

Meghalaya Honeymoon Case : ಮೇಘಾಲಯ ಹನಿಮೂನ್ ಕೊಲೆ ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ. ಹನಿಮೂನ್ ಹೆಸರಿನಲ್ಲಿ ಪತ್ನಿ ಸೋನಮ್ ರಘುವಂಶಿ, ತನ್ನ ಪತಿ ರಾಜಾ ರಘುವಂಶಿಯನ್ನು ಶಿಲ್ಲಾಂಗ್‌ಗೆ ಕರೆದೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣದ ತನಿಖೆಯಲ್ಲಿ ಸಾಕಷ್ಟು ಸಂಗತಿಗಳು ಹೊರ ಬೀಳುತ್ತಿವೆ.
ತನ್ನ ಪ್ರಿಯಕರ ರಾಜ್ ಕುಶ್ವಾಹ ಜೊತೆ ಆರೋಪಿ ಸೋನಮ್ ನಡೆಸಿದ ವಾಟ್ಸ್ಆ್ಯಪ್ ಚಾಟ್ ಅನ್ನು ಪೊಲೀಸರು ರಿಕವರಿ ಮಾಡಿದ್ದಾರೆ. ಅದರ ಪ್ರಕಾರ, ಹಿರಿಯರು ತನ್ನ ಇಚ್ಛೆಗೆ ವಿರುದ್ಧವಾಗಿ ರಾಜಾ ರಘುವಂಶಿ ಜೊತೆ ಮದುವೆ ನಿಶ್ಚಯಿಸಿದ್ದಾರೆ ಮತ್ತು ಮದುವೆಯ ನಂತರವೂ ಆತನೊಂದಿಗೆ ದೈಹಿಕ ಸಂಪರ್ಕ ಇಟ್ಟುಕೊಳ್ಳಲು ಇಷ್ಟವಿಲ್ಲ ಎಂದು ಪ್ರಿಯಕರ ರಾಜ್ ಜೊತೆ ಆಕೆ ಚಾಟ್ ಮಾಡಿದ್ದಾಳೆ.
ತನ್ನ ಗಂಡ ರಾಜಾ ರಘುವಂಶಿಯನ್ನು ಕ್ರೂರವಾಗಿ ಕೊಂದು ಆತನ ದೇಹವನ್ನು ಕಣಿವೆಗೆ ಎಸೆದು, ನಂತರ ಸೋನಮ್ ಹೊಸ ನಾಟಕ ಆಡಿರುವುದು ಕೂಡ ತನಿಖೆಯಲ್ಲಿ ಬಯಲಾಗಿದೆ. ರಾಜಾ ರಘುವಂಶಿ ಫೋನ್‌ನಲ್ಲಿ "ಏಳು ಜನ್ಮಗಳಲ್ಲಿಯೂ ನೀನೇ ನನ್ನ ಸಂಗಾತಿ" ಎಂಬ ಶೀರ್ಷಿಕೆಯೊಂದಿಗೆ ವಾಟ್ಸ್ಆ್ಯಪ್ ಸ್ಟೇಟಸ್ ಪೋಸ್ಟ್ ಮಾಡಿದ್ದಳು. ಮೇ 23 ರಂದು ರಾಜಾರನ್ನು ಕೊಲೆ ಮಾಡಲಾಯಿತು. ಇದಾದ ಕೆಲವು ಗಂಟೆಗಳ ನಂತರ ಆಕೆ ಸ್ಟೇಟಸ್ ಪೋಸ್ಟ್ ಮಾಡಿದ್ದಾಳೆ. ರಾಜಾ ಇನ್ನೂ ಜೀವಂತವಾಗಿದ್ದಾನೆ ಎಂದು ಆತನ ಕುಟುಂಬ ಸದಸ್ಯರಿಗೆ ಮನವರಿಕೆ ಮಾಡಲು ಆಕೆ ಪ್ರಯತ್ನಿಸಿದಳು.
ಪೊಲೀಸರು ಬಹಿರಂಗಪಡಿಸಿದ ವಿವರಗಳ ಪ್ರಕಾರ, ಸೋನಮ್ ಆರಂಭದಲ್ಲಿ ರಾಜಾ ರಘುವಂಶಿಯನ್ನು ಕೊಲ್ಲಲು ಸುಪಾರಿ ಹಂತಕರಿಗೆ 4 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದಳು. ಆದರೆ, ನಂತರ ಆ ಮೊತ್ತವನ್ನು ರೂ.20 ಲಕ್ಷಕ್ಕೆ ಹೆಚ್ಚಿಸಿದ್ದಾಳೆ. ಅಲ್ಲದೆ, ತನ್ನ ಗಂಡನ ಶವವನ್ನು ಕಣಿವೆಗೆ ಎಸೆಯಲು ಆರೋಪಿಗಳಿಗೆ ಸಹಾಯ ಕೂಡ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂದಹಾಗೆ, ಸೋನಮ್ ಮೇ 11 ರಂದು ರಾಜಾ ರಘುವಂಶಿ ಅವರನ್ನು ವಿವಾಹವಾದರು. ನವದಂಪತಿ ಮೇ 20 ರಂದು ತಮ್ಮ ಹನಿಮೂನ್‌ಗೆ ಮೇಘಾಲಯಕ್ಕೆ ತೆರಳಿದರು. ಮೇ 23 ರಂದು ತಮ್ಮ ವಸತಿಗೃಹದಿಂದ ಸ್ಕೂಟಿಯಲ್ಲಿ ಹೊರಟು ಇದ್ದಕ್ಕಿದ್ದಂತೆ ನಾಪತ್ತೆಯಾದರು. ಸ್ಕೂಟರ್ ಒಂದು ಹಳ್ಳಿಯ ಹೊರವಲಯದಲ್ಲಿ ಪತ್ತೆಯಾಗಿತ್ತು. ಆದಾಗ್ಯೂ, ಅವರು ಕಣ್ಮರೆಯಾದ 11 ದಿನಗಳ ನಂತರ (ಜೂನ್ 2 ರಂದು), ಪೊಲೀಸರು ರಘುವಂಶಿ ಅವರ ಶವವನ್ನು ಸೊಹ್ರಾದಲ್ಲಿನ ಜಲಪಾತದ ಬಳಿಯ ಆಳವಾದ ಕಣಿವೆಯಲ್ಲಿ ಪತ್ತೆ ಮಾಡಿದರು. ಅವರ ದೇಹದ ಮೇಲೆ ಚಾಕುವಿನಿಂದಾದ ಗಾಯಗಳಿದ್ದ ಕಾರಣ, ಪೊಲೀಸರು ಕೊಲೆ ಎಂದು ಶಂಕಿಸಿದರು. ಸೋನಮ್ ಎಲ್ಲಿದ್ದಾರೆಂದು ಪತ್ತೆಯಾಗದ ಕಾರಣ ಎಲ್ಲರೂ ಭಯಭೀತರಾಗಿದ್ದರು. ಈ ಮಧ್ಯೆ, ವಿಶೇಷ ಪಡೆ ಆಕೆಗಾಗಿ ಕಾಡಿನಲ್ಲಿ ಹುಡುಕಾಟ ನಡೆಸಿತು. ಮತ್ತೊಂದೆಡೆ, ಪೊಲೀಸರು ಪ್ರಕರಣದ ತನಿಖೆಯ ವೇಗವನ್ನು ಹೆಚ್ಚಿಸಿದರು.
ಸೋನಮ್ ಮತ್ತು ಕುಶ್ವಾಹ ಅವರ ಯೋಜನೆಯಂತೆಯೇ ಎಲ್ಲವೂ ನಡೆಯಿತು. ಆದರೆ, ಕೊಲೆಗೆ ಅವರು ಬಳಸಿದ್ದ ಹರಿತವಾದ ಆಯುಧ ಎಲ್ಲವನ್ನೂ ತಲೆಕೆಳಗು ಮಾಡಿತು. ರಘುವಂಶಿ ಕೊಲೆ ಪ್ರಕರಣದ ತನಿಖೆಯ ಸಮಯದಲ್ಲಿ, ಸೋನಮ್ ಜೀವಂತವಾಗಿದ್ದಾಳೆ ಎಂಬ ಅನುಮಾನ ಮೂಡಿತು. ಅಲ್ಲದೆ, ಆಕೆಯೇ ಕೊಲೆ ಮಾಡಿರಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿತು. ಸಾಮಾನ್ಯವಾಗಿ, ಮೇಘಾಲಯದಲ್ಲಿ ಅಂತಹ ಆಯುಧವನ್ನು ಬಳಸಲಾಗುವುದಿಲ್ಲ. ಹೀಗಾಗಿ ಹೊರಗಿನವರು ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿತು. ಬಳಿ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ ಸೋನಮ್, ರಾಜ್ ಕುಶ್ವಾಹ ಜತೆ ನಿಯಮಿತವಾಗಿ ಸಂಪರ್ಕದಲ್ಲಿರುವುದು ತಿಳಿದುಬಂತು. ಸೋನಮ್, ರಾಜಾ ರಘುವಂಶಿ ಅವರ ತಾಯಿಯೊಂದಿಗೆ ಮಾತನಾಡಿದ ಕೊನೆಯ ಮಾತುಗಳು ಸಹ ಪೊಲೀಸರಿಗೆ ಅನುಮಾನ ಉಂಟುಮಾಡಿದವು. ಅಲ್ಲದೆ, ಅವರಿಬ್ಬರೂ ಒಟ್ಟಿಗೆ ಇರುವ ಫೋಟೋಗಳ ಯಾವುದೇ ಸ್ಟೇಟಸ್‌ಗಳನ್ನು ಪೋಸ್ಟ್ ಮಾಡದ ಕಾರಣ ಅನುಮಾನಗಳು ಇನ್ನಷ್ಟು ಬಲಗೊಂಡವು ಎಂದು ಪೊಲೀಸ್ ಅಧಿಕಾರಿ ಬಹಿರಂಗಪಡಿಸಿದರು.
ಈ ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಸಂಗತಿ ಬೆಳಕಿಗೆ ಬಂದಿದೆ. ಅದೇನೆಂದರೆ, ಈ ಪ್ರಕರಣದಲ್ಲಿ ಆರೋಪಿಯಾಗಿರುವ ರಾಜ್ ಕುಶ್ವಾಹ ಕೂಡ ಮೃತ ರಾಜಾ ರಘುವಂಶಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ. ಈ ವಿಡಿಯೋವನ್ನು ಮೃತರ ಸಹೋದರಿಯೊಬ್ಬರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಂದಹಾಗೆ, ಸೋನಮ್ ತನ್ನ ತಂದೆಯ ಕಂಪನಿಯಲ್ಲಿ ಕೆಲಸ ಮಾಡುವ ರಾಜ್ ಕುಶ್ವಾಹನನ್ನು ಪ್ರೀತಿಸುತ್ತಿದ್ದಳು. ಆದರೆ, ಆ ಬಗ್ಗೆ ಹಿರಿಯರಿಗೆ ಹೇಳುವ ಧೈರ್ಯ ಇರಲಿಲ್ಲ. ಆದ್ದರಿಂದ, ಅವಳು ರಾಜಾ ರಘುವಂಶಿಯನ್ನು ಮದುವೆಯಾದಳು. ಬಳಿಕ ತಮ್ಮ ಪ್ರೇಮಕ್ಕೆ ರಘುವಂಶಿ ಅಡ್ಡಿಯಾಗುತ್ತಾನೆಂದು ಭಾವಿಸಿ, ಆತನನ್ನು ಕೊಲ್ಲಲು ಸೋನಮ್ ಮತ್ತು ಕುಶ್ವಾಹ ಸಂಚು ರೂಪಿಸಿದರು. ಅದನ್ನು ಕಾರ್ಯಗತಗೊಳಿಸಲು, ಸುಪಾರಿ ಹಂತಕರನ್ನು ಏರ್ಪಡಿಸಿದರು.
ಸೋನಮ್ ಮೇಘಾಲಯಕ್ಕೆ ಹನಿಮೂನ್ ಪ್ಲಾನ್ ಮಾಡಿದಳು. ಆದರೆ, ಕುಶ್ವಾಹ ಮೇಘಾಲಯಕ್ಕೆ ಹೋಗಲಿಲ್ಲ. ಬದಲಾಗಿ ಫೋನ್‌ನಲ್ಲಿ ಸೋನಮ್ ಜೊತೆ ಸಂಪರ್ಕದಲ್ಲಿದ್ದನು. ಯೋಜನೆಯ ಪ್ರಕಾರ, ಸೋನಮ್, ರಾಜಾ ರಘುವಂಶಿಯನ್ನು ಚಿರಾಪುಂಜಿಯ ಸಂಚಾರವಿಲ್ಲದ ರಸ್ತೆಗೆ ಕರೆದೊಯ್ದಳು. ಅಲ್ಲಿ, ಸುಪಾರಿ ಹಂತಕರು ಆತನನ್ನು ಕೊಂದರು. ನಂತರ, ಸೋನಮ್ ಸೇರಿದಂತೆ ಮೂವರು ಆರೋಪಿಗಳು ಅಸ್ಸಾಂನ ಗುವಾಹಟಿಗೆ ಹೋಗಿ, ಅಲ್ಲಿಂದ ಬೇರೆ ಬೇರೆಯಾದರು. ಈ ನಡುವೆ ಸೋನಮ್, ಪೊಲೀಸರಿಗೆ ರಘುವಂಶಿಯನ್ನು ತಾನು ಕೊಂದಿಲ್ಲ, ಬದಲಿಗೆ ಯಾರೋ ಅವರನ್ನು ಅಪಹರಿಸಿದ್ದಾರೆ ಎಂದು ಹೇಳಿದಳು. ಆದರೆ, ತನಿಖೆಯಲ್ಲಿ ಆಕೆಯ ಕಳ್ಳಾಟ ಎಲ್ಲವು ಬಯಲಾಯಿತು.
ಮತ್ತೊಂದೆಡೆ, ಈ ಪ್ರಕರಣದಲ್ಲಿ ಇಂದೋರ್‌ನ ವಿಶಾಲ್ ಸಿಂಗ್ ಚೌಹಾಣ್ (22), ಉತ್ತರ ಪ್ರದೇಶದ ಲಲಿತಪುರದ ರಾಜ್ ಸಿಂಗ್ ಕುಶ್ವಾಹ (21) ಮತ್ತು ಆಕಾಶ್ ರಜಪೂತ್ (19) ಎಂಬುವರನ್ನು ಬಂಧಿಸಲಾಗಿದೆ. ಮತ್ತೊಂದೆಡೆ, ದೃಶ್ಯ ಪುನರ್ನಿರ್ಮಾಣಕ್ಕಾಗಿ ಪೊಲೀಸರು ಎಲ್ಲ ಆರೋಪಿಗಳನ್ನು ಮೇಘಾಲಯಕ್ಕೆ ಕರೆದೊಯ್ದರು. ಈ ಪ್ರಕ್ರಿಯೆಯಲ್ಲಿ, ಆಕೆಯನ್ನು ವಿಮಾನದಲ್ಲಿ ಕರೆದೊಯ್ಯುವ ದೃಶ್ಯಗಳು ವೈರಲ್ ಆಗುತ್ತಿವೆ. (ಏಜೆನ್ಸೀಸ್)