

ನವದೆಹಲಿ: ವಿಶಿಷ್ಠ ಗುರುತಿನ ಸಂಖ್ಯೆ ಆಧಾರ್ ಜಾರಿಯಾದಾಗ ಅದರ ಬಗ್ಗೆ ಮೂಗು ಮುರಿದವರೇ ಹೆಚ್ಚು. ರಾಜಕೀಯ ಪಕ್ಷಗಳಲ್ಲಂತೂ ಇದರ ವಿರೋಧದಲ್ಲಿ ಬೀದಿಗಿಳಿದು ಹೋರಾಡಿದವು. ಬಳಿಕ ಆಧಾರ್ ಜೋಡಣೆಯಿಂದ ಸಾವಿರಾರು ಕೋಟಿ ರೂ.ಗಳ ಅಕ್ರಮಕ್ಕೆ ಕಡಿವಾಣ ಹಾಕಲಾಗಿದೆ ಎಂದು ಬೆನ್ನು ತಟ್ಟಿಕೊಂಡವು.
ಪ್ರಸ್ತುತ ಇಂಥದ್ದೇ ಚರ್ಚೆಗೆ ಕಾರಣವಾಗಿರುವುದು ಆರೋಗ್ಯ ಸೇತು ಆ್ಯಪ್. ಕರೊನಾ ಸೋಂಕು ತಡೆಗಟ್ಟಲು, ವ್ಯಾಪಿಸುವುದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಈ ಆ್ಯಪ್ ರೂಪಿಸಿದೆ. ಈಗಾಗಲೇ, ಕೇಂದ್ರ ಸರ್ಕಾರಿ ನೌಕರರು ತಮ್ಮ ಸ್ಮಾರ್ಟ್ಫೋನ್ನಲ್ಲಿ ಈ ಆ್ಯಪ್ ಹೊಂದುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಜತೆಗೆ, ವಿಶೇಷ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರೂ ಕೂಡ ಆ್ಯಪ್ ಹೊಂದಿರಲೇಬೇಕು ಎಂದು ರೈಲ್ವೆ ಇಲಾಖೆ ಸುತ್ತೋಲೆ ಹೊರಡಿಸಿದೆ.
ಇದಲ್ಲದೇ. ಅಂತಾರಾಜ್ಯ ಪ್ರಯಾಣಿಕರು ಸೋಂಕಿತರಲ್ಲ, ಸುರಕ್ಷಿತವಾಗಿದ್ದಾರೆ ಎನ್ನುವುದನ್ನು ಈ ಆ್ಯಪ್ ಮೂಲಕ ಪತ್ತೆ ಹಚ್ಚಬಹುದು. ಹೀಗಾಗಿ ಪ್ರಯಾಣದ ವೇಳೆ ಈ ಆ್ಯಪ್ ಹೊಂದಿರುವುದು ಸುರಕ್ಷಿತವೂ ಹೌದು. ಜತೆಗೆ ನಿಮಗೆ ಇ-ಪಾಸ್ ನೀಡಲು ಈ ಆ್ಯಪ್ ಹೊಂದಿರಲೇಬೇಕೆಂದು ಹಲವು ರಾಜ್ಯಗಳು ಆದೇಶಿಸಿವೆ. ಲಾಕ್ಡೌನ್ ಅವಧಿ ಮುಗಿದ ಬಳಿಕವೂ ಪ್ರಯಾಣಕ್ಕೆ ಇ-ಪಾಸ್ ಕಡ್ಡಾಯವಾಗಲಿದೆ. ಇದಕ್ಕೆ ಆರೋಗ್ಯ ಸೇತು ಆ್ಯಪ್ ಆಧಾರವಾಗಲಿದೆ.
ಈ ಎಲ್ಲ ಕಾರಣದಿಂದಾಗಿ ಆರೋಗ್ಯ ಸೇತು ಆ್ಯಪ್ ಅಥವಾ ಇದರ ಸುಧಾರಿತ ಆವೃತ್ತಿ ವ್ಯಕ್ತಿಗೆ ಆಧಾರ ಸಂಖ್ಯೆಯಷ್ಟೇ ಮುಖ್ಯವಾಗುವುದರಲ್ಲಿ ಸಂದೇಹವೇ ಇಲ್ಲ.
ಇದನ್ನೂ ಓದಿ; ನಂಜನಗೂಡಿನಲ್ಲಿ ತಯಾರಾಗಲಿದೆ ಕರೊನಾಗೆ ಔಷಧ…!
ಚೀನಾದಲ್ಲಿ ಇಂಥದ್ದೇ ಕಾರ್ಯ ನಿರ್ವಹಿಸುವ ಆ್ಯಪ್ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಹೊಂದಿಲ್ಲದಿದ್ದರೆ, ನೀವೂ ಎಲ್ಲಿಗೂ ಹೋಗುವಂತಿಲ್ಲ. ಆಫೀಸ್, ಶಾಪಿಂಗ್ ಮಾಲ್, ಸಾರ್ವಜನಿಕ ಸ್ಥಳಗಳಿಗೆ ಹೋಗಬೇಕೆಂದರೆ ಈ ಆ್ಯಪ್ ಹೊಂದಿರಲೇಬೇಕು. ಅಲ್ಲೆಲ್ಲ ಪ್ರವೇಶಿಸಲು ಇದು ಇ-ಪಾಸ್ನಂತೆ ಕಾರ್ಯ ನಿರ್ವಹಿಸುತ್ತದೆ. ನೀವು ಸುರಕ್ಷಿತವಾಗಿದ್ದರೆ ಆ್ಯಪ್ನಲ್ಲಿರುವ ಕ್ಯೂರ್ ಕೋಡ್ ಹಸಿರು ಬಣ್ಣ ತೋರಿಸುತ್ತದೆ. ಅದು ಕೆಂಪು ಬಣ್ಣಕ್ಕೆ ತಿರುಗಿದರೆ ಮನೆಯಿಂದ ಹೊರಬರುವಂತಿಲ್ಲ. ಅಷ್ಟೊಂದು ಕಟ್ಟುನಿಟ್ಟು ಚೀನಾದಲ್ಲಿದೆ.
ದಿನ ಕಳೆದಂತೆ ಆರೋಗ್ಯ ಸೇತು ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಆರೋಗ್ಯಕರ ಸಂಗತಿ. ಏಪ್ರಿಲ್ 2ರಂದು ಈ ಆ್ಯಪ್ ಬಿಡುಗಡೆ ಮಾಡಲಾಗಿತ್ತು. ಆರಂಭದ ಮೂರು ದಿನಗಳಲ್ಲಿಯೇ ಅಂದಾಜು 5 ಕೋಟಿ ಜನರು ಈ ಆ್ಯಪ್ ಡೌನ್ ಮಾಡಿಕೊಂಡಿದ್ದು ದಾಖಲೆಯಾಗಿತ್ತು. ಇದೀಗ 13 ದಿನಗಳಲ್ಲಿ 10 ಕೋಟಿ ಜನರು ಈ ಆ್ಯಪ್ ಬಳಸುತ್ತಿದ್ದಾರೆ. ಇಷ್ಟು ಕಡಿಮೆ ಸಮಯದಲ್ಲಿ ಈ ಪ್ರಮಾಣದಲ್ಲಿ ಈ ಆ್ಯಪ್ ಬಳಕೆಯಾಗುತ್ತಿರುವುದು ಕೂಡ ದಾಖಲೆಯಾಗಿದೆ.
ಹೀಗಿದ್ದ ಮೇಲೆ ಇದಕ್ಕೆ ವಿರೋಧವೂ ವ್ಯಕ್ತವಾಗಿಲ್ಲವೇ ಎಂದು ಕೇಳಬಹುದು. ಹೌದು ವಿರೋಧವೂ ವ್ಯಕ್ತವಾಗಿದೆ. ಆರೋಗ್ಯ ಸೇತು ಆ್ಯಪ್ ಕಡ್ಡಾಯಗೊಳಿಸುವುದು ಕಾನೂನುಬಾಹಿರ. ಇದರಿಂದ ವ್ಯಕ್ತಿಯ ಖಾಸಗೀತನದ ಹಕ್ಕಿಗೆ ಧಕ್ಕೆಯಾಗಲಿದೆ ಎಂದು ಸುಪ್ರಿಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ಹೇಳಿಕೆ ನೀಡಿದ್ದಾರೆ. ಹೀಗಾಗಿ ಈ ವಿಚಾರ ಕೋರ್ಟ್ ಮೆಟ್ಟಿಲೇರಿದರೂ ಅಚ್ಚರಿಯಿಲ್ಲ.
ಒಂದಂತೂ ನಿಜ ನಮ್ಮ ಸ್ಮಾರ್ಟ್ಫೋನ್ಗಳಲ್ಲಿರುವ ಅಷ್ಟೂ ಆ್ಯಪ್ಗಳಿಂದ ನಮ್ಮೆಲ್ಲ ಖಾಸಗಿ ಮಾಹಿತಿಗಳು, ನಿತ್ಯದ ಚಟುವಟಿಕೆಗಳ ವಿವರವೆಲ್ಲ ಆಯಾ ಕಂಪನಿಗಳ ಸರ್ವರ್ಗಳಲ್ಲಿ ದಾಖಲಾಗುತ್ತವೆ. ಆರೋಗ್ಯ ಸೇತು ಆ್ಯಪ್ ಅದಕ್ಕೆ ಹೊರತೇನಲ್ಲ
ಆ್ಯಪ್ ಕಾರ್ಯನಿರ್ವಹಣೆ ಹೇಗೆ?: ಈ ಆ್ಯಪ್ ಡೌನ್ಮಾಡಿಕೊಂಡ ಬಳಿಕ ನಿಮ್ಮ ವ್ಯಕ್ತಿಗತ ವಿವರಗಳನ್ನು ದಾಖಲಿಸಬೇಕಾಗುತ್ತದೆ. ನಿಮ್ಮ ಟ್ರಾವೆಲ್ ಹಿಸ್ಟರಿ ನೀಡಬೇಕಾಗುತ್ತದೆ. ನೀವೇನಾದರೂ ಸೋಂಕಿತರ ಸಂಪರ್ಕಕಕ್ಕೆ ಬಂದರೆ ಅವರಿಂದ ದೂರವಿರುವಂತೆ ಇದು ನಿಮ್ಮನ್ನು ಎಚ್ಚರಿಸುತ್ತದೆ.