ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಸೋಂಕು ಸಂಪೂರ್ಣ ನಿಯಂತ್ರಣದಲ್ಲಿ ಇದೆ ಎಂದು ಕೇರಳ ರಾಜ್ಯ ಸರ್ಕಾರ ಹೇಳಿದೆ. ಸೋಂಕು ಹರಡುವ ಅತಿ ಹೆಚ್ಚು ಭೀತಿ ಇದ್ದ 200 ಮಂದಿಯ ಮಾದರಿಗಳನ್ನು ಈವರೆಗೆ ಸಂಗ್ರಹಿಸಲಾಗಿದ್ದು, ಎಲ್ಲರೂ ಸೋಂಕು ರಹಿತವಾಗಿದ್ದಾರೆ ಎಂಬ ಪರೀಕ್ಷಾ ವರದಿಗಳು ಬಂದಿವೆ ಎಂದು ಕೇರಳ ರಾಜ್ಯ ಸರ್ಕಾರದ ಆರೋಗ್ಯ ಸಚಿವರಾದ ವೀಣಾ ಜಾರ್ಜ್‌ ತಿಳಿಸಿದ್ದರು.


ನಿಫಾ ವೈರಸ್​​​ನಿಂದ ಬಳಲುತ್ತಿದ್ದ ನಾಲ್ವರು ಸೋಂಕಿತರು ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಸೋಂಕಿಗೆ ಒಳಪಟ್ಟಿದ್ದ ನಾಲ್ವರ ಮಂದಿಯ ರಿಪೋರ್ಟ್​​ ನೆಗೆಟಿವ್​​ ಆಗಿದ್ದು, ಇದೀಗ ನಾಲ್ವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಮಾಡಲಾಗಿದೆ.


ಸೋಂಕು ದೃಡಪಟ್ಟಿದ್ದ ನಾಲ್ವರು ರೋಗಿಗಳಿಗೆ ಚಿಕಿತ್ಸೆ ನೀಡಲಾಗುಗಿದ್ದು, ಉಳಿದವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. 9 ವರ್ಷದ ಓರ್ವ ಬಾಲಕ ಕೂಡಾ ಸೋಂಕಿತನಾಗಿದ್ದು, ಆತನಿಗೆ ವೆಂಟಿಲೇಟರ್ ನೆರವಿನೊಂದಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೇರಳ ರಾಜ್ಯಾದ್ಯಂತ 24x7 ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದ್ದು, ರಾಜ್ಯಾದ್ಯಂತ 19 ತಂಡಗಳು ಸಕ್ರಿಯವಾಗಿತ್ತು.


ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದಂತೆಯೇ ಇದೀಗ ಕೋಝಿಕ್ಕೋಡ್​​ನ ಕೆಲ ಪ್ರದೇಶಗಳ ಮೇಲೆ ಹೇರಲಾಗಿದ್ದ ನಿರ್ಬಂಧವನ್ನೂ ಸರ್ಕಾರ ಹಿಂಪಡೆದಿದೆ.


ನಿಫಾ ವೈರಸ್ ಸೋಂಕು ಹರಡುವಿಕೆ ನಿಗ್ರಹ ಸಂಬಂಧ ಕೇರಳ ಸರ್ಕಾರವು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕೇಂದ್ರ ತಂಡ ಶ್ಲಾಘಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net