

ಮುಂಬೈ: ಕರೊನಾ ವೈರಸ್ ಜಗತ್ತಿಗೆ ಹರಡಿದ್ದು ಚೀನಾದಿಂದಲೇ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ವುಹಾನ್ನ ವೈರಾಲಜಿ ಪ್ರಯೋಗಾಲಯದಿಂದ ಸೋರಿಕೆಯಾಗಿದೆ ಎಂದು ಅಮೆರಿಕ ನಿರಂತರವಾಗಿ ವಾದಿಸುತ್ತಲೇ ಬಂದಿದೆ. ಇದರಿಂದ ಉಂಟಾದ ನಷ್ಟವನ್ನು ಭರಿಸಬೇಕೆಂದು ಟ್ರಂಪ್ ಆಗ್ರಹಿಸುತ್ತಲೇ ಇದ್ದಾರೆ.
ಇದೀಗ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ನೀಡಿರುವ ಹೇಳಿಕೆ ಕೂಡ ಈ ವಾದಕ್ಕೆ ಬೆಂಬಲ ನೀಡುವಂತಿದೆ. ಕೋವಿಡ್-19ಗೆ ಕಾರಣವಾದ ಕರೊನಾ 'ಕೃತಕ ವೈರಸ್, ಸ್ವಾಭಾವಿಕವಲ್ಲ' ಎಂದು ಹೇಳಿದ್ದಾರೆ.
ಕರೊನಾ ವೈರಸ್ ನೈಸರ್ಗಿಕವಲ್ಲ, ಅದನ್ನು ಪ್ರಯೋಗಾಲಯವೊಂದರಲ್ಲಿ ಸಿದ್ಧಪಡಿಸಲಾಗಿದೆ. ಇದರೊಂದಿಗೆ ಬದುಕಲು ನಾವು ಕಲಿಯಬೇಕಾಗಿದೆ. ಅಂಥ ಜೀವನ ವಿಧಾನವನ್ನು ರೂಪಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಏಕೆಂದರೆ, ಇದನ್ನು ಕೃತಕವಾಗಿ ರೂಪಿಸಲಾಗಿದೆ. ಜಗತ್ತಿನ ಹಲವು ದೇಶಗಳು ಈ ವೈರಸ್ ನಿರ್ಮೂಲನೆಗೆ ಲಸಿಕೆ ಸಂಶೋಧಿಸುವ ಕಾರ್ಯದಲ್ಲಿ ತೊಡಗಿವೆ ಎಂದು ಗಡ್ಕರಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಈ ಮೂಲಕ ಭಾರತ ಇದೇ ಮೊದಲ ಬಾರಿಗೆ ಮಾರಣಾಂತಿಕ ವೈರಸ್ನ ಮೂಲದ ಬಗ್ಗೆ ಪ್ರತಿಕ್ರಿಯಿಸಿದಂತಾಗಿದೆ. ಅದರಲ್ಲೂ ಕೇಂದ್ರ ಸಚಿವರೊಬ್ಬರು ಪ್ರತಿಕ್ರಿಯೆ ನೀಡಿರುವುದು ಗಮನಾರ್ಹವಾಗಿದೆ. ಏಕೆಂದರೆ, ಪ್ರಮುಖ ದೇಶಗಳು ಕರೊನಾ ವೈರಸ್ ವುಹಾನ್ ಪ್ರಯೋಗಾಲಯದಿಂದಲೇ ಜನ್ಮ ತಾಳಿದೆ ಎಂದು ಆರೋಪಿಸಿವೆ.
ಇಡೀ ಜಗತ್ತಿನಂತೆ ಭಾರತವೂ ಕೂಡ ಈ ವೈರಸ್ ನಿಗ್ರಹಿಸಲು ಸಜ್ಜಾಗಿದೆ. ಈ ಕಾಯಿಲೆಗೆ ಆದಷ್ಟು ಬೇಗ ಲಸಿಕೆ ಕಂಡು ಹಿಡಿಯಲಾಗುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.