ರಾಣಾ ಕಪೂರ್​ರ 1,200 ಕೋಟಿ ರೂ. ಆಸ್ತಿ ವಶ

RANA KAPOOR
Published on

ನವದೆಹಲಿ: ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಮತ್ತವರ ಕುಟುಂಬಕ್ಕೆ ಸೇರಿದ ಸುಮಾರು 1,200 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ವಶಪಡಿಸಿಕೊಂಡಿದೆ. ಲಂಡನ್, ನ್ಯೂಯಾರ್ಕ್ ಮತ್ತು ಮುಂಬೈನಲ್ಲಿನ ರಾಣಾ ಕಪೂರ್ ಆಸ್ತಿಗಳೂ ಇದರಲ್ಲಿ ಸೇರಿವೆ. ಜತೆಗೆ ಡಿಎಚ್​ಎಫ್​ಎಲ್ ಸಹೋದರರಾದ ಕಪಿಲ್ ಮತ್ತು ಧೀರಜ್ ವಾಧವನ್​ಗೆ ಸೇರಿದ ಸುಮಾರು 1,400 ಕೋಟಿ ರೂ. ಮೌಲ್ಯದ ಆಸ್ತಿಗಳನ್ನೂ ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ರಾಣಾ ಕಪೂರ್ ಮತ್ತು ಅವರ ಕುಟುಂಬದ ಆಸ್ತಿಗಳಲ್ಲಿ ದೆಹಲಿ, ಮುಂಬೈ ಮತ್ತು ಗೋವಾದ ಕೃಷಿಭೂಮಿ ಮತ್ತು ರೆಸಾರ್ಟ್​ಗಳು ಮತ್ತು ಸೆಂಟ್ರಲ್ ಲಂಡನ್ ಮತ್ತು ನ್ಯೂಯಾರ್ಕ್​ನಲ್ಲಿನ ಆಸ್ತಿಗಳಿವೆ. ಜತೆಗೆ ಸ್ಥಿರ ಠೇವಣಿಯಲ್ಲಿ 50 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿಎಚ್​ಎಫ್​ಎಲ್ ಪ್ರವರ್ತಕ ಸಹೋದರರಿಂದ ವಶಪಡಿಸಿಕೊಳ್ಳಲಾಗಿರುವ ಆಸ್ತಿಗಳಲ್ಲಿ 12 ಅಪಾರ್ಟ್​ವೆುಂಟ್​ಗಳು, ಪುಣೆಯಲ್ಲಿನ ಭೂಮಿ, ಲಂಡನ್, ಆಸ್ಟ್ರೇಲಿಯಾ ಮತ್ತು ನ್ಯೂಯಾರ್ಕ್​ನಲ್ಲಿನ ಸ್ವತ್ತುಗಳು ಸೇರಿವೆ ಎಂದು ತಿಳಿದುಬಂದಿದೆ.

ರಾಣಾ ಕಪೂರ್ ಮತ್ತವರ ಕುಟುಂಬಸ್ಥರು ಸೇರಿ ಅನೇಕರು ತಮ್ಮ ಕಿಕ್​ಬ್ಯಾಕ್​ಗೆ ಬದಲಾಗಿ ಯೆಸ್ ಬ್ಯಾಂಕ್​ನಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಲಗಳನ್ನು ನೀಡಿದ್ದರು. ಇದರಿಂದಾಗಿ ಬ್ಯಾಂಕ್ ನಷ್ಟಕ್ಕೆ ಸಿಲುಕಿತು ಎಂದು ಇಡಿ ಆರೋಪಿಸಿದೆ. ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಈಗಾಗಲೇ ರಾಣಾ ಕಪೂರ್ ಮತ್ತು ಅವರ ಕುಟುಂಬದ ವಿರುದ್ಧ ಕ್ರಮವಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಚಾರ್ಜ್​ಶೀಟ್​ಗಳನ್ನು ಸಲ್ಲಿಸಿವೆ. ಡಿಎಚ್​ಎಫ್​ಎಲ್ ಪ್ರವರ್ತಕ ಕಪಿಲ್ ವಾಧವನ್ ಅವರಿಂದ 600 ಕೋಟಿ ರೂ. ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಕಳೆದ ತಿಂಗಳು ರಾಣಾ ಕಪೂರ್ ಮತ್ತವರ ಪತ್ನಿ ಬಿಂದು ಮತ್ತು ಮಗಳು ರೋಶಿನಿ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಿತ್ತು. ಯೆಸ್ ಬ್ಯಾಂಕ್ ಹಗರಣ ಸಂಬಂಧ ತನಿಖಾ ಸಂಸ್ಥೆಗಳು 13 ಜನರನ್ನು ಆರೋಪಿಗಳಾಗಿ ಪಟ್ಟಿಮಾಡಿದ್ದು, ಈವರಗೆ ಅವರ ಸ್ವತ್ತುಗಳಿಗಾಗಿ ಹಲವು ಕಡೆಗಳಲ್ಲಿ ದಾಳಿ ನಡೆಸಿವೆ. ರಾಣಾ ಕಪೂರ್​ರನ್ನು ಕಳೆದ ಮಾರ್ಚ್​ನಲ್ಲಿ ಬಂಧಿಸಲಾಗಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net