

ನವದೆಹಲಿ: ದೇಶಾದ್ಯಂತ ಲಾಕ್ಡೌನ್ ನಿರ್ಬಂಧಗಳು ಕಡಿಮೆಯಾಗುತ್ತಿದ್ದರೂ ಕರೊನಾ ಭೀತಿ ನೀಗುತ್ತಿಲ್ಲ. ದಿನ ಕಳೆದಂತೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಜೂನ್ ವೇಳೆಗೆ ಅಂದಾಜು ಎರಡು ಲಕ್ಷ ಜನರು ಸೋಂಕಿಗೆ ಒಳಗಾಗುವ ಅಂದಾಜಿದೆ. ಸಾವಿನ ಸಂಖ್ಯೆಯು ಏರಲಿದೆ.
ಬೇರೆ ದೇಶಗಳಿಂದ ಚೀನಾ ಅದೆಷ್ಟೇ ಟೀಕೆಗಳಿಗೆ ಗುರಿಯಾದರೂ ಕರೊನಾ ನಿಯಂತ್ರಣ ವಿಚಾರದಲ್ಲಿ ಅವರನ್ನು ಸರಿಗಟ್ಟಲು ಸಾಧ್ಯವೇ ಇಲ್ಲವೇನೋ ಎಂಬಂತೆ ಅಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಚೀನಾದ ಪ್ರಮುಖ ವಾಣಿಜ್ಯ ಪ್ರದೇಶವೂ ಆಗಿರುವ ವುಹಾನ್ನಲ್ಲಿ ಕರೊನಾ ಕಾಣಿಸಿಕೊಂಡಾಗ ವಿಧಿಸಿದ ಲಾಕ್ಡೌನ್ಅನ್ನು ಅಷ್ಟೊಂದು ಕಟ್ಟುನಿಟ್ಟಾಗಿ ಬೇರಾರೂ ಪಾಲಿಸಿಯೇ ಇಲ್ಲವೇನೋ? ಇಡೀ ನಗರದ ರಸ್ತೆಗಳು ಎರಡೂವರೆ ತಿಂಗಳುಗಳ ಕಾಲ ನಿರ್ಜನವಾಗಿದ್ದವು. ಪ್ರತಿಯೊಬ್ಬರ ಮೇಲೂ ಕಣ್ಣಿಡಲಾಗಿತ್ತು. ಶಂಕಿತರು ಕ್ವಾರಂಟೈನ್ನಿಂದ ತಪ್ಪಿಸಿಕೊಳ್ಳದಂತೆ ನಿಗಾ ಇಟ್ಟಿದ್ದರು. ಸೋಂಕಿತರಿಗೆ ಐಸೋಲೇಷನ್, ಚಿಕಿತ್ಸೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಯಿತು.
ಕರೊನಾ ನಂತರದ ಪರಿಸ್ಥಿತಿ ಮೇಲೂ ಚೀನಾ ಎಷ್ಟೊಂದು ಕಣ್ಣಿಟ್ಟಿದೆ ಎಂಬುದಕ್ಕೆ ಇಲ್ಲಿದೆ ಸಾಕ್ಷಿ. ವುಹಾನ್ನಲ್ಲಿ ಕಳೆದ ವಾರಾಂತ್ಯದಲ್ಲಿ ಮತ್ತೆ ಆರು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದನ್ನು ಕ್ಲಸ್ಟರ್ ಪ್ರಕರಣವೆಂದು ಪರಿಗಣಿಸಿದ ಸರ್ಕಾರ ಇಡೀ ನಗರದಲ್ಲಿನ ಪ್ರತಿಯೊಬ್ಬರಿಗೂ ಕರೊನಾ ಪರೀಕ್ಷೆ ನಡೆಸುವಂತೆ ಆದೇಶಿಸಿದೆ.
ಗುರುವಾರ ( ಮೇ 14) ಸೋಂಕಿತರು ಕಂಡುಬಂದ ವಸತಿ ಸಮುಚ್ಚಯದಲ್ಲಿರುವ ಜನರ ಪರೀಕ್ಷೆ ಆರಂಭಿಸಲಾಗಿದೆ. ವುಹಾನ್ನಲ್ಲಿ 110 ಲಕ್ಷ ಜನರಿದ್ದಾರೆ. ಹತ್ತು ದಿನಗಳ ಒಳಗಾಗಿ ಎಲ್ಲರ ಪರೀಕ್ಷೆ ನಡೆಸುವ ಅಸಾಧ್ಯವೆನಿಸುವ ಕೆಲಸಕ್ಕೆ ಕೈ ಹಾಕಿದೆ ಚೀನಾ ಸರ್ಕಾರ.
ಕರೊನಾ ಕಾಣಿಸಿಕೊಂಡ ಮೂರು ತಿಂಗಳ ಬಳಿಕ ಭಾರತಕ್ಕೆ ಪ್ರತಿದಿನ ಒಂದು ಲಕ್ಷ ಜನರಿಗೆ ಕರೊನಾ ಪರೀಕ್ಷೆ ಮಾಡುವ ಸಾಮರ್ಥ್ಯ ಬಂದಿದೆ. ಅಂಥದ್ದರಲ್ಲಿ ವುಹಾನ್ ಒಂದರಲ್ಲಿಯೇ ಪ್ರತಿದಿನ 10 ಲಕ್ಷಕ್ಕೂ ಅಧಿಕ ಜನರ ಪರೀಕ್ಷೆ ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ. ಪ್ರತಿಯೊಬ್ಬರನ್ನು ಪರೀಕ್ಷೆಗೆ ಒಳಪಡಿಸಬೇಕೆಂದು ಸರ್ಕಾರ ಆದೇಶ ಹೊರಡಿಸಿರುವುದನ್ನು ಸ್ಥಳೀಯಾಡಳಿತ ಖಚಿತ ಪಡಿಸಿದೆ.
ಚೀನಾದಲ್ಲಿ ವರದಿಯಾದ ಕರೊನಾ ಪ್ರಕರಣಗಳ ಪೈಕಿ ಶೇ.90ಕ್ಕೂ ಅಧಿಕ ಪ್ರಕರಣಗಳು ವುಹಾನ್ನಿಂದಲೇ ವರದಿಯಾಗಿದ್ದವು. 4,500ಕ್ಕೂ ಅಧಿಕ ಸಾವುಗಳಲ್ಲಿ ವುಹಾನ್ನಲ್ಲಿ 3800ಕ್ಕೂ ಅಧಿಕ ಜನರು ಕೋವಿಡ್ಗೆ ಬಲಿಯಾಗಿದ್ದರು.