

ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೋ ಎಂದು ಕವಿ ಬಣ್ಣಿಸಿದ್ದು ಅದೆಷ್ಟು ಸತ್ಯ. ನಮಗೆ ಜರ್ಮನಿ ಯ ಲ್ಲಿ ಸೆಪ್ಟೆಂಬರ್ನಿಂದ ಸುಮಾರು ಮಾರ್ಚ್ ತನಕ ಸೂರ್ಯನ ಕೃಪೆ ವಿರಳ . ಹಾಗೆ ಸಂಕ್ರಾಂತಿ ಬಂತೆಂದರೆ ಹೆಚ್ಚಿನ ಸಂಭ್ರಮ . ಉತ್ತರಾಯಣ ಪ್ರಾರಂಭವಾಗಿ ಬೆಳಕು ತುಂಬಾ ಹೊತ್ತಿರುತ್ತದೆಂಬ ಉತ್ಸಾಹ ಮತ್ತೊಂದೆಡೆ ಗಡ ಗಡ ಚಳಿ ಕಡಿಮೆಯಾಗುತ್ತದೆಂಬ ಭರವಸೆ . ಅನಿವಾಸಿ ಭಾರತೀಯರ ಸಂಘಟನೆಗಳು ತಮ್ಮದೇ ಆದ ರೀತಿಯಲ್ಲಿ ಒಗ್ಗೂಡಿ ಸಂಕ್ರಾಂತಿಯನ್ನು ಆಚರಿಸುತ್ತೇವೆ.
ಈ ಬಾರಿ ಜರ್ಮನಿಯ ಫ್ರಾಂಕ್ ಪರ್ಟ್ ನಲ್ಲೊಂದು ವಿಶೇಷ ರೀತಿಯ ಸಂಕ್ರಾಂತಿ ಆಚರಣೆ . „ಯಕ್ಷ ಸಂಕ್ರಾಂತಿ“. ಯಕ್ಷಮಿತ್ರರು ಜರ್ಮನಿ ತಂಡ ದಿನಾಂಕ:20.01.2024 ಮತ್ತು ದಿನಾಂಕ:21.01.2024 ಎರಡು ದಿನ ಅದ್ಭುತ ಯಕ್ಷಗಾನ ಪ್ರದರ್ಶನ ನೀಡುವ ಮೂಲಕ ಸಂಕ್ರಾಂತಿ ಆಚರಿಸಲಾಯಿತು.
ಯಕ್ಷಗಾನ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಸಾಂಪ್ರದಾಯಿಕ ಕಲೆ. ವಿಭಿನ್ನ ವೇಷಭೂಷಣ , ಲಯಬದ್ಧವಾದ ಸಂಗೀತ ನೃತ್ಯ ಸಂಭಾಷಣೆಗಳ ಸಮ್ಮಿಲನ. ಈ ಜಾನಪದ ಕಲೆಯ ವಿಶೇಷತೆ ಏನಂದರೆ ಪ್ರಸಂಗ ಅಂದರೆ ಪ್ರದರ್ಶನವು ರಾಮಾಯಣ, ಮಹಾಭಾರತ, ಐತಿಹಾಸಿಕ ಪುರಾಣಗಳ ಸಣ್ಣ ಕಥೆಯನ್ನು ಆಯ್ಧು ಅದರ ಮೇಲೆ ಮೊದಲಿಗೆ ಭಾಗವತರ ಹಾಡುಗಾರಿಕೆಗೆ ನೃತ್ಯ ನಂತರ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಪಾತ್ರಧಾರಿಗಳು ಸಂಭಾಷಣೆ ಇರುತ್ತದೆ.
ಚೌಕಿ ಅಂದರೆ ವೇಷ ಭೂಷಣಗಳನ್ನು ಕಟ್ಟುವ ಸ್ಥಳದಲ್ಲಿ ಕಲಾವಿದರು ಆಯಾ ಪಾತ್ರಕ್ಕೆ ತಕ್ಕುದಾದ ಮುಖವರ್ಣಿಕೆ ಮಾಡಿಕೊಂಡು ವೇಷಭೂಷಣಗಳನ್ನು ಕಟ್ಟಿ ತಯಾರಾಗಿ. ಗಣಪತಿ ಪೂಜೆ ಮಾಡಿ ಪ್ರದರ್ಶನ ಚೆಂದದಿ ಮೂಡಿ ಬರಲು ಪ್ರಾರ್ಥಿಸಿ ರಂಗಕ್ಕೆ ಬರುವುದು ವಾಡಿಕೆ. ಪೂರ್ವರಂಗದಲ್ಲಿ ಭಾಗವತರ ಭಾಗವತಿಕೆಗೆ ಬಾಲಗೋಪಾಲರು ಲಯ ಬದ್ಧವಾಗಿ ನರ್ತಿಸುವರು ಹೆಚ್ಚಾಗಿ ದೇವರನಾಮ ಪ್ರಾರ್ಥನೆ ಪದದ ಭಾಗವತಿಕೆ ಇರುತ್ತದೆ. ನಂತರ ಪೀಠಿಕೆ ಸ್ತ್ರೀವೇಷದಾರಿಗಳ ನರ್ತನ. ಮತ್ತೆ ಆ ದಿನ ಕಥೆ ಅಂದರೆ ಪ್ರಸಂಗ ಆರಂಭವಾಗುತ್ತದೆ.
ಪ್ರಾಂಕ್ ಫರ್ಟ್ ನಲ್ಲಿ ಜರುಗಿದ ಯಕ್ಷಸಂಕ್ರಾಂತಿ ಇದೆ ರೀತಿ ಶಾಸ್ತ್ರೀಯ ಸಾಂಪ್ರದಾಯಿಕವಾಗಿ ಮೂಡಿ ಬಂತು . ಮೊದಲ ದಿನ ಮಹಾಭಾರತದಿಂದ ಆಯ್ಕೆಮಾಡಿಕೊಂಡ ಕೀಚಕ ವಧೆ ಪ್ರಸಂಗ. ಬಡಗು ತಿಟ್ಟಿನ ಪ್ರಕಾರದಲ್ಲಿ ಸಾಂಪ್ರದಾಯಿಕವಾಗಿ ನಡೆಯುವಂತೆ ಪೂರ್ವರಂಗದಲ್ಲಿ ಬಾಲಗೋಪಾಲರು ಕುಮಾರ ಅಥರ್ವ ರಾವ್ ಮತ್ತು ಕುಮಾರ ಆದಿಶೇಷ ಬಾಯರಿ, ಪೀಠಿಕೆ ಸ್ತ್ರೀ ವೇಷ ದಲ್ಲಿ ಕುಮಾರಿ ಖುಷಿ ಶೆಣೈ ಮತ್ತು ಕುಮಾರಿ ಸ್ನಿಗ್ಧ ಚೌಹಾಣ್ ಅಂದವಾಗಿ ನರ್ತಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ನಂತರ ಕಥಾಭಾಗದ ಆರಂಭ ಕೀಚಕನ ಶೌರ್ಯ ಗತ್ತು ಗಾಂಭೀರ್ಯ ಶೃಂಗಾರ, ದೂತನ ಹಾಸ್ಯ ಕೀಚಕನ ಸೋದರಿ ಸುಧೇಷ್ಣ ಳ ಸೌಮ್ಯತೆ, ತಮ್ಮನ ಮೇಲಿನ ಪ್ರೀತಿ, ಸೈರಂಧ್ರಿ / ದ್ರೌಪದಿ ಯ ಅಸಾಯಕತೆ , ದುಃಖ , ವಲಲ/ ಭೀಮನ ಕೋಪ , ಪರಾಕ್ರಮ . ಹೀಗೆ ನವರಸಗಳನ್ನು ಬಿಂಬಿಸಿ ಪಾತ್ರಗಳಿಗೆ ಜೀವ ತುಂಬಿ ಪ್ರದರ್ಶನ ನೀಡಿದ ಪಾತ್ರಧಾರಿಗಳು. ಕೊನೆಯಲ್ಲಿ ದುಷ್ಟ ಕೀಚಕನ ವಧೆ. ದುರುಳತನ ಕೆಟ್ಟ ನಡೆತೆ ಯಾವತ್ತೂ ಯಶಸ್ಸು ತರುವುದಿಲ್ಲವೆಂಬ ನೀತಿ ನಮ್ಮ ಪೌರಾಣಿಕ ಪ್ರಸಂಗಗಳು ನೀಡುತ್ತವೆ. ಅತ್ಯದ್ಭುತವಾಗಿ ಪ್ರದರ್ಶನವಿತ್ತ ಪಾತ್ರಧಾರಿಗಳು ಕೀಚಕನಾಗಿ ಶ್ರೀ ಅಜೀತ್ ಪ್ರಭು ತಲ್ಲೂರು, ವಿಜಯ ದೂತ ನಾಗಿ ಶ್ರೀ ಅಪೂರ್ವ ಬೆಳೆಯೂರು, ಸುಧೇಷ್ಣಳಾಗಿ ಶ್ರೀಮತಿ ಸುಷ್ಮಾ ರವೀಂದ್ರ, ಸೈರಂಧ್ರಿ ಯಾಗಿ ಶ್ರೀ ಶಶಿಧರ ನಾಯರಿ, ಇವರೆಲ್ಲರೂ ಯಕ್ಷಮಿತ್ರರು ಜರ್ಮನಿ ತಂಡದ ಹವ್ಯಾಸಿ ಯಕ್ಷಗಾನ ಕಲಾವಿದರು.
ವಲಲ / ಭೀಮನಾಗಿ ಅತಿಥಿ ಕಲಾವಿದರಾಗಿ ಆಯಾಮ , ಅನಿವಾಸಿ ಯಕ್ಷಗಾನ ಅಭಿಮಾನಿ ಮಂಡಳಿ ಯು.ಕೆ.ಯಿಂದ ಆಗಮಿಸಿದ ಶ್ರೀ ಯೋಗೇಂದ್ರ ಮರವಂತೆ. ಯಕ್ಷಮಿತ್ರರು ಜರ್ಮನಿ ಏರ್ಪಡಿಸಿದ ಈ ಕಾರ್ಯಕ್ರಮದಲ್ಲಿ ಭರತನಾಟ್ಯ ಒಡಿಸ್ಸಿ ನೃತ್ಯಗಾರ್ತಿ, ಗುರು ವಿದ್ವಾನ್ ಶ್ರೀಮತಿ ಭಾರತೀ ಅವಿರೆಡ್ಡಿ.ಮತ್ತು ಕರ್ನಾಟಿಕ್ ಶಾಸ್ತ್ರೀಯ ಸಂಗೀತ ವಿದ್ವಾನ್ ಗುರು ಶ್ರೀ ಬಾಲನಾಗರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು . ಶ್ರೀಯುತರು ಪಿಬರೆ ರಾಮ ರಸಂ… ಕೀರ್ತನೆ ತುಣುಕನ್ನು ಹಾಡಿ ಪ್ರೇಕ್ಷಕರು ತಲೆದೂಗುವಂತೆ ಮಾಡಿದರು.
ಅಯೋಧ್ಯೆ ಯ ಶ್ರೀ ರಾಮ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮಕ್ಕೆ ಯಕ್ಷಗಾನದ ರೂಪದಲ್ಲಿ ಸೇವೆಯನ್ನು ನೀಡುವ ಸಲುವಾಗಿ ಯಕ್ಷಮಿತ್ರರ ತಂಡ ಯಕ್ಷಸಂಕ್ರಾಂತಿಯ 2 ನೇ ದಿನ ರಾಮಾಯಣದ ಕಥಾಭಾಗ ಲಂಕಾದಹನ ವನ್ನು ಆಯ್ದುಕೊಂಡು ಪ್ರದರ್ಶನ ನೀಡಿದರು. ಪೂರ್ವರಂಗದಲ್ಲಿ ಬಾಲಗೋಪಾಲರಾಗಿ ಕುಮಾರ ಅಥರ್ವ್ ರಾವ್ ಮತ್ತು ಕುಮಾರ ಆದಿಶೇಷ ಬಾಯರಿ ಹರಿನಾರಾಯಣ ಗೋವಿಂದ ಪದಕ್ಕೆ ಲಯಬದ್ಧವಾಗಿ ಹೆಜ್ಜೆ ಹಾಕುವುದರ ಮೂಲಕ ಪ್ರಸಂಗ ಆರಂಭವಾಯಿತು . ರಾಮನ ಸೌಮ್ಯ ಸ್ವಭಾವ, ಹನುಮಂತನ ಶೌರ್ಯ,ಸಾಹಸ ಪ್ರಭು ಭಕ್ತಿ ,ರಾವಣನ ದುಷ್ಟತನ ದರ್ಪ , ಲಂಕಿಣಿಯ ಬದ್ಧತೆ , ದೂತನ ಹಾಸ್ಯ , ದುಃಖಭರಿತ ಸೀತೆ. ಹೀಗೆಪ್ರತಿಯೊಂದು ಪಾತ್ರವು ರಸವತ್ತಾಗಿ ಭಾವನಾತ್ಮಕವಾಗಿ ಮೂಡಿಬಂತು.
ಹನುಮಂತನ ಪ್ರಭು ಭಕ್ತಿ ಜನರಲ್ಲಿ ಭಕ್ತಿ ಭಾವವನ್ನು ಹೊರಹೊಮ್ಮಿ ಮಂತ್ರ ಮುಗ್ಧರನ್ನಾಗಿ ಮಾಡಿತು. ಕಾರ್ಯಕ್ರಮದ ಕೊನೆಯಲ್ಲಿ ಹಿಂದೂ ಸ್ವಯಂಸೇವಾ ಸಂಘದವರು ನೆರೆದಿರುವ ಕಲಾಭಿಮಾನಿಗಳಿಗೆ ಶ್ರೀ ರಾಮ ಪ್ರಾಣ ಪ್ರತಿಷ್ಠೆಯ ಅಕ್ಷತೆಯನ್ನು ಹಂಚಿದರು. ಮುಮ್ಮೇಳದಲ್ಲಿ ಹನುಮಂತನಾಗಿ ಶ್ರೀ ಅಜೀತ್ ಪ್ರಭು ತಲ್ಲೂರು, ರಾವಣನಾಗಿ ಶ್ರೀ ಅಪೂರ್ವ ಬೆಳೆಯೂರು, ಧೂತನಾಗಿ ಶ್ರೀ ಶಶಿಧರ ನಾಯರಿ , ಲಂಕಿಣಿಯಾಗಿ ಶ್ರೀ ಶ್ರೀಹರಿ ಹೊಸಮನೆ , ಸೀತೆಯಾಗಿ ಶ್ರೀಮತಿ ಸುಷ್ಮಾ ರವೀಂದ್ರ, ರಾಮನ ಪಾತ್ರದಲ್ಲಿ ಶ್ರೀ ಶ್ರೀಹರಿ ದೇವಜಿ . ಪ್ರತಿಯೊಬ್ಬ ಪಾತ್ರಧಾರಿಗಳು ನಟನೆ ನೃತ್ಯ ಸಂಭಾಷಣೆಯ ಮೂಲಕ ಪಾತ್ರಕ್ಕೆ ಜೀವತುಂಬಿ ಅಧ್ಬುತ ಪ್ರದರ್ಶನ ನೀಡಿದರು . ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆಯ ಮಳೆಗೆರೆದು ಕಲಾವಿದರಿಗೆ ಗೌರವ ಸೂಚಿಸಿದರು.
ಇದನ್ನೂ ಓದಿ: ಭಾರತರತ್ನದ ಗೌರವ ಹೆಚ್ಚಳ
ಕರ್ನಾಟಕದ ಪ್ರಾಚೀನ ಶ್ರೀಮಂತ ಸಾಂಪ್ರದಾಯಕ ಕಲಾ ಪ್ರಕಾರಗಳಲ್ಲಿ ಒಂದಾದ ಯಕ್ಷಗಾನ ಕಲೆಯನ್ನು ವಿದೇಶದಲ್ಲಿ ಶಾಸ್ತ್ರೀಯ ರೀತಿಯಲ್ಲೇ ಪ್ರದರ್ಶನ ನೀಡುತ್ತಿರುವ ಹೆಮ್ಮೆ ನಮ್ಮ ಯಕ್ಷಮಿತ್ರರು ತಂಡದವರಿಗೆ ಸಲ್ಲುತ್ತದೆ. ಯೂರೋಪಿನ ಹಲವೆಡೆ ಸುಮಾರು ಯಶಸ್ವಿ ಪ್ರದರ್ಶನಗಳನ್ನು ನೀಡಿರುತ್ತಾರೆ. ತಂಡದ ಕಿರುಪರಿಚಯ ಹೀಗಿದೆ ಶ್ರೀ ಅಜೀತ್ ಪ್ರಭು ತಲ್ಲೂರು, ಶ್ರೀ ಅಪೂರ್ವ ಬೆಳೆಯೂರು , ಶ್ರೀ ಶಶಿಧರ ನಾಯರಿ, ಶ್ರೀಮತಿ ಸುಷ್ಮಾ ರವೀಂದ್ರ, ಶ್ರೀ ಶ್ರೀಹರಿ ಹೊಸಮನೆ. ತಂಡದ ರೂವಾರಿಯಾದ ಶ್ರೀ ಅಜೀತ್ ಪ್ರಭು ತಲ್ಲೂರು ಅವರು ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ನೀಡುವ ಉದ್ದೇಶದಿಂದ ಪೂರ್ವರಂಗದ ಬಾಲಗೋಪಾಲರು ಮತ್ತು ಪೀಠಿಕಾ ಸ್ತ್ರೀವೇಷಧಾರಿಗಳಾಗಿ ಪುಟಾಣಿಗಳಿಗೆ ಅವಕಾಶ ನೀಡಿ ಹೆಜ್ಜೆಯನ್ನು ಕಲಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಕಲಾಪೋಷಕರಿಗೆ ಮತ್ತು ಸ್ವಯಂಸೇವಕರಿಗೆ ಧನ್ಯವಾದಸಮರ್ಪಣೆ ಗೈದು ಎರಡು ದಿನದ ಯಕ್ಷಸಂಕ್ರಾಂತಿ ಯಶಸ್ವಿಯಾಗಿ ಕೊನೆಗೊಂಡಿತು.
nri