ಹಿರಿಯ ನಟಿಯ ತಲೆಗೆ 40 ಸಲ ಬ್ಯಾಟ್​ನಿಂದ ಬಾರಿಸಿ ಕೊಲೆ; ತಾಯಿಯನ್ನು ಕೊಲ್ಲಲು ಮಗನಿಗಿತ್ತು ವರ್ಷಗಳ ಕಾಲದ ಅಸಹನೆ!

Veena Kapoor
Published on

ಮುಂಬೈ: ಕರಾಳ ದಿನದಂದು ಮಗನಿಂದಲೇ ಭೀಕರವಾಗಿ ಕೊಲೆಗೀಡಾದ ಹಿರಿಯ ನಟಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಬಹಿರಂಗಗೊಂಡಿದೆ. ಅಷ್ಟಕ್ಕೂ ಮಗನೇ ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದರ ಹಿಂದೆ ಆತನಿಗೆ ತಾಯಿ ವಿರುದ್ಧ ವರ್ಷಗಳ ಕಾಲದಿಂದ ಇದ್ದ ಅಸಹನೆ-ದ್ವೇಷವೇ ಕಾರಣ ಎಂಬುದನ್ನು ಸ್ವತಃ ಆತನೇ ಹೇಳಿಕೊಂಡಿದ್ದಾನೆ.

ಹಿಂದಿಯ ಕಿರುತೆರೆಯ ಹಿರಿಯ ನಟಿ ವೀಣಾ ಕಪೂರ್ ಇದೇ ಡಿ. 6ರಂದು ಮುಂಬೈನ ಜುಹುನಲ್ಲಿರುವ ಮನೆಯಲ್ಲಿ 43 ವರ್ಷದ ಪುತ್ರ ಸಚಿನ್ ಕಪೂರ್​​​ನಿಂದಲೇ ಕೊಲೆಯಾಗಿದ್ದರು. ತಾಯಿಯಯನ್ನು ಬೇಸ್​ಬಾಲ್ ಬ್ಯಾಟ್​ನಿಂದ ಸುಮಾರು 40 ಸಲ ತಲೆಗೆ ಬಾರಿಸಿ ಕೊಲೆ ಮಾಡಿದ್ದ ಪುತ್ರ ಸಚಿನ್, ಬಳಿಕ ಆಕೆಯ ಶವವನ್ನು ಮನೆಗೆಲಸದ ಚೋಟು (ಲಲು ಕುಮಾರ್​ ಮಂಡಲ್​) ಸಹಾಯದಿಂದ ತೆರವುಗೊಳಿಸಿದ್ದ. ರಕ್ತದ ಕಲೆಯನ್ನು ಚೋಟು ಒರೆಸಿ ಹಾಕಿದ್ದಲ್ಲದೆ, ಶವವನ್ನು ಮೂಟೆಗಟ್ಟಿ ಸಾಗಿಸಿ ಮಹಾರಾಷ್ಟ್ರದ ರಾಯಗಢದಲ್ಲಿನ ನದಿಗೆಸೆಯಲು ನೆರವಾಗಿದ್ದ. ಕೊಲೆಗೂ ಮೊದಲು ಸಚಿನ್ ತಮ್ಮ ಫ್ಲ್ಯಾಟ್​ ಇರುವ ಅಪಾರ್ಟ್​ಮೆಂಟ್​ನ 13 ಸಿಸಿಟಿವಿ ಕ್ಯಾಮರಾಗಳನ್ನು ನಿಷ್ಕ್ರಿಯಗೊಳಿಸಿದ್ದ ಎಂದು ಆತ ವಿಚಾರಣೆ ವೇಳೆ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಸಚಿನ್​ನ ಅಣ್ಣ ನವಿನ್​ ಯುಎಸ್​ನಲ್ಲಿದ್ದು ನಿತ್ಯವೂ ತಾಯಿಯೊಂದಿಗೆ ಕರೆ ಮಾಡಿ ಮಾತನಾಡುತ್ತಿದ್ದ. ಆದರೆ ಅಂದು ತಾಯಿ ಸಂಪರ್ಕಕ್ಕೆ ಸಿಗದ್ದರಿಂದ ಅನುಮಾನಗೊಂಡು ಅಪಾರ್ಟ್​ಮೆಂಟ್​ ಸುಪರ್​ವೈಸರ್ ಮೂಲಕ ನಾಪತ್ತೆ ದೂರು ದಾಖಲಿಸಿದ್ದ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಸಚಿನ್​ ಹಾಗೂ ಚೋಟು ಆರೋಪಿಗಳು ಎಂಬುದನ್ನು ಪತ್ತೆ ಮಾಡಿ ಬಂಧಿಸಿದ್ದರು. ನಂತರದ ವಿಚಾರಣೆಯಲ್ಲಿ ತಾಯಿಯನ್ನು ಕೊಲೆ ಮಾಡಲು ಏನು ಕಾರಣ ಎಂಬುದನ್ನು ಸಚಿನ್ ಹೇಳಿಕೊಂಡಿದ್ದಾನೆ.

ತನ್ನ ತಾಯಿಯ ಕೊಲೆಯ ಹಿಂದಿ ಬಾಲ್ಯದಿಂದಲೂ ಆಕೆಯ ಬಗ್ಗೆ ಇದ್ದ ಅಸಹನೆ ಹಾಗೂ ದ್ವೇಷವೇ ಕಾರಣ ಎಂದು ಸಚಿನ್ ಹೇಳಿಕೊಂಡಿದ್ದಾನೆ. ನಾನು ಹುಟ್ಟಿದಾಗ ನನ್ನ ತಂದೆ ನಷ್ಟಕ್ಕೀಡಾದರು ಎಂಬ ಕಾರಣಕ್ಕೆ ತಾಯಿ ನನ್ನನ್ನು ಯಾವಾಗಲೂ ಅನಿಷ್ಠ ಎಂಬಂತೆ ನೋಡುತ್ತಿದ್ದರು. ನಾನು ಅದೃಷ್ಟವಂತ ಅಲ್ಲ ಎಂಬ ಕಾರಣಕ್ಕೆ ನನ್ನಿಂದಲೇ ಎಲ್ಲ ತೊಂದರೆ ಆಗುತ್ತಿದೆ ಎಂದು ಯಾವಾಗಲೂ ಜರಿಯುತ್ತಿದ್ದರು. ಅದೇ ರೀತಿ ಮೊನ್ನೆ ಗಲಾಟೆ ನಡೆದಿದ್ದು ಕೊಲೆಗೆ ಕಾರಣವಾಗಿದ್ದರೂ ಅದರ ಹಿಂದೆ ಚಿಕ್ಕಂದಿನಿಂದ ಆಕೆ ನನ್ನನ್ನು ಕೆಟ್ಟದಾಗಿ ನೋಡಿಕೊಂಡಿದ್ದೇ ಕಾರಣ. ಕೊಲೆ ಮಾಡಿದ ಬಗ್ಗೆ ನನಗೆ ಪಶ್ಚಾತ್ತಾಪ ಇದ್ದರೂ, ಇದು ಒಂದಲ್ಲ ಒಂದು ದಿನ ಆಗುವಂಥದ್ದು ಎಂಬ ಅಂದಾಜಿತ್ತು ಎಂಬುದಾಗಿ ವಿಚಾರಣೆ ವೇಳೆ ಆತ ಹೇಳಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net