

ನವದೆಹಲಿ: ಯೆಸ್ ಬ್ಯಾಂಕ್ ದಿವಾಳಿ ಹಿನ್ನೆಲೆಯಲ್ಲಿ ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದ್ದ ಹಣವನ್ನು ಹಿಂಪಡೆಯಲು ಪರದಾಡುತ್ತಿದ್ದ ಗ್ರಾಹಕರಿಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಬಿಗ್ ರಿಲೀಫ್ ನೀಡಿದೆ.
ಶನಿವಾರ ರಾತ್ರಿ ಯೆಸ್ ಬ್ಯಾಂಕ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಡೆಬಿಟ್ ಕಾರ್ಡ್ ಮೂಲಕ ನೀವೀಗ ಯೆಸ್ ಬ್ಯಾಂಕ್ ಅಥವಾ ಇನ್ನಿತರ ಬ್ಯಾಂಕ್ಗಳಲ್ಲಿ ಹಣವನ್ನು ವಿತ್ಡ್ರಾ ಮಾಡಿಕೊಳ್ಳಬಹುದಾಗಿದೆ. ನಿಮ್ಮ ತಾಳ್ಮೆಗೆ ನಮ್ಮ ಧನ್ಯವಾದಗಳು ಎಂದು ಹೇಳಿ ಆರ್ಬಿಐ ಮತ್ತು ಹಣಕಾಸು ಸಚಿವಾಲಯವನ್ನು ಟ್ಯಾಗ್ ಮಾಡಲಾಗಿದೆ.
ಇದಕ್ಕೂ ಮುನ್ನ ಗ್ರಾಹಕರು ಬಹುತೇಕ ಎಟಿಎಂಗಳಲ್ಲಿ ಹಣಕ್ಕಾಗಿ ಗಂಗಟೆಗಳ ಕಾಲ ಕ್ಯೂ ನಿಂತರೂ ಹಣ ಸಿಗದೆ ಪರದಾಟ ನಡೆಸಿದ್ದರು. ಇದರಿಂದ ಭಯಭೀತರೂ ಆಗಿದ್ದರು. ಇತ್ತ ಆನ್ಲೈನ್ ಬ್ಯಾಂಕಿಂಗ್ ಸೇವೆಯೂ ಕೂಡ ಕಾರ್ಯ ನಿರ್ವಹಿಸಿದಿರುವುದು ಗ್ರಾಹಕರನ್ನು ಮತ್ತಷ್ಟು ಚಿಂತೆಗೆ ದೂಡಿತು.
ಆದರೆ, ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ಆರ್ಬಿಐ ಹೇಳಿದೆ. ಅಲ್ಲದೆ, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯೆಸ್ ಬ್ಯಾಂಕ್ನ ಪುನಶ್ಚೇತನಕ್ಕೆ ಆರ್ಬಿಐ ಮುಂದಿಟ್ಟಿರುವ ಯೋಜನೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಒಪ್ಪಿಕೊಂಡಿದ್ದು, ಯೆಸ್ ಬ್ಯಾಂಕ್ನ ಶೇ. 49 ಷೇರುಗಳನ್ನು ಖರೀದಿ ಮಾಡುವುದಾಗಿ ಘೋಷಿಸಿದೆ. ಇದಕ್ಕಾಗಿ ಸುಮಾರು 2450 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸುಸ್ಥಿ ಸಾಲಗಳಿಂದ ದಿವಾಳಿ ಆಗಿರುವ ಯೆಸ್ ಬ್ಯಾಂಕ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ತನ್ನ ಸುಪರ್ದಿಗೆ ತೆಗೆದುಕೊಂಡು, ಬ್ಯಾಂಕ್ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಆಗಿ ಮಾಡಿದೆ. ನಗದು ವಿತ್ಡ್ರಾ ಮಿತಿಯನ್ನು 50 ಸಾವಿರಕ್ಕೆ ನಿಗದಿಗೊಳಿಸಿದೆ. ಇದರಿಂದ ಸಾವಿರಾರು ಗ್ರಾಹಕರು ಹಣ ತೆಗದುಕೊಳ್ಳಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಪರಿಸ್ಥಿತಿ ಸದ್ಯ ಸುಧಾರಿಸುವತ್ತ ಬಂದಿದೆ. (ಏಜೆನ್ಸೀಸ್)