ಯೋಗಕ್ಷೇಮ: ಹರಿದಾಸರ ಧಾರಣಾನುಭೂತಿ-ಸಿದ್ದಿ-ತತ್ತ್ವ ವಿವೇಚನೆ

Haridasaru
Published on
‘ಯಾರ ಮನವು ನಿರಂತರವೂ ಪರಮಾತ್ಮನ ವಿಷಯದಲ್ಲಿ ಸ್ಥಿರವಾಗಿದೆಯೋ, ಮನದೋಷಗಳೆಲ್ಲಾ ದೂರವಾಗಿ ಬ್ರಹ್ಮ ವಿಷಯದಲ್ಲಿ ಯಾರಿಗೆ ಅಪರೋಕ್ಷ ಜ್ಞಾನವು ಉಂಟಾಗಿದೆಯೋ ಅಂತಹ ಜ್ಞಾನಯೋಗಿಯು ಉತ್ತಮೋತ್ತಮವಾದ ಸಮಾಧಿ ಸುಖವನ್ನು ಉಪಭೋಗಿಸುತ್ತಾನೆ’ ಎಂದು ಗೀತೆಯಲ್ಲಿ ವಿವರಿಸಿದೆ.

ಧಾರಣಾಧಿ ಸಾಧನೆಯ ಬ್ರಹ್ಮ ಸಂಸರ್ಗದಿಂದ ಉಂಟಾದ ಆನಂದವನ್ನು ಯಾರು ಬಣ್ಣಿಸಬಲ್ಲರು? ಸಿಹಿ ತಿಂಡಿಯನ್ನು ತಿಂದ ಮೂಕನಂತೆ ಆ ಸ್ಥಿತಿ. ‘ರಾಗಿತಂದೀರ್ಯಾ’ ಎಂಬ ಕೀರ್ತನೆಯಲ್ಲಿ;

‘ಕಾಮ ಕ್ರೋಧವ ಅಳಿದವರಾಗಿ

ನೇಮನಿತ್ಯವ ಮಾಡುವರಾಗಿ!

ಆ ಮಹಾ ಪದವಿಯ ಸುಖಿಸುವರಾಗಿ

ಪ್ರೇಮದಿ ಕುಣಿ ಕುಣಿದಾಡುವರಾಗಿ|’

ಎಂದು ಪುರಂದರದಾಸರು ಹಾರೈಸಿದ್ದಾರೆ.

ಭಗವದ್ಗೀತೆಯಲ್ಲಿ ಧಾರಣಾ ಕ್ರಿಯೆಯ ಅಭ್ಯಾಸ ತಂತ್ರವನ್ನು ಆ ಮೂಕ ಪರಮಗತಿಯನ್ನು ಕಾಣುವ ವಿಧಾನವನ್ನು ಹೇಳಲ್ಪಟ್ಟಿದೆ. ‘ಬ್ರಹ್ಮನಾಡಿ ಎಂದು ಕರೆಯುವ ಸುಷುಮ್ನ ನಾಡಿಯ ಹೊರತು ಇತರ ಎಲ್ಲಾ ನಾಡಿಗಳನ್ನು ಪ್ರಾಣಾಯಾಮ ಬಲದಿಂದ ನಿರೋಧಿಸಿ ಮನಸ್ಸನ್ನು ಹೃತ್ ಶಬ್ದ ವಾಚ್ಯನಾದ ನಾರಾಯಣನಲ್ಲಿ ಸ್ಥಿರಗೊಳಿಸಿ ಪ್ರಾಣವಾಯುವನ್ನು ಸುಷುಮ್ನ ನಾಡಿಯ ಮೂಲಕ ಶಿರ ಪ್ರದೇಶದಲ್ಲಿ ಪ್ರವೇಶ ಮಾಡಿಸಿ ಪರಮಾತ್ಮನ ಧ್ಯಾನರೂಪಿ ಯೋಗವನ್ನು ಮಾಡುತ್ತಿರುವಾಗಲೇ ಯಾವ ಏಕನಿಷ್ಠಾಜ್ಞಾನಿಯ ಓಂಕಾರ ಶಬ್ದ ವಾಚ್ಯನಾದ ಬ್ರಹ್ಮನಾದ ನನ್ನ ಸ್ಮರಣೆ ಮಾಡುತ್ತಾ ಮುಖದಲ್ಲಿ ‘ಓಂ’ ಉಚ್ಚಾರ ಮಾಡುತ್ತಾ ದೇಹತ್ಯಾಗ ಮಾಡುವನೋ ಅವನೇ ಅರ್ಚಿರಾದಿ ಮಾರ್ಗಗಳಿಂದ ಉತ್ತಮ ಗತಿಯನ್ನು ಹೊಂದುತ್ತಾನೆ’.

ಓಂಕಾರವೆಂದರೆ ಸಂಕ್ಷಿಪ್ತ ಬ್ರಹ್ಮ. ಪ್ರಣವವೆಂಬ ಓಂಕಾರ ಅರ್ಥವೂ ಭಗವಂತನೇ. ಇದನ್ನು ಪತಂಜಲ ಯೋಗ ಸೂತ್ರದಲ್ಲಿ ‘ತಸ್ಯ ವಾಚಕ ಪ್ರಣವಃ’ ಎಂದಿದೆ. ಓಂಕಾರವನ್ನು ಸುಮ್ಮನೆ ಬಾಯಿಯಿಂದ ಉಚ್ಚರಿಸಿದರೆ ಪ್ರಯೋಜನವಿಲ್ಲ. ಅದರ ಅರ್ಥವನ್ನು ಮನಸ್ಸಿಗೆ ತಂದುಕೊಂಡು ಜಪಿಸಬೇಕು. ಮೆಲ್ಲಗೆ ಹೇಳಬೇಕು. ‘ತಜ್ಞಪಸ್ತದರ್ಥ ಭಾವನಮ್ ಎಂದು ಯೋಗಸೂತ್ರದಲ್ಲಿ ಹೇಳಿದೆ. ಇದನ್ನು ಮನೋಹೃದಿನಿರುದ್ಯಚ’ ಎಂದು ಹೇಳಿದೆ. ಇಲ್ಲಿ ‘ಹೃದಿ’ ಎಂದರೆ ‘ಹೃತ್’ ನಾಮಕನಾದ ಪರಮಾತ್ಮ. ಪ್ರಳಯದಲ್ಲಿ ಎಲ್ಲವನ್ನೂ ಹರಿಸುವವನಾದ್ದರಿಂದ ಅವನು ‘ಹೃತ್’ ಎಂದು ಕರೆಯಲ್ಪಡುವನು. ಅವನಲ್ಲಿ ಮನಸ್ಸನ್ನು ಸ್ಥಿರವಾಗಿ ನಿಲ್ಲಿಸಲ್ಪಡಬೇಕು.

ಪುರಂದರದಾಸರು ತಮ್ಮ ‘ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವೆನ್ನ ನಾಲಿಗೆಗೆ ಬರಲಿ’ ಎಂದು ಅಂತ್ಯಕಾಲದಲ್ಲಿ ಮನಸ್ಸು ಪರಮಾತ್ಮನನ್ನು ಚಿಂತಿಸುವ ಹಾಗೆ ಆಗಬೇಕೆಂದು ಹಂಬಲಿಸುತ್ತಾರೆ. ಹೀಗೆ ಧ್ಯೇಯ ವಸ್ತುವಿನಲ್ಲಿ ಚಿತ್ತವು ಏಕಾಗ್ರವಾಗುವುದೇ ‘ಧಾರಣಾ’. ‘ನಾಮವೊಂದು ನೆನೆಯೆ ವಿಜಯ ವಿಠಲಧಾಮವೇ ಆಗುವುದು ನಡೆಯದೇ ನಿಮಗೆಲ್ಲಾ’ ಎಂದು ವಿಜಯದಾಸರು ಅಂತ್ಯಕಾಲದಲ್ಲಿ ಪರಮಾತ್ಮನ ಸ್ಮರಣೆಯಿರಬೇಕಾದರೆ ಸತತ ಸಾಧನೆ ಬೇಕು. ನಿತ್ಯ ಅಭ್ಯಾಸವುಳ್ಳ ಯೋಗಿಗೆ ಮಾತ್ರ ಅಂತ್ಯಕಾಲದಲ್ಲಿ ಪರಮಾತ್ಮನ ಸ್ಮರಣೆ ಸುಲಭವಾಗುತ್ತದೆ ಎಂದಿದ್ದಾರೆ. ಹರಿಕಥಾಸಾರದಲ್ಲಿ ಜಗನ್ನಾಥದಾಸರು- ನಿತ್ಯೋಪಾಯವುಳ್ಳ ಭಕ್ತರಿಗೆ ಪರಮಾತ್ಮನು ಸುಲಭನೇ ಹೊರತು ಭವಸಾಗರದಲ್ಲಿ ಬಳಲುವ ಪಾಮರರಿಗೆ ಸುಲಭವಲ್ಲ. ಅಂದರೆ ಅಂತ್ಯಕಾಲದಲ್ಲಿ ಪರಮಾತ್ಮನು ಸ್ಮರಣೆಗೆ ಸುಲಭನಾಗಬೇಕಾದರೆ ಸತತವೂ ಭಗವಂತನ ನಾಮಧಾರಣೆ, ಸ್ಮರಣೆ ಎಂಬ ಉಪಾಯ ಉಳ್ಳವನಾಗಬೇಕು ಎಂದಿರುವರು.

ಹೌದು. ಇಲ್ಲೊಂದು ಹೇಳಲೇಬೇಕಾದ ಅಂಶವುಳಿದಿದೆ. ‘ದಿಕ್ಕು’ ಎಂಬ ಶಬ್ದಕ್ಕೆ ಜೀವನದ ನಿರ್ದಿಷ್ಟ ಯಾತ್ರಾಮುಖ ಎಂಬರ್ಥವನ್ನು ಗ್ರಹಿಸಿ, ಭೌತಿಕ ಭೋಗ ವಿಲಾಸಮಯವಾದ ಜೀವನಕ್ರಮದ ದಿಕ್ಕಿನಿಂದ ಚಿತ್ತವನ್ನು ಬಿಡುಗಡೆಮಾಡಿ, ಆಧ್ಯಾತ್ಮಿಕ ಜೀವನ ಕ್ರಮದ ದಿಕ್ಕಿನಲ್ಲಿ ಅದನ್ನು ಬಂಧಿಸುವುದು ಕೂಡ ಧಾರಣಾ ಎಂದೇ ತಿಳಿಯಬೇಕು. ಆದರೆ ಇದರ ಸಿದ್ದಿ ಆತ್ಮ- ಪರಮಾತ್ಮ- ತತ್ತ್ವ ವಿವೇಚನೆಗಳಿಂದ ಆಗಿಯೇ ಹೋಗುವುದರಿಂದ ‘ಧಾರಣಾ’ ಧರಿಸಲು ಯೋಗ್ಯವಾಗಿದೆ. ಯೋಗಗ್ರಂಥ ತಿಳಿಸುವಂತೆ 26 ನಿಮಿಷ 36 ಸೆಕೆಂಡುಗಳಷ್ಟು ಕಾಲ ಕುಂಭಕಮಾಡುವ ಸಾಮರ್ಥ್ಯ ಬಂದರೆ ಧಾರಣಾ ಸಿದ್ದಿಯಾಗುವುದು ಧಾರಣಾಸಿದ್ಧಿಯಿಂದ ಮನಸ್ಸು ಚಾಂಚಲ್ಯ ಬಿಟ್ಟು, ಆತ್ಮನ ಅಧಿಕಾರಕ್ಕೆ ಬರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net