

ಬೆಂಗಳೂರು: 'ಸೂಪರ್ಸ್ಪ್ರೆಡರ್' ಹಣೆಪಟ್ಟಿಯೊಂದಿಗೆ ಕರೊನಾ ಹಂಚಿದ ಕುಖ್ಯಾತಿಗೆ ಕಾರಣವಾಗಿದ್ದ ಮೈಸೂರು ಜಿಲ್ಲೆ ನಂಜನಗೂಡಿನ ಜುಬಿಲೆಂಟ್ ಲೈಫ್ ಸೈನ್ಸ್ ಔಷಧ ಕಾರ್ಖಾನೆಯಲ್ಲಿ ಕರೊನಾಗೆ ಲಸಿಕೆ ಸಿದ್ಧವಾಗಲಿದೆ.
ಅಮೆರಿಕದ ಗಿಲಿಯಾಡ್ ಸೈನ್ಸ್ ಕಂಪನಿಯೊಂದಿಗೆ ಜುಬಿಲೆಂಟ್ ಈಗಾಗಲೇ ನಾನ್-ಎಕ್ಸ್ಕ್ಲುಸಿವ್ ಲೈಸೆನ್ಸಿಂಗ್ ಒಪ್ಪಂದಕ್ಕೆ ಸಹಿ ಹಾಕಿದೆ. ಗಿಲಿಯಾಡ್ನ 'ರೆಮ್ಡೆಸಿವಿರ್' ಲಸಿಕೆಯನ್ನು ಭಾರತವೂ ಸೇರಿ 127 ದೇಶಗಳಲ್ಲಿ ಮಾರಾಟ ಹಾಗೂ ತಯಾರಿಕೆ ಹಕ್ಕುಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ; ಜಗತ್ತಿನ ಅತಿ ದುಬಾರಿ ಲಸಿಕೆಯಾಗಲಿದೆಯೇ ಕರೊನಾ ಔಷಧ ?
ರೆಮ್ಡೆಸಿವಿರ್ ಲಸಿಕೆಯನ್ನು ಚೀನಾದಲ್ಲಿ ಕರೊನಾ ಸೋಂಕಿತರ ಮೇಲೆ ಬಳಸಲಾಗಿತ್ತು. ರೋಗಿಗಳು ಚೇತರಿಸಿಕೊಳ್ಳುವ ಅವಧಿಯನ್ನು ಈ ಲಸಿಕೆ ಗಮನಾರ್ಹವಾಗಿ ಕಡಿಮೆಗೊಳಿಸಿದೆ ಎಂಬುದು ಅಧ್ಯಯನದಲ್ಲಿ ಗೊತ್ತಾಗಿತ್ತು. ಹೀಗಾಗಿ ಕೋವಿಡ್-19 ಪೀಡಿತರಿಗೆ ರೆಮ್ಡೆಸಿವಿರ್ ಲಸಿಕೆಯನ್ನು ಬಳಸಬಹುದು ಎಂದು ಅಮೆರಿಕದ ಆಹಾರ ಮತ್ತು ಔಷಧ ಇಲಾಖೆ ಶಿಫಾರಸು ಮಾಡಿದೆ.
ಜುಬಿಲೆಂಟ್ ಈ ಲಸಿಕೆಯನ್ನು ಬಹುತೇಕ ಎಲ್ಲ ಕಡಿಮೆ ಆದಾಯದ ಹಾಗೂ ಮಧ್ಯಮ ಆದಾಯದ ದೇಶಗಳಲ್ಲಿ ಹಾಗೂ ಕೆಲ ಮುಂದುವರಿದ ರಾಷ್ಟ್ರಗಳಲ್ಲೂ ತಯಾರಿಸಿ ಮಾರಾಟ ಮಾಡುವ ಹಕ್ಕುಗಳನ್ನು ಪಡೆದುಕೊಂಡಿದೆ. ಭಾರತದಲ್ಲಿ ರೆಮ್ಡೆಸಿವಿರ್ ಲಸಿಕೆ ಉತ್ಪಾದನೆಗೆ ಸಂಬಂಧಿಸಿದಂತೆ ದೀರ್ಘಕಾಲಿಕ ಪರವಾನಗಿ ಒಪ್ಪಂದಗಳನ್ನು ಮಾಡಿಕೊಳ್ಳಲು ಹಲವು ಕಂಪನಿಗಳೊಂದಿಗೆ ಮಾತುಕತೆ ನಡೆಸಿರುವುದಾಗಿ ಗಿಲಿಯಾಡ್ ಇತ್ತೀಚೆಗಷ್ಟೇ ಮಾಹಿತಿ ನೀಡಿತ್ತು.
ಸದ್ಯ ಕೋವಿಡ್ಗೆ ಯಾವುದೇ ಔಷಧ ತಯಾರಾಗದ ಹಿನ್ನೆಲೆಯಲ್ಲಿ ಈ ಲಸಿಕೆಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಈ ಕಾರಣದಿಂದಾಗಿ 2022ರ ವೇಳೆಗೆ ಎಲ್ಲ ರಾಷ್ಟ್ರಗಳಲ್ಲೂ ರೆಮ್ಡೆಸಿವಿರ್ ಉತ್ಪಾದನೆಗೆ ಗಿಲಿಯಾಡ್ ಕಂಪನಿ ಮುಂದಾಗಿದೆ.