ಯೋಗ ಕ್ಷೇಮ; ಭಗವಂತನ ದರ್ಶನಕ್ಕೆ ಹರಿದಾಸರು ಕಂಡ ಶ್ರವಣ ಮನನ ಧ್ಯಾನಮಾರ್ಗ

ಶ್ರವಣ ಮನನ
Published on
‘ವೇದಶಾಸ್ತ್ರವ ಓದಿದರೇನು ಸಾಧನೆಗಿದು ನಿರ್ಧಾರ, ಹರಿ ಭಜನೆ ಮಾಡೋ ನಿರಂತರ’- ಸಾಧನೆ ಇಲ್ಲದೆ ಕೇವಲ ಓದು ಬರಹದ ತತ್ತ್ವಜ್ಞಾನ ಫಲಕಾರಿಯಲ್ಲ ಎಂದು ವಾದಿರಾಜರು ತಿಳಿಸಿದ್ದಾರೆ.

ಭಗವದ್ವಿಷಯಿಕವಾದ ಅಭ್ಯಾಸ ಹಾಗೂ ಜ್ಞಾನ ಹೊಂದಿದರೂ ಅದು ಭಗವಧ್ಯಾನ ರೂಪವಾಗಬೇಕು. ಅಂದರೆ ಅದು ಭಗವರ್ದಪಿತ ಬುದ್ಧಿಯಿಂದ ಮಾಡಬೇಕು. ಕೇವಲ ವಿಷಯ ಸಂಗ್ರಹವೇ ಜ್ಞಾನವೆನಿಸದು. ಜಗನ್ನಾಥದಾಸರ ಶ್ರೀ ಹರಿಕಥಾಮೃತ ಸಾರದ ವಿವರಣೆ ಇಂತಿದೆ. ಜ್ಞಾನರಹಿತವಾದ ಅಭ್ಯಾಸಕ್ಕಿಂತ ಜ್ಞಾನ ಹೆಚ್ಚಿನದು. ಸಾಧನೆಯಿಲ್ಲದೆಯಿರುವ ಜ್ಞಾನಕ್ಕಿಂತ ಸಾಧನಾ ಸಹಿತ ಧ್ಯಾನವು ಶ್ರೇಷ್ಠ. ಈ ಧ್ಯಾನದಲ್ಲೂ ಎರಡು ವಿಧ. ಸಕಾಮಧ್ಯಾನ, ನಿಷ್ಕಾಮಧ್ಯಾನ. ಇವುಗಳಲ್ಲಿ ಸಕಾಮಧ್ಯಾನಕ್ಕಿಂತ ಫಲತ್ಯಾಗ ರೂಪವಾದ ನಿಷ್ಕಾಮಧ್ಯಾನವೇ ಶ್ರೇಷ್ಠವೆಂಬುದಾಗಿಯೂ, ಅದರಿಂದ ಅಪರೋಕ್ಷ ಜ್ಞಾನ ಉಂಟಾಗಿ ಮತ್ತೆ ಮೋಕ್ಷ ಪ್ರಾಪ್ತಿ ಎಂದು ಭಗವಂತನು ವಿವರಿಸಿದ್ದಾನೆ.

ಶಾಸ್ತ್ರರಹಿತವಾದ ಹಲವಾರು ಧ್ಯಾನದಿಂದ ಅವನ್ನು ಶ್ರವಣ ಮಾಡಿ ಬಳಿಕ ಅಧ್ಯಯನದಿಂದ ಮುಂದೆ ಧ್ಯಾನ ಮಾಡಿ ಪರಮಾತ್ಮನನ್ನು ತಿಳಿಯುತ್ತಾನೆ. ಯೋಗಾಚಾರ್ಯ ಶ್ರೀ ಕೃಷ್ಣನು ಗೀತೆಯಲ್ಲಿ ಭಗವದ್ದರ್ಶನ ಸಾಧನ ವೈವಿಧ್ಯವನ್ನು ಸ್ಪಷ್ಟಪಡಿಸಿರುವನು. ‘ಕೆಲವು ಜ್ಞಾನಿಗಳು ಮೊದಲೇ ವೇದಶಾಸ್ತ್ರಗಳನ್ನು ಅಧ್ಯಯನ ಮಾಡಿ ಶ್ರವಣ ಮನನಾದಿಗಳಿಂದ ತತ್ತ್ವ ನಿಶ್ಚಯ ಹೊಂದಿದವರಾಗಿ ಧ್ಯಾನದಿಂದ ತಮ್ಮ ಹೃದಯದಲ್ಲೇ ಪರಮಾತ್ಮನನ್ನು ತಿಳಿಯುತ್ತಾರೆ. ಶಾಸ್ತ್ರ ರಹಿತರಾದ ಹಲವರು ಧ್ಯಾನದಿಂದ ಅವನ್ನು ಶ್ರವಣ ಮಾಡಿ ಬಳಿಕ ಅಧ್ಯಯನದಿಂದ ಮುಂದೆ ಧ್ಯಾನ ಮಾಡಿ ಪರಮಾತ್ಮನನ್ನು ತಿಳಿಯುತ್ತಾರೆ. ಇನ್ನು ಕೆಲವರು ಭಗವದರ್ಪಣ ಬುದ್ದಿಯಿಂದ ಕರ್ವನುಷ್ಠಾನಗಳನ್ನು ಮಾಡಿ ಶಾಸ್ತ್ರಗಳ ಶ್ರವಣ ಮನನಗಳಿಂದ ಮನಸ್ಸಿನಲ್ಲಿ ಪರಮಾತ್ಮನನ್ನು ಕಾಣುವರು. ಇನ್ನು ಕೆಲವು ಅರ್ಹರು ಇತರರಿಂದ ಶಾಸ್ತ್ರಗಳನ್ನು ಕೇಳಿ ತಿಳಿದು ಮನನ ಮಾಡಿಕೊಂಡು ಧ್ಯಾನ ಪರಾಯಣರಾಗುತ್ತಾರೆ. ಇವರು ಸಾಮಾನ್ಯ ಪ್ರತಿಭೆಯುಳ್ಳವರಾದೂ ಬಹುಶ್ರವಣ ಮಾಡಿ ಸಂಸಾರ ಬಂಧನದಿಂದ ಖಂಡಿತವಾಗಿ ದಾಟುತ್ತಾರೆ’ ಎಂದಿರುವನು. ವಾದಿರಾಜ ಯತಿಗಳು, ತಮ್ಮ ಯುಕ್ತಿಮಲ್ಲಿಕೆಯಲ್ಲಿ ಶ್ರವಣ-ಮನನ ಧ್ಯಾನ ಇವುಗಳೇ ಭಗವಂತನ ದರ್ಶನೋಪಾಯದ ಪ್ರಧಾನ ಅಂಗಗಳು ಎಂದಿರುವರು. ಉತ್ತಮ ಯೋಗ್ಯತೆಯುಳ್ಳ ಕೆಲವು ಋಷಿಮುನಿಗಳು ಗುರುಉಪದೇಶದಿಂದಲೋ, ಅಥವಾ ಬುದ್ದಿಶಕ್ತಿಯ ಬಲದಿಂದಲೋ ಶಾಸ್ತ್ರಗಳ ಆಧ್ಯಯನದ ಮೂಲಕ ಪರಮಾತ್ಮನನ್ನು ತಿಳಿದು ಧ್ಯಾನಿಸಿ ಹೃದಯದಲ್ಲಿ ಪರಮಾತ್ಮನನ್ನು ಕಾಣುವರು. ನಾರದಾದಿ ದೇವರ್ಷಿಗಳು ಒಳಗೂ, ಹೊರಗೂ ಪರಮಾತ್ಮನನ್ನು ಕಾಣಬಲ್ಲರು. ಭಗವಂತನ ವಿಷಯವನ್ನು ಕಾಲಕಾಲಕ್ಕೆ ಗುರುಗಳಿಂದ ಕೇಳಿ ತಿಳಿದು, ಮತ್ತೆ ಮತ್ತೆ ಕೇಳಿ ವಿಷಯವನ್ನು ಮನನ ಮಾಡುತ್ತಾ, ಆ ಭಗವಂತನ ಕುರಿತಾದ ಅನುಭವ ಬರುವ ತನಕ ಈ ಸಂಸಾರದ ಭ್ರಾಂತಿ ಬಿಡದು ಎಂಬ ಗೋಪಾಲದಾಸರ ಈ ಸುಳಾದಿಯು ಸಾಧಕರಿಗೆ ಸೂಕ್ತ ಸಲಹೆಯಾಗಿವೆ.

‘ಕಾಲಕಾಲಕೆ ಹರಿಕಥಾ ಶ್ರವಣ ಗುರುಗಳ | ಮುಖದಿಂದ | ಕೇಳಿದ್ದೇ ಕೇಳುತ್ತ ಪೇಳುತ ಮನನವ ಮಾಡುತ್ತ | ಕೇಳಿದಂತೆ ಧ್ಯಾನವ ಮಾಡುತ್ತ ಮಾಡಿದ್ದನುಭವಕೆ ಮೇಲಾಗಿ ಬಂದೊದಗೋತನಕ || ಭ್ರಾಂತಿ ಬಿಡದೋ||’

ಧ್ಯಾನದಲ್ಲಿ ಮನಸ್ಸು ಏಕಾಗ್ರವಾಗದಿದ್ದರೆ ಶ್ರವಣದ ಮೂಲಕ ತತ್ತ್ವ ನಿಶ್ಚಯವಾಗಿಸಿಕೋ. ಅದಾಗದಿದ್ದರೆ ಜಪಾದಿಗಳಲ್ಲಿ ತೊಡಗು, ಅಲ್ಲೂ ಏಕಾಗ್ರತೆ ಸಾಧ್ಯವಾಗದಿದ್ದರೆ ದೇವರ ನಾಮ ಸಂಕೀರ್ತನೆ ಮಾಡು ಎಂದು ಗೋಪಾಲದಾಸರ ಈ ಉಪದೇಶವು ಸಾಧಕರಿಗೆ ಧ್ಯಾನದೆಡೆಗೆ ಸಾಗುವ ಮೆಟ್ಟಿಲಿನಂತಿದೆ.

‘ಚಲಿಸದೇ ಧ್ಯಾನವನು ಮಾಡು ಮನ | ಒಲಿಸದಿರೋ ಶ್ರವಣವನು ಮಾಡು | ಸುಲಭದ ಜಪದೊಳೋಲ್ಲಾಡು ಚಿತ್ತ-| ಒಳಗಾಗದಿರಲು ಕೀರ್ತನೆಯ ಪಾಡು |’

ಶ್ರವಣ- ಮನನ- ಧ್ಯಾನಗಳ ಮೂಲಕ ಭಗವಂತನ ಮಹಾತ್ಮ್ಯ್ಞಾನವನ್ನು ಸಂಪಾದಿಸಿ ಆ ಬಳಿಕ ನಿರಂತರವಾದ ಭಕ್ತಿಯಲ್ಲಿ ಮನಸ್ಸನ್ನು ತೊಡಗಿಸಬೇಕೆಂದು ಬ್ರಹ್ಮಸೂತ್ರ ಭಾಷ್ಯದಲ್ಲಿ ಆಚಾರ್ಯ ಮಧ್ವರು ಸಾಧನಾಮಾರ್ಗವನ್ನು ತೋರಿದ್ದಾರೆ. ಆಗೊಮ್ಮೆ ಈಗೊಮ್ಮೆ ವಿಶ್ರಾಂತಿಯಿಂದ ಭಗವಚ್ಚಿಂತನೆ ಮಾಡುವುದಕ್ಕೆ ‘ಧಾರಣೆ’ ಎನ್ನುತ್ತಾರೆ. ಅದೇ ಚಿಂತನೆ ನಿರಂತರ ಸಾಗಿದರೆ ‘ಧ್ಯಾನ’ವೆನಿಸುವುದು. ನಿರಾಯಾಸವಾಗಿ ಎಂದು ಬೇಕಾದರಂದು ಎಲ್ಲಿ ಬೇಕಾದಲ್ಲಿ ಧ್ಯಾನಿಸಲು ಬೇಕಾದ ಏಕಾಗ್ರತೆಯ ಸ್ಥಿತಿಗೆ ‘ಸಮಾಧಿ’ ಎನ್ನುತ್ತಾರೆ. ವಾಯು ಬಂಧನವಿಲ್ಲದೇ ಅವಿಚ್ಛಿನ್ನವಾಗಿ ಸ್ಮರಿಸುವುದಕ್ಕೂ ‘ಧ್ಯಾನ’ವೆಂದು ಹೆಸರು. ಇಂತಹ ಸಮಾಧಿಯ ಪರಿಪಾಠದಿಂದ ಮಾತ್ರವೇ ಹರಿಯ ದರ್ಶನವು ದೊರಕಬಲ್ಲುದು. ಅವಿಚ್ಛಿನ್ನವಾದ ಶಾಸ್ತ್ರಾಲೋಚನೆಯಿಂದಲೂ ಭಗವಂತನ ದರ್ಶನವಾಗುವುದು ಸಾಧ್ಯವಿದೆ. ಯೋಗಸಾಧನೆಯ ದೃಷ್ಟಿಯಿಂದ ಪ್ರಾಣಾಯಾಮಾ ಭ್ಯಾಸದಿಂದ 34 ನಿಮಿಷ 12 ಸೆಕೆಂಡುಗಳಷ್ಟು ಕಾಲ ಕುಂಭಕ ಮಾಡಲು ಸಮರ್ಥರಾದಾಗ, ಸಾಧಕರಿಗೆ ಅನಾಯಾಸವಾಗಿ ಧ್ಯಾನಾವಸ್ಥೆಯು ಸಿದ್ಧಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net